Advertisement

ದೂರವಾಣಿ ಕದ್ದಾಲಿಕೆ: ಮುಂದುವರಿದ ವಾಕ್ಸಮರ

07:56 AM Sep 21, 2017 | |

ಬೆಂಗಳೂರು: ದೂರವಾಣಿ ಕದ್ದಾಲಿಕೆ ವಿಚಾರದಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ಬುಧವಾರವೂ ಪರಸ್ಪರ ಕೆಸರೆರಚಾಟ ಮುಂದುವರಿದಿದೆ.

Advertisement

ಸ್ಪಷ್ಟ ಮಾಹಿತಿ: ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ವಿಧಾನಸಭೆ ಪ್ರತಿಪಕ್ಷ ಉಪನಾಯಕ ಆರ್‌.ಅಶೋಕ್‌ ಮಾತನಾಡಿ, “ಪ್ರತಿಪಕ್ಷಗಳಾದ ಜೆಡಿಎಸ್‌ ಮತ್ತು ಬಿಜೆಪಿಯ ಚುನಾವಣಾ ತಂತ್ರಗಳನ್ನು ತಿಳಿದುಕೊಳ್ಳಲು ರಾಜ್ಯ ಸರ್ಕಾರ ದೂರವಾಣಿ ಕದ್ದಾಲಿಸುತ್ತಿರುವ ಬಗ್ಗೆ ನಮಗೆ ಸ್ಪಷ್ಟ ಮಾಹಿತಿಯಿದೆ. ಬಿಜೆಪಿ ನಾಯಕರು ಪ್ರಚಾರಕ್ಕೆ ತೆರಳದಂತೆ ತಡೆಯಲು ಇಲ್ಲದ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ’ ಎಂದು ವಾಗ್ಧಾಳಿ ನಡೆಸಿದರು. “ಈ ಹಿಂದೆ ರಾಮಕೃಷ್ಣ ಹೆಗಡೆಯವರ ಮೇಲೆ ದೂರವಾಣಿ
ಕದ್ದಾಲಿಕೆ ಆರೋಪ ಬಂದಾಗ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಿದ್ದರು. ಅದರಂತೆ ನ್ಯಾಯಸಮ್ಮತ 
ತನಿಖೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು. 

ಕೇಂದ್ರದಿಂದ ಕದ್ದಾಲಿಕೆ: ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, “ರಾಜ್ಯ ಸರಕಾರಕ್ಕೆ ಬಿಜೆಪಿಯವರ ದೂರವಾಣಿ ಕದ್ದಾಲಿಸುವ ಅಗತ್ಯವಿಲ್ಲ. ಆದರೆ, ಕೇಂದ್ರ ಸರ್ಕಾರ ರಾಜ್ಯದ ಕೆಲವು ಸಚಿವರ ದೂರವಾಣಿ ಕದ್ದಾಲಿಸುತ್ತಿರುವುದು ಮೊದಲೇ ಮಾಹಿತಿ ಇದ್ದರೂ ಸುಮ್ಮನಿದ್ದೆವು. ಕದ್ದಾಲಿಕೆ ನಿಲ್ಲಿಸುವಂತೆ ಕೇಂದ್ರಕ್ಕೆ ಪತ್ರ ಬರೆಯಲಾಗುವುದು’ ಎಂದು ಹೇಳಿದರು.

ಬಾಯಿಮುಚ್ಚಿಸುವ ಯತ್ನ: “ರಾಜ್ಯ ಸರಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಹೋರಾಡುತ್ತಿದೆ. ಇದರಿಂದ ಕೆಲ ಕಾಂಗ್ರೆಸ್‌
ನಾಯಕರಿಗೆ ಜೈಲಿನ ಭಯ ಕಾಡುತ್ತಿದೆ. ಈ ಕಾರಣದಿಂದ ಬಿಜೆಪಿ ನಾಯಕರ ದೂರವಾಣಿ ಕದ್ದಾಲಿಸಿ, ಬಾಯಿ ಮುಚ್ಚಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಕೂಡಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಮಂಗಳೂರಿನಲ್ಲಿ ಒತ್ತಾಯಿಸಿದ್ದಾರೆ.

ದಾಖಲೆ ಇದ್ದರೆ ನೀಡಲಿ: ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, “ರಾಜ್ಯ ಸರ್ಕಾರ ಬಿಜೆಪಿ ನಾಯಕರ ದೂರವಾಣಿ ಕದ್ದಾಲಿಸುತ್ತಿಲ್ಲ. ಗುಪ್ತಚರ ಇಲಾಖೆ ಮಹತ್ವದ ತನಿಖೆಗೆ ಸಂಬಂಧಿಸಿದಂತೆ ಕೆಲವರ ದೂರವಾಣಿ ಕರೆ ರೆಕಾರ್ಡ್‌ ಮಾಡಿಕೊಳ್ಳುತ್ತದೆ. ಈ ಕುರಿತು ಸ್ವತಃ ಮುಖ್ಯಮಂತ್ರಿಯವರೇ ಸ್ಪಷ್ಟೀಕರಣ ನೀಡಿದ್ದಾರೆ. ಬಿಜೆಪಿಯವರ ಬಳಿ ಈ ಕುರಿತು ದಾಖಲೆಗಳಿದ್ದರೆ ನೀಡಲಿ’ ಎಂದು ಸವಾಲು ಹಾಕಿದರು.

Advertisement

ಆರೋಪವಿದ್ದರೆ ಪಟ್ಟಿ ಬಿಡುಗಡೆ ಮಾಡಲಿ: ಸಿಎಂ
ಕೋಲಾರ: “ಹೈಕೋರ್ಟ್‌ನಿಂದ ಸುಪ್ರೀಂಕೋರ್ಟ್‌ ವರೆಗೂ ಪ್ರಕರಣಗಳನ್ನು ಎದುರಿಸುತ್ತಿರುವವರು ನನ್ನ ವಿರುದ್ಧ ಆರೋಪ ಪಟ್ಟಿ ಇದ್ದರೆ ಬಿಡುಗಡೆ ಮಾಡಲಿ’ ಎನ್ನುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ನೇರ ಸವಾಲು ಹಾಕಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ 150 ಸೀಟು ಬರುತ್ತವೆ ಎಂದು ಜೇಬಿನಲ್ಲಿ ಚೀಟಿ ಇಟ್ಟುಕೊಂಡು ಓಡಾಡುತ್ತಿರುವ ಯಡಿಯೂರಪ್ಪ ಹಗಲುಗನಸು ಕಾಣುತ್ತಿದ್ದಾರೆ. ಅವರು ತಿಪ್ಪರಲಾಗ ಹಾಕಿದರೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲ್ಲ ಎಂದರು. 

ಸುಳ್ಳು ಹೇಳುವುದನ್ನೇ ಅಭ್ಯಾಸ ಮಾಡಿಕೊಂಡಿರುವ ಯಡಿಯೂರಪ್ಪಗೆ ನೈತಿಕತೆ ಇಲ್ಲ. ಬಿಜೆಪಿಯವರೇ ನಮ್ಮ ಸಚಿವರು, ಅಧಿಕಾರಿಗಳ ಫೋನ್‌ ಕದ್ದಾಲಿಕೆ ಮಾಡುತ್ತಿದ್ದಾರೆ. ಪೋನ್‌ ಕದ್ದಾಲಿಕೆ ಬಿಜೆಪಿ ಸಂಸ್ಕೃತಿಯೇ ಹೊರತು ಕಾಂಗ್ರೆಸ್‌ನದಲ್ಲ.
●ಸಿದ್ದರಾಮಯ್ಯ, ಮುಖ್ಯಮಂತ್ರಿ.

ಸಮಾಜಘಾತುಕರು, ಭಯೋತ್ಪಾದಕರ ಫೋನ್‌ ಕದ್ದಾಲಿಕೆ ಮಾಡಬಹುದೇನೊ. ಆದರೆ, ಸಜ್ಜನ ರಾಜಕಾರಣಿಗಳ ಫೋನ್‌ ಕದ್ದಾಲಿಕೆ ಮಾಡಿರೊಲ್ಲ. ತಮ್ಮ ಫೋನ್‌ ಕದ್ದಾಲಿಕೆ ನಡೆಯುತ್ತಿದೆ ಎಂಬುದಾಗಿ ಯಾರಿಗಾದರೂ ಅನಿಸಿದರೆ, ಅಂಥವರು ದಾಖಲೆ ತೋರಿಸಿ, ತನಿಖೆ ಮಾಡಿಸಬಹುದು. ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ.
●ಎಚ್‌.ಆಂಜನೇಯ, ಸಮಾಜ ಕಲ್ಯಾಣ ಸಚಿವ

ರಾಜ್ಯ ಸರ್ಕಾರವೇ ಬಿಜೆಪಿ ರಾಜ್ಯ ನಾಯಕರ
ಫೋನ್‌ ಕದ್ದಾಲಿಸುತ್ತಿದೆ. ಆದರೆ, ಸಿದ್ದರಾಮಯ್ಯ ಅವರು ಸುಮ್ಮನೆ ಕೇಂದ್ರ ಸರ್ಕಾರದತ್ತ ಬೆಟ್ಟು ಮಾಡಿ ತೋರಿಸುತ್ತಿದ್ದಾರೆ. ತಮ್ಮ ತಪ್ಪನ್ನು ಮರೆಮಾಚಲು ಕೇಂದ್ರದತ್ತ ಬೆಟ್ಟು ಮಾಡಿ ತೋರಿಸುತ್ತಿದ್ದಾರೆ.
●ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next