ಇದು ಬಿಜೆಪಿಯ ಬಹುದಿನಗಳ ಕನಸು. ಉತ್ತರ, ಈಶಾನ್ಯ ಭಾರತದ ಬಳಿಕ ಈಗ ಮಹಾರಾಷ್ಟ್ರ ಕೂಡ ಬಿಜೆಪಿಯ ತೆಕ್ಕೆಗೆ ಬಂದಿದೆ. ಈ ಮೂಲಕ ದೇಶದ ವಾಯವ್ಯ ಭಾಗದಲ್ಲೂ ಕೇಸರಿ ಬಾವುಟ ಹಾರಿಸಿರುವ ಬಿಜೆಪಿಯ ಮುಂದಿನ ಟಾರ್ಗೆಟ್ “ದಕ್ಷಿಣ ಭಾರತ’.
Advertisement
ಈ ಗುರಿ ಸಾಧನೆಗೆ ಬಿಜೆಪಿಯು ಹೆಬ್ಟಾಗಿಲನ್ನಾಗಿ ಆಯ್ಕೆ ಮಾಡಿಕೊಂಡಿರುವುದು ತೆಲಂಗಾಣವನ್ನು. ಪಕ್ಷದ “ಮಿಷನ್ ತೆಲಂಗಾಣ’ದ ಭಾಗವಾಗಿಯೇ ತನ್ನ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಹೈದರಾಬಾದ್‌ನಲ್ಲಿ ನಡೆಸಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಠೇವಣಿಯನ್ನೂ ಕಳೆದುಕೊಂಡು, ಕೇವಲ ಒಂದು ಸೀಟು ಗಳಿಸುವ ಮೂಲಕ “ತೆಲಂಗಾಣದಲ್ಲಿ ಭವಿಷ್ಯವಿಲ್ಲದ ಪಕ್ಷ’ ಎಂದು ಕರೆಸಿಕೊಂಡಿದ್ದ ಬಿಜೆಪಿ, ಅನಂತರದ ವರ್ಷಗಳಲ್ಲಿ ಗಣನೀಯ ರಾಜಕೀಯ ಲಾಭ ಗಳಿಸುತ್ತಿರುವುದರ ಹಿಂದೆ ಬೇರು ಮಟ್ಟದ ಶ್ರಮವೂ ಎದ್ದುಕಾಣುತ್ತಿದೆ.
Related Articles
Advertisement
ಬಿಜೆಪಿಯ ಕಾರ್ಯತಂತ್ರಗಳೇನು?: ಮೇ ತಿಂಗಳಿಂದಲೇ ಬಿಜೆಪಿಯ ಪ್ರಮುಖ ನಾಯಕರು ತೆಲಂಗಾಣಕ್ಕೆ ಭೇಟಿ ನೀಡುತ್ತಲೇ ಇದ್ದಾರೆ. ಪಕ್ಷದ ತೆಲಂಗಾಣ ರಾಜ್ಯ ಘಟಕದ ಅಧ್ಯಕ್ಷ ಕೆ.ಲಕ್ಷ್ಮಣ್‌ರನ್ನು ಉತ್ತರಪ್ರದೇಶದಿಂದ ರಾಜ್ಯ ಸಭೆಗೂ ಕಳುಹಿಸಿಕೊಡಲಾಗಿದೆ. ಮತ್ತೂಂದು ಪ್ರಮುಖ ಬೆಳವಣಿಗೆಯಲ್ಲಿ, ಇತ್ತೀಚೆಗಷ್ಟೇ ಹೈದರಾಬಾದ್ ಮಹಾ ನಗರ ಪಾಲಿಕೆಯ ಕಾರ್ಪೊರೇಟರ್‌ಗಳು ಮತ್ತು ರಾಜ್ಯ ಬಿಜೆಪಿ ನಾಯಕರನ್ನು ದಿಲ್ಲಿಗೆ ಕರೆಸಿಕೊಂಡು ಖುದ್ದು ಪ್ರಧಾನಿ ಮೋದಿ ಅವರೇ ಸಭೆ ನಡೆಸಿದ್ದಾರೆ. ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ಬಳಿಕ ಪ್ರಧಾನಿ ಮೋದಿಯವರು ರಾಜ್ಯದ ಪಾಲಿಕೆಯ ಕಾರ್ಪೊರೇಟರ್‌ಗಳೊಂದಿಗೆ ಈ ರೀತಿಯ ಅನೌಪಚಾರಿಕ ಸಂವಾದವನ್ನು ನಡೆಸಿರುವುದು ಇದೇ ಮೊದಲು. ಪ್ರತಿ ಬಾರಿ ಮೋದಿ ಹೈದರಾಬಾದ್‌ಗೆ ಭೇಟಿ ನೀಡಿದಾಗಲೂ ತಮ್ಮ ಭಾಷಣದಲ್ಲಿ “ವಂಶಾಡಳಿತದ’ ವಿರುದ್ಧ ನಿರಂತರ ವಾಗ್ಧಾಳಿ ನಡೆಸುತ್ತಿರುವುದು ಕೂಡ ಮೋದಿ ಸ್ಟ್ರಾéಟಜಿಯ ಒಂದು ಭಾಗ. “ವಂಶಾಡಳಿತವೇ ಪ್ರಜಾಪ್ರಭುತ್ವದ ಅತಿದೊಡ್ಡ ಶತ್ರು, ದೇಶದಲ್ಲಿ ಯಾವಾಗ ವಂಶಾಡಳಿತ ರಾಜಕೀಯ ಕೊನೆಗೊಳ್ಳುತ್ತದೋ, ಅಂದಿನಿಂದ ಅಭಿವೃದ್ಧಿ ಆರಂಭವಾಗುತ್ತದೆ’ ಎಂದು ಮೋದಿ ಪದೇ ಪದೆ ಹೇಳುತ್ತಿರುವುದನ್ನು ಗಮನಿಸಬಹುದು.
ತೆಲಂಗಾಣದ ಪ್ರತಿಯೊಂದು ಜಿಲ್ಲೆಯಲ್ಲೂ ಈಗ ಬಿಜೆಪಿ ಕಚೇರಿಗಳನ್ನು ತೆರೆಯಲಾಗಿದೆ, ಬೂತ್ ಉಸ್ತುವಾರಿಗಳನ್ನು ನೇಮಿಸಲಾಗಿದೆ, ಮನೆ ಮನೆಗೆ ತೆರಳಿ ಸಮೀಕ್ಷೆಗಳನ್ನು ನಡೆಸಲಾಗುತ್ತಿದೆ, ಎಲ್ಲ ಜಾತಿ ಹಾಗೂ ಪಕ್ಷಗಳಲ್ಲಿರುವ ಮತ ಸೆಳೆಯುವಂಥ ಸಾಮರ್ಥ್ಯವಿರುವ ನಾಯಕರನ್ನು ಗುರುತಿಸಲಾಗುತ್ತಿದೆ. ರಾಜ್ಯದ ಒಟ್ಟು ಜನಸಂಖ್ಯೆಯ ಶೇ.56ರಷ್ಟಿರುವ ಒಬಿಸಿ ಸಮುದಾಯವನ್ನು ಸೆಳೆಯುವ ನಿಟ್ಟಿನಲ್ಲೂ ಬಿಜೆಪಿ ಕೆಲಸ ಮಾಡುತ್ತಿದೆ. ಇದೇ ಸಮುದಾಯದ ಪ್ರಬಲ ನಾಯಕರಾದ ಬಂಡಿ ಸಂಜಯ್‌ರನ್ನೇ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಕೆಸಿಆರ್ ವಿರುದ್ಧ ಟೀಕಾಸ್ತ್ರ: ಆಡಳಿತಾರೂಢ ಟಿಆರ್‌ಎಸ್ ನಾಯಕ, ಸಿಎಂ ಕೆ. ಚಂದ್ರಶೇಖರ್ ರಾವ್ ವಿರುದ್ಧ ರಾಜ್ಯದಲ್ಲಿ ಸಹಜವಾಗಿಯೇ ಆಡಳಿತ ವಿರೋಧಿ ಅಲೆ ಸ್ವಲ್ಪ ಮಟ್ಟಿಗೆ ಸೃಷ್ಟಿಯಾಗಿದೆ. ತಾವು ಅಧಿಕಾರಕ್ಕೇರಿ 3000 ದಿನಗಳಾದರೂ, ಕನಿಷ್ಠ ಪಕ್ಷ 30 ಗಂಟೆಗಳ ಕಾಲ ಕೂಡ ಕಚೇರಿಗೆ ಬಂದಿಲ್ಲ ಎಂಬ ಆರೋಪ ಅವರ ಮೇಲಿದೆ. ಜತೆಗೆ, ಕುಟುಂಬ ರಾಜಕಾರಣಕ್ಕೆ ಒತ್ತು(ಕೆಸಿಆರ್, ಪುತ್ರ, ಪುತ್ರಿ, ಅಳಿಯನೇ ರಾಜ್ಯವಾಳುತ್ತಿದ್ದಾರೆ ಎಂಬ ಆರೋಪ), ಪ್ರತ್ಯೇಕ ತೆಲಂಗಾಣದ ಸೃಷ್ಟಿಗಾಗಿ ತ್ಯಾಗ ಮಾಡಿದವನ್ನು ನಿರ್ಲಕ್ಷ್ಯ ಮಾಡಿದ್ದಾರೆ, ಭ್ರಷ್ಟಾಚಾರ, ದುರಾಡಳಿತ ಮುಂತಾದ ಟೀಕಾಸ್ತ್ರಗಳನ್ನು ಬಳಸುತ್ತಲೇ ಬಿಜೆಪಿಯು ತೆಲಂಗಾಣದಲ್ಲಿ ತನ್ನ ಹೆಜ್ಜೆಗುರುತು ಮೂಡಿಸಲು ಶತಪ್ರಯತ್ನ ನಡೆಸುತ್ತಿದೆ.
ಐದೇ ವರ್ಷಗಳಲ್ಲಿ ಎಲ್ಲವೂ ಬದಲಾಯಿತು: 5 ವರ್ಷಗಳ ಹಿಂದೆ ಇದೇ ಅವಧಿಯಲ್ಲಿ ಎನ್‌ಡಿಎ ತನ್ನ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ರಾಮನಾಥ ಕೋವಿಂದ್ ಹೆಸರು ಘೋಷಿಸಿದಾಗ, ಇದೇ ಕೆ. ಚಂದ್ರಶೇಖರ್ ರಾವ್ ಅವರು ಬಿಜೆಪಿಯ ಪಕ್ಕಾ ಬೆಂಬಲಿಗರಾಗಿದ್ದರು. ಸಂಸತ್‌ನಲ್ಲೂ ಹಲವು ವಿಚಾರಗಳಲ್ಲಿ ನರೇಂದ್ರ ಮೋದಿ ಸರಕಾರದ ಪರ ನಿಂತಿದ್ದರು. ಆದರೆ, ಈಗ ಪರಿಸ್ಥಿತಿ ಯಾವ ಮಟ್ಟಕ್ಕೆ ತಲುಪಿದೆಯೆಂದರೆ, ಪ್ರಧಾನಿ ಮೋದಿ ಅವರು 3 ಬಾರಿ ಹೈದರಾಬಾದ್‌ಗೆ ಬಂದಾಗಲೂ ಬೇರೆ ಬೇರೆ ನೆಪಗಳನ್ನು ಹೇಳಿ ಅವರನ್ನು ಸ್ವಾಗತಿಸಲು ಹೋಗದೇ ಕೆಸಿಆರ್ ತಪ್ಪಿಸಿ ಕೊಂಡಿದ್ದಾರೆ. ಶನಿವಾರ ಮೋದಿ ಸ್ವಾಗತಕ್ಕೆ ತೆರಳದ ಕೆಸಿಆರ್, ಅದೇ ಏರ್‌ಪೋರ್ಟ್‌ಗೆ ಬಂದಿಳಿದಿದ್ದ ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.
ಬಿಜೆಪಿಯೇ ತನ್ನ ಪ್ರಮುಖ ಶತ್ರು ಎಂಬುದು ಈಗ ಕೆಸಿಆರ್‌ಗೆ ಅರ್ಥವಾಗಿಬಿಟ್ಟಿದೆ. ಹೀಗಾಗಿ, 70-80 ಕ್ಷೇತ್ರ ಗಳಲ್ಲಿ ಪ್ರಾಬಲ್ಯ ಹೊಂದಿರುವ ಕಾಂಗ್ರೆಸ್‌ನ ಮತಗಳನ್ನು ಸೆಳೆಯುವತ್ತ ರಾವ್ ಗಮನ ಕೇಂದ್ರೀಕರಿಸಿದ್ದಾರೆ. “ಅಹಂಕಾರಿ’, “ಶಾಸಕರಿಗೇ ಲಭ್ಯವಾಗುತ್ತಿಲ್ಲ’ ಎಂಬಿತ್ಯಾದಿ ಆರೋಪಗಳಿಂದ ಮುಕ್ತರಾಗಲೆಂದು ಕೆಸಿಆರ್ ಇತ್ತೀಚಿನ ದಿನಗಳಲ್ಲಿ ಶಾಸಕರೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ, ಅವರನ್ನು ಕೇಂದ್ರ ಸರಕಾರದ ವಿರುದ್ಧ ಛೂ ಬಿಡುವ ಕೆಲಸವನ್ನೂ ಆರಂಭಿಸಿದ್ದಾರೆ.
ಒಟ್ಟಿನಲ್ಲಿ, ಒಂದು ಕಡೆ ಕೆಸಿ ರಾವ್ ಅವರು ವಿವಿಧ ರಾಜ್ಯ ಗಳಿಗೆ ಭೇಟಿ ನೀಡಿ ಬಿಜೆಪಿ ವಿರುದ್ಧ ರಾಷ್ಟ್ರೀಯ ಮಟ್ಟದಲ್ಲಿ ವಿಪಕ್ಷಗಳನ್ನು ಒಗ್ಗೂಡಿಸುವ ಕೆಲಸದಲ್ಲಿ ನಿರತರಾಗಿದ್ದರೆ, ಮತ್ತೂಂದು ಕಡೆ ಬಿಜೆಪಿ ಸದ್ದಿಲ್ಲದೇ ಸಂಪನ್ಮೂಲಭರಿತ ರಾಜ್ಯವಾದ ತೆಲಂಗಾಣದಲ್ಲಿ ಕೆಸಿಆರ್ ರಾಜ್ಯಭಾರವನ್ನು ಕೊನೆಗಾಣಿಸುವ ಯತ್ನವನ್ನು ದ್ವಿಗುಣಗೊಳಿಸಿದೆ. ಚುನಾ ವಣೆ ಸಮೀಪಿಸುತ್ತಿರುವಂತೆ ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ತಮ್ಮ ಕಾರ್ಯತಂತ್ರಗಳೊಂದಿಗೆ ಗ್ರೌಂಡ್‌ಗಿಳಿಯಲಿವೆ. ಯಾರು ಏನೇ ಕಸರತ್ತು ನಡೆಸಿದರೂ, ಕೊನೆಗೆ ಯಾರನ್ನು ಗೆಲ್ಲಿಸಬೇಕು ಎಂದು ನಿರ್ಧರಿಸುವವರು ಜನರು.
– ಹಲೀಮತ್ ಸಅದಿಯಾ