Advertisement

ಕೇಂದ್ರದ ಸಾಧನೆಯನ್ನು ಜನರಿಗೆ ತಿಳಿಸಿ

12:45 PM May 24, 2017 | |

ಹುಣಸೂರು: ಸರ್ವೆಯೊಂದರ ಪ್ರಕಾರ ರಾಷ್ಟ್ರದಲ್ಲಿ ಈಗ ಚುನಾವಣೆ ನಡೆದರೂ ಎನ್‌ಡಿಎ ಮೈತ್ರಿಕೂಟ 331 ಸ್ಥಾನಗಳಿಸಲಿದೆ ಎಂಬ ಮಾಹಿತಿ ಇದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಮೈಸೂರು-ಚಾಮರಾಜನಗರ ಜಿಲ್ಲೆಯಲ್ಲಿ 10ಕ್ಕೂ ಅಧಿಕ ಸ್ಥಾನಗಳಿಸಲಿದ್ದು, ಕಾರ್ಯಕರ್ತರು ಒಗ್ಗಟ್ಟಿನಿಂದ ಇಂದಿನಿಂದಲೇ ನಮ್ಮ ಸರ್ಕಾರದ ಸಾಧನೆ ಹಾಗೂ ರಾಜ್ಯ ಸರಕಾರದ ವೈಫ‌ಲ್ಯ ಜನರಿಗೆ ಮುಟ್ಟಿಸುವಲ್ಲಿ ಕಾರ್ಯಪ್ರವತ್ತರಾಗಿ ಎಂದು ಸಂಸದ ಪ್ರತಾಪಸಿಂಹ ಸೂಚಿಸಿದರು.

Advertisement

ನಗರದ ವಜ್ರಮ್ಮ ನಾಗರಾಜಶ್ರೇಷ್ಠಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಮೈಸೂರು ಜಿಲ್ಲಾ ಗ್ರಾಮಾಂತರ ಬಿಜೆಪಿ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿ, ಪ್ರತಿ ಚುನಾವಣೆಯಲ್ಲೂ ಚುನಾವಣಾ ಸಮೀಕ್ಷೆ ಮೀರಿ ಪಕ್ಷ ಉತ್ತಮ ಫ‌ಲಿತಾಂಶಗಳಿಸಿದೆ. ಮೋದಿ, ಅಮಿತ್‌ ಶಾ, ಯಡಿಯೂರಪ್ಪ ಈ ಮೂರು ಶಕ್ತಿಗಳು ರಾಜ್ಯದ ಮುಂದಿನ ಚುನಾವಣೆಯಲ್ಲಿ ಬಿಜೆಪಿ ವಿಷನ್‌ 150+ರ ಕನಸನ್ನು ಸಾಕಾರಗೊಳಿಸಲಿದ್ದು, ಮೋದಿ ಸರಕಾರದ ಸಾಧನೆ ಹಾಗೂ ರಾಜ್ಯ ಸರಕಾರದ ವೈಫ‌ಲ್ಯಗಳನ್ನು ಮುಂದಿಟ್ಟು ಪಕ್ಷದ ಕಾರ್ಯಕರ್ತರು ಸಂಘಟನೆಗೆ ಒತ್ತು ನೀಡಬೇಕು ಎಂದರು.

ಅಮಿತ್‌ ಶಾ ಅವರು ಪಕ್ಷ ಅಧಿಕಾರದಲ್ಲಿಲ್ಲದ ರಾಜ್ಯಗಳಲ್ಲಿ 93 ದಿನದ ಸಂಘಟನಾ ಪ್ರವಾಸ ಹಮ್ಮಿಕೊಂಡಿದ್ದು, ಎಲ್ಲೆಡೆ ಬಿಜೆಪಿ ರಾರಾಜಿಸುವಂತೆ ಮಾಡುವಲ್ಲಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಇದನ್ನು ಪಕ್ಷದ ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿಗೆ ಅಧಿಕಾರಗಳಿಸುತ್ತಿದ್ದಂತೆ ನಮ್ಮ ಪಕ್ಷದ ಕಾರ್ಯಕರ್ತರು ವಿರೋಧ ಪಕ್ಷದಂತೆ ಕಾರ್ಯ ನಿರ್ವಹಿಸುತ್ತಾರೆ. ಈ ಮನೋಸ್ಥಿತಿ ಬದಲಾಗಬೇಕು,  ಜೊತೆಗೆ ನಮ್ಮ ಸರಕಾರದ ಸಾಧನೆಗಳನ್ನು ಜನರಿಗೆ ಮುಟ್ಟಿಸುವ ಹಾಗೂ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಛಾತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

224 ಕ್ಷೇತ್ರಗಳಲ್ಲೂ ಚುನಾವಣಾ ಆಯೋಗ ನಿಗಾವಹಿಸಲಿದ್ದು ಅಕ್ರಮಕ್ಕೆ ಕಡಿವಾಣ ಬೀಳಲಿದೆ, ಪಕ್ಷಕ್ಕೆ ಅಧಿಕಾರ ಸಿಗುವುದರಲ್ಲಿ ಅನುಮಾನವಿಲ್ಲ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ 15ರಲ್ಲಿ 10 ಕೊಡಗಿನ ಮೂರು ಸ್ಥಾನಗಳಲ್ಲಿ ಗೆಲ್ಲುವ ಅವಕಾಶವಿದ್ದು ಇಂದಿನಿಂದಲೇ ಕಾರ್ಯಪ್ರವತ್ತಿರಾಗಿ ಎಂದರು.

ಕೇಂದ್ರ ಸರ್ಕಾರ ಬೆಂಗಳೂರು-ಮೈಸೂರು ಹೆದ್ದಾರಿ 4 ಪಥದ ರಸ್ತೆಗೆ 3600 ಕೋಟಿ ರೂ  ಅನುದಾನ ಬಿಡುಗಡೆಯಾಗಿದ್ದರೂ ಇನ್ನೂ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿಲ್ಲ. ಅಲ್ಲದೆ ಕೇಂದ್ರದ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫ‌ಲವಾಗಿದ್ದು, ಈ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕೆಂದು ಆಶಿಸಿದರು.

Advertisement

ಜಿಲ್ಲಾಧ್ಯಕ್ಷ ಎಂ.ಶಿವಣ್ಣ ಮಾತನಾಡಿ, 2018ರ ಚುನಾವಣೆಯಲ್ಲಿ ಸರಕಾರ ಅಸ್ಥಿತ್ವಕ್ಕೆ ತರಲು ಅದರಲ್ಲೂ ಮೈಸೂರು ಭಾಗದಿಂದ ಹೆಚ್ಚಿನ ಶಾಸಕರು ಆಯ್ಕೆ ಮಾಡಿಕೊಳ್ಳುವಲ್ಲಿ ನಮ್ಮ ಜವಾಬ್ದಾರಿ ಹೆಚ್ಚಿದೆ. ಇದಕ್ಕಾಗಿ ಬೂತ್‌ ಮಟ್ಟದಲ್ಲಿ ಸದಸ್ಯರ ನೇಮಕ, ಶಕ್ತಿ ಕೇಂದ್ರ ಬಲಪಡಿಸುವುದು, ಎಲ್ಲ ತಾಲೂಕುಗಳಲ್ಲೂ ಕಾರ್ಯಕರ್ತರ ಸಭೆ ನಡೆಸಿ ಪಕ್ಷ ಬಲಪಡಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ಹುಣಸೂರು ತಾಲೂಕು ಅಧ್ಯಕ್ಷ ಯೋಗಾನಂದಕುಮಾರ್‌, ರಾಜ್ಯ ಎಸ್ಸಿ ಮೋರ್ಚಾ ಉಪಾಧ್ಯಕ್ಷ ನಾಗರಾಜಮಲ್ಲಾಡಿ, ಮಾಜಿ ಸಚಿವ ವಿಜಯಶಂಕರ್‌, ಪುಟ್ಟಬುದ್ದಿ, ಸಿ.ರಮೇಶ್‌, ಎ.ಆರ್‌.ಕಷ್ಣಮೂರ್ತಿ, ನಗರಾಧ್ಯಕ್ಷ ರಾಜೇಂದ್ರ, ಪಕ್ಷದ ಮುಖಂಡರಾದ ಹೇಮಂತ್‌ಕುಮಾರ್‌, ವೆಂಕಟಸ್ವಾಮಿ, ಮಂಗಳ, ತಂಬಾಕು ಮಂಡಳಿ ಉಪಾಧ್ಯಕ್ಷ ಬಸವರಾಜಪ್ಪ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next