ಹೈದರಾಬಾದ್: ದ್ವಿತೀಯ ಪಿಯುಸಿ ವಿದ್ಯಾರ್ಥಿನಿಗೆ 99 ಅಂಕಗಳ ಬದಲು ಸೊನ್ನೆ ಮಾರ್ಕ್ ಹಾಕಿ ಯಡವಟ್ಟು ಮಾಡಿದ್ದ ಉಪನ್ಯಾಸಕಿಯನ್ನು ಕಾಲೇಜು ಆಡಳಿತ ಮಂಡಳಿ ಸಸ್ಪೆಂಡ್ ಮಾಡಿ, ದಂಡ ವಿಧಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ತೆಲಂಗಾಣದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನವ್ಯಾ ಎಂಬಾಕೆಯ ತೆಲುಗು ಪೇಪರ್ ಅನ್ನು ತಿದ್ದಿದ್ದರು. ನವ್ಯಾ ತೆಲುಗು ಪೇಪರ್ ನಲ್ಲಿ 99 ಅಂಕಗಳನ್ನು ಗಳಿಸಿದ್ದಳು, ಆದರೆ ಉಪನ್ಯಾಸಕಿ ಉಮಾ ದೇವಿ ಸೊನ್ನೆ ಅಂಕ ನೀಡಿದ್ದರು. ಈ ಬಗ್ಗೆ ವಿದ್ಯಾರ್ಥಿನಿ ಪೋಷಕರು ಖಾಸಗಿ ಕಾಲೇಜಿನ ಆಡಳಿತ ಮಂಡಳಿಗೆ ದೂರು ನೀಡಿದ್ದರು.
ತ್ರಿಸದಸ್ಯರನ್ನು ಒಳಗೊಂಡ ಸಮಿತಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಕೊಟ್ಟಿತ್ತು. ಆ ಪ್ರಕಾರ ಕರ್ತವ್ಯ ಲೋಪ ಎಸಗಿದವರ ವಿರುದ್ಧ ಬೋರ್ಡ್ ಇಂಟರ್ ಮೀಡಿಯೇಟ್ ಎಜುಕೇಷನ್(ಬಿಐಇ) ಕ್ರಮ ಕೈಗೊಳ್ಳಬಹುದು ಎಂದು ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಉಪನ್ಯಾಸಕಿ ಉಮಾ ದೇವಿ ಅವರನ್ನು ಕೆಲಸದಿಂದ ಅಮಾನತು ಮಾಡಿ, 5 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಬೋರ್ಡ್ ಇಂಟರ್ ಮೀಡಿಯೇಟ್ ಎಜುಕೇಶನ್ ಭಾನುವಾರ ಸಂಜೆ ಆದೇಶ ನೀಡಿತ್ತು. ಅಲ್ಲದೇ ಪರಿಶೀಲಕರಾಗಿ ಕರ್ತವ್ಯ ನಿರ್ವಹಿಸಿದ್ದ ವಿಜಯ್ ಕುಮಾರ್ ಅವರನ್ನು ಅಮಾನತು ಮಾಡಿದೆ, ಈ ಲೋಪವನ್ನು ಪತ್ತೆ ಹಚ್ಚಲು ವಿಫಲರಾಗಿದ್ದಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಐಇ ವಿವರಿಸಿದೆ.