Advertisement

ಟೆಲಿಫೋನ್‌ ಕದ್ದಾಲಿಕೆ: “ಕೈ’ನಾಯಕರ ದ್ವಂದ್ವ ಹೇಳಿಕೆ

11:51 PM Aug 18, 2019 | Team Udayavani |

ರಾಜ್ಯ ರಾಜಕೀಯದಲ್ಲಿ ತಲ್ಲಣ ಉಂಟು ಮಾಡಿರುವ ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಲು ನಿರ್ಧರಿಸಿದ್ದು, ಪ್ರಕರಣ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಸರ್ಕಾರದ ನಿರ್ಧಾರವನ್ನು ಬಿಜೆಪಿ ನಾಯಕರು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಈ ಬಗ್ಗೆ ದ್ವಂದ್ವ ಉಂಟಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ, ದಿನೇಶ್‌ ಗುಂಡೂರಾವ್‌ ಸರ್ಕಾರದ ನಿರ್ಧಾರವನ್ನು ಮುಕ್ತವಾಗಿ ಸ್ವಾಗತಿಸಿದ್ದಾರೆ.

Advertisement

ಪಕ್ಷದ ಅಧಿಕೃತ ಟ್ವಿಟ್ಟರ್‌ನಲ್ಲಿ ಸಿಬಿಐ ತನಿಖೆಯನ್ನು ವಿರೋಧಿಸಿ, ನಂತರ ಟ್ವೀಟ್‌ ಅಳಿಸಿ ಹಾಕಲಾಗಿದೆ. ಮಾಜಿ ಉಪ ಮುಖ್ಯಮಂತ್ರಿ ಪರಮೇಶ್ವರ್‌ ಹಾಗೂ ಡಿಕೆಶಿ ಸರ್ಕಾರದ ತೀರ್ಮಾನದಿಂದ ಅಂತರ ಕಾಯ್ದುಕೊಂಡಿದ್ದಾರೆ. ಈ ಮಧ್ಯೆ, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ನಿರ್ಧಾರಕ್ಕೆ ಪರೋಕ್ಷ ಆಕ್ಷೇಪ ವ್ಯಕ್ತಪಡಿಸಿ, ಸಿದ್ದರಾಮಯ್ಯ ಅವರ ಒತ್ತಾಯಕ್ಕೆ ಮಣಿದು ತನಿಖೆಗೆ ವಹಿಸಲಾಗಿದೆ ಎಂದು ಆರೋಪಿಸಿದ್ದಾರೆ.

“ಆಪರೇಷನ್‌ ಕಮಲ’ದ ತನಿಖೆಯೂ ಆಗಲಿ: ಸಿದ್ದು
ಬೆಂಗಳೂರು: ಪ್ರತಿಪಕ್ಷ ಹಾಗೂ ಮೈತ್ರಿ ಪಕ್ಷದ ನಾಯಕರೂ ಸೇರಿ ಅನೇಕರ ಫೋನ್‌ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿರುವ ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ಕಾಂಗ್ರೆಸ್‌ನಲ್ಲಿ ದ್ವಂದ್ವ ಉಂಟಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ದಿನೇಶ್‌ ಗುಂಡೂರಾವ್‌ ಸರ್ಕಾರದ ನಿರ್ಧಾರವನ್ನು ಮುಕ್ತವಾಗಿ ಸ್ವಾಗತಿಸಿದ್ದಾರೆ. ಆದರೆ, ಪಕ್ಷದ ಅಧಿಕೃತ ಟ್ವಿಟ್ಟರ್‌ನಲ್ಲಿ ಸಿಬಿಐ ತನಿಖೆಯನ್ನು ವಿರೋಧಿಸಿ, ನಂತರ ಟ್ವೀಟ್‌ ಅಳಿಸಿ ಹಾಕಲಾಗಿದೆ.

ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಸರ್ಕಾರದ ತೀರ್ಮಾನದಿಂದ ಅಂತರ ಕಾಯ್ದುಕೊಂಡಿದ್ದಾರೆ. ಸಿದ್ದರಾಮಯ್ಯ ಈ ಕುರಿತು ಟ್ವೀಟ್‌ ಮಾಡಿದ್ದು, “ಫೋನ್‌ ಕದ್ದಾಲಿಕೆ ಮಾಡಿರುವುದನ್ನು ನನ್ನ ಮನವಿಗೆ ಸ್ಪಂದಿಸಿ ಸಿಬಿಐಗೆ ವಹಿಸಲಾಗಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಇತ್ತೀಚೆಗೆ ನಡೆಸಿದ “ಆಪರೇಷನ್‌ ಕಮಲ’ದಲ್ಲಿಯೂ ಕೋಟ್ಯಂತರ ರೂ.ಗಳ ಅವ್ಯವಹಾರ ನಡೆದಿದೆ ಎಂಬ ಆರೋಪವಿದೆ.

ಅದರ ಬಗ್ಗೆಯೂ ಸಿಬಿಐ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆಗ್ರಹಿಸಿದ್ದಾರೆ. ಇದೇ ವೇಳೆ, ರಾಜ್ಯ ಸರ್ಕಾರ ಏಕಾಏಕಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಹತ್ತಾರು ಪ್ರಕರಣಗಳನ್ನು ಸಿಬಿಐಗೆ ಒಪ್ಪಿಸುವಂತೆ ಒತ್ತಾಯ ಮಾಡಿದರೂ, ಸಿಬಿಐ ತನಿಖೆಗೆ ಒಪ್ಪಿಸದ ಬಿಜೆಪಿಯವರಿಗೆ ಈಗ ಏಕಾಏಕಿ ಸಿಬಿಐ ಮೇಲೆ ನಂಬಿಕೆ ಹುಟ್ಟಿರುವುದು ಆಶ್ಚರ್ಯಕರ ಬೆಳವಣಿಗೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

Advertisement

ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಸ್ವಾಗತಿಸಿದ್ದು, ಕೇಂದ್ರ ಸರ್ಕಾರ ರಾಜ್ಯ ಕಾಂಗ್ರೆಸ್‌ ನಾಯಕರ ದೂರವಾಣಿಯನ್ನು ಕದ್ದಾಲಿಕೆ ಮಾಡಿರುವ ಬಗ್ಗೆಯೂ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಸಿಬಿಐ ಒಳ್ಳೆಯ ಸಂಸ್ಥೆಯೇ. ಅದನ್ನು ಬಿಜೆಪಿಯವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರ ಐಟಿ, ಇಡಿ ಸೇರಿ ಹಲವು ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕೇಂದ್ರದ ಇಬ್ಬರು ವ್ಯಕ್ತಿಗಳು ಇದನ್ನು ನಿಯಂತ್ರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮಾಜಿ ಸಚಿವ ಎಚ್‌.ಕೆ.ಪಾಟೀಲ್‌ ಅವರು ಸಿಬಿಐಗೆ ವಹಿಸಿರುವ ಬಗ್ಗೆ ಪರೋಕ್ಷ ಆಕ್ಷೇಪ ವ್ಯಕ್ತಪಡಿಸಿದ್ದು, ಫೋನ್‌ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ರಾಜ್ಯ ತನಿಖಾ ಸಂಸ್ಥೆಗಳೇ ಮಾಡಬಹುದಿತ್ತು. ಜೊತೆಗೆ, ಕದ್ದಾಲಿಕೆಯಿಂದ ಬಹಿರಂಗಗೊಳ್ಳುವ ಗಂಭೀರ ಕ್ರಿಮಿನಲ್‌ ಪ್ರಕರಣಗಳು, ಲಂಚ ಕೊಡಕೊಳ್ಳುವ ವ್ಯವಹಾರಗಳು, ನೀತಿಗೆಟ್ಟ ಕ್ರಮಗಳು, ರಾಜ್ಯದ್ರೋಹದ ಕೆಲಸಗಳು ತನಿಖೆಗೆ ಒಳಪಡಬೇಕು. ಅಂಥ ಪ್ರಕರಣಗಳಲ್ಲಿ ಭಾಗಿಯಾದವರು ತನಿಖಾ ವ್ಯಾಪ್ತಿಗೆ ಒಳಪಡಬೇಕು ಎಂದು ಆಗ್ರಹಿಸಿದ್ದಾರೆ.

ಸಿಬಿಐಗೆ ವಹಿಸಿದ್ದು ಸ್ವಾಗತಾರ್ಹ
ಬೆಂಗಳೂರು: ಫೋನ್‌ ಕದ್ದಾಲಿಕೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ವಹಿಸಿರುವುದನ್ನು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸಹಿತವಾಗಿ ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಟೆಲಿಫೋನ್‌ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿರ್ಧಾರ ಸ್ವಾಗತಾರ್ಹ.

ಫೋನ್‌ ಕದ್ದಾಲಿಕೆ ಅಕ್ಷಮ್ಯ ಅಪರಾಧ. ಇದರಲ್ಲಿ ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಯಾಗಬೇಕು. ಸೇಡಿನ ರಾಜಕಾರಣದ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್‌ ನಾಯಕರು ಸಹ ಸೂಕ್ತ ತನಿಖೆಗೆ ಒತ್ತಾಯಿಸಿದ್ದರು. ಇದೊಂದು ಗಂಭೀರ ಪ್ರಕರಣವಾಗಿರುವ ಕಾರಣ ಸಿಬಿಐ ತನಿಖೆಯಿಂದ ಮಾತ್ರ ಸತ್ಯಾಂಶ ಹೊರಬರಲಿದೆ ಎಂದು ಹೇಳಿದರು.

ಟೆಲಿಫೋನ್‌ ಟ್ಯಾಪಿಂಗ್‌ ಮಹಾಪರಾಧ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಅಧಿಕಾರಿಗಳು ಆಡಳಿತದಲ್ಲಿರುವವರ ಪರವಾಗಿ ಬಕೆಟ್‌ ಹಿಡಿಯುವ ಪ್ರವೃತ್ತಿಗೆ ಕಡಿವಾಣ ಬೀಳಬೇಕು.
-ಸಿ.ಟಿ.ರವಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

ಫೋನ್‌ ಕದ್ದಾಲಿಕೆ ಪ್ರಕರಣದ ತನಿಖೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ವತ: ಒತ್ತಾಯ ಮಾಡಿದ್ದರು. ಇದರಲ್ಲಿ ದ್ವೇಷದ ರಾಜಕಾರಣದ ಪ್ರಶ್ನೆಯೇ ಇಲ್ಲ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಯಾಗಬೇಕೆಂಬುದು ನಮ್ಮ ಒತ್ತಾಯವಾಗಿದೆ. ಸಿಎಂ ಯಡಿಯೂರಪ್ಪ ಸಿಬಿಐ ತನಿಖೆಗೆ ವಹಿಸಿದ್ದಾರೆ. ಈ ವಿಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಪಾತ್ರವಿಲ್ಲ. ಅನಗತ್ಯವಾಗಿ ಅವರ ಹೆಸರು ಪ್ರಸ್ತಾಪಿಸುವುದು ಸರಿಯಲ್ಲ.
-ಆರ್‌.ಅಶೋಕ್‌, ಮಾಜಿ ಉಪಮುಖ್ಯಮಂತ್ರಿ

ಟೆಲಿಫೋನ್‌ ಕದ್ದಾಲಿಕೆ ಪ್ರಕರಣದ ತನಿಖೆಯಾಗಬೇಕೆಂದು ಎಲ್ಲ ಪಕ್ಷದ ನಾಯಕರು ಒತ್ತಾಯ ಮಾಡಿದ್ದರು. ವಿಶೇಷವಾಗಿ ಕಾಂಗ್ರೆಸ್‌ನ ಹಿರಿಯ ನಾಯಕರಾದ ಸಿದ್ದರಾಮಯ್ಯ, ಎಂ.ಬಿ.ಪಾಟೀಲ್‌ ಉನ್ನತ ಮಟ್ಟದ ತನಿಖೆಗೆ ಒತ್ತಾಯ ಮಾಡಿದ್ದರು. ಈಗ ಯಡಿಯೂರಪ್ಪ ಸಿಬಿಐ ತನಿಖೆಗೆ ಆದೇಶಿಸಿದ್ದಾರೆ. ಸತ್ಯಾಂಶ ಹೊರಬರಬೇಕೆಂಬುದು ಇದರ ಉದ್ದೇಶ. ಸೇಡಿನ ರಾಜಕೀಯದ ಪ್ರಶ್ನೆಯೇ ಇಲ್ಲ.
-ವಿ.ಸೋಮಣ್ಣ, ಮಾಜಿ ಸಚಿವ

ದೂರವಾಣಿ ಕದ್ದಾಲಿಕೆ ಕೊಲೆಗಿಂತಲೂ ದೊಡ್ಡ ಅಪರಾಧ. ಈ ಪ್ರಕರಣವನ್ನು ಸಿಬಿಐಗೆ ವಹಿಸಿದ್ದು ಸ್ವಾಗತಾರ್ಹ.
-ವಾಟಾಳ್‌ ನಾಗರಾಜ್‌, ಕನ್ನಡ ವಾಟಾಳ ಪಕ್ಷದ ಧುರೀಣ

ಫೋನ್‌ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿರುವುದು ಸ್ವಾಗತಾರ್ಹ. ಇದರಿಂದ ತಪ್ಪಿತಸ್ಥರಾರು ಎಂಬುದು ತಿಳಿಯಲಿದೆ. ರಾಷ್ಟ್ರೀಯ ನಾಯಕರ ಫೋನ್‌ಗಳನ್ನು ಸಹ ಕದ್ದಾಲಿಸಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪನವರು ಪ್ರಕರಣವನ್ನು ಸಿಬಿಐಗೆ ವಹಿಸಿದ್ದಾರೆ.
-ಬಿ. ಶ್ರೀರಾಮುಲು ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next