Advertisement

ವಿಮೋಚನಾ ದಿನದ “ಕಾವು’; ಕೇಂದ್ರ, ತೆಲಂಗಾಣ ಸರಕಾರದಿಂದ ಪ್ರತ್ಯೇಕ ಸಮಾರಂಭ

11:47 PM Sep 16, 2022 | Team Udayavani |

ಹೈದರಾಬಾದ್‌: “ಹೈದರಾಬಾದ್‌ ವಿಮೋಚನಾ ದಿನ’ದ ನೇಪಥ್ಯದಲ್ಲಿ ತೆಲಂಗಾಣದಲ್ಲಿ ರಾಜಕೀಯ ಕಾವು ಜೋರಾಗಿದೆ.

Advertisement

ಬಿಜೆಪಿ, ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್‌ಎಸ್‌) ಮತ್ತು ಎಐಎಂಐಎಂ ತಮ್ಮ ಪಕ್ಷಗಳ ಬಲವರ್ಧನೆಗೆ ಈ ಸಮಾರಂಭವನ್ನು ಬಳಸಿಕೊಳ್ಳಲು ಅಣಿಯಾಗಿವೆ.

ಸೆ.17ರಂದು ಹೈದರಾಬಾದ್‌ನಲ್ಲಿ ನಡೆಯುವ ಪ್ರತ್ಯೇಕ ಸಮಾರಂಭಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ತೆಲಂಗಾಣ ಸಿಎಂ ಕೆ.ಚಂದ್ರಶೇಖರ್‌ ರಾವ್‌ ರಾಷ್ಟ್ರ ಧ್ವಜ ಹಾರಿಸಲಿದ್ದಾರೆ.

ಭಾರತದ ಮೊದಲ ಗೃಹ ಸಚಿವ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಅವರ ದಿಟ್ಟ ಕ್ರಮದಿಂದ 1948ರ ಸೆ.17ರಂದು ಹೈದರಾಬಾದ್‌ ರಾಜ್ಯವು ನಿಜಾಮರ ಆಳ್ವಿಕೆಯಿಂದ ಮುಕ್ತಗೊಂಡು ಭಾರತದ ಒಕ್ಕೂಟಕ್ಕೆ ಸೇರ್ಪಡೆಯಾಯಿತು. ಈ ದಿನವನ್ನು ಕೇಂದ್ರ ಸರ್ಕಾರ “ಹೈದರಾಬಾದ್‌ ವಿಮೋಚನಾ ದಿನ’ವನ್ನಾಗಿ ಇದೇ ಮೊದಲ ಬಾರಿಗೆ ಆಚರಿಸುತ್ತಿದೆ. ಇದರ ಅಂಗವಾಗಿ ವರ್ಷಪೂರ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭಾಗಿ:
ಸಿಕಿಂದರಾಬಾದ್‌ನ ಆರ್ಮಿ ಪೆರೇಡ್‌ ಮೈದಾನದಲ್ಲಿ ಶನಿವಾರ ನಡೆಯುವ ಕೇಂದ್ರ ಸರ್ಕಾರದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಭಾಗವಹಿಸುತ್ತಿದ್ದಾರೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಕೆಲವು ಪ್ರದೇಶಗಳು ಹಿಂದಿನ ಹೈದರಾಬಾದ್‌ ರಾಜ್ಯದ ಭಾಗವಾಗಿತ್ತು.

Advertisement

“ತೆಲಂಗಾಣ ಏಕತಾ ದಿನ’ ಆಚರಣೆ:
ಇನ್ನೊಂದೆಡೆ, ತೆಲಂಗಾಣ ಸರ್ಕಾರ ಈ ದಿನವನ್ನು “ತೆಲಂಗಾಣ ಏಕತಾ ದಿನ’ವನ್ನಾಗಿ ಆಚರಿಸುತ್ತಿದೆ. ಹೈದರಾಬಾದ್‌ನ ಸಾರ್ವಜನಿಕ ಉದ್ಯಾನದಲ್ಲಿ ಶನಿವಾರ ನಡೆಯುವ ಸಮಾರಂಭದಲ್ಲಿ ರಾಷ್ಟ್ರಧ್ವಜ ಆರಿಸುವ ಮೂಲಕ ಮೂರು ದಿನಗಳ ಉತ್ಸವಕ್ಕೆ ತೆಲಂಗಾಣ ಸಿಎಂ ಕೆಸಿಆರ್‌ ಚಾಲನೆ ನೀಡಲಿದ್ದಾರೆ.

ಬಿಜೆಪಿ ವಿರುದ್ಧ ಪ್ರತಿಪಕ್ಷಗಳನ್ನು ಒಟ್ಟುಗೂಡಿಸಲು ಶ್ರಮಿಸುತ್ತಿರುವ ಕೆಸಿಆರ್‌, ಬಿಜೆಪಿ ವೇಗಕ್ಕೆ ಬ್ರೇಕ್‌ ಹಾಕಲು ಹೊರಟಿದ್ದಾರೆ. ಮತ್ತೊಂದೆಡೆ, ಇತ್ತೀಚಿನ ಹೈದರಾಬಾದ್‌ ಉಪಚುನಾವಣೆಗಳು ಮತ್ತು ಪಾಲಿಕೆ ಚುನಾವಣೆಗಳಲ್ಲಿ ತನ್ನ ಅಭ್ಯರ್ಥಿಗಳ ಜಯದೊಂದಿಗೆ ಹಿಗ್ಗಿರುವ ಬಿಜೆಪಿ, 2024ರ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ ಪಕ್ಷವನ್ನು ವಿಸ್ತರಿಸಲು ಯೋಜಿಸಿದೆ.

ಎಐಎಂಐಎಂ ವತಿಯಿಂದ “ತಿರಂಗಾ ಬೈಕ್‌ ರ್‍ಯಾಲಿ’:
ಇನ್ನೂ ಎಐಎಂಐಎಂ ಮುಖ್ಯಸ್ಥ ಅಸಾಸುದ್ದೀನ್‌ ಓವೈಸಿ ಈ ದಿನವನ್ನು “ರಾಷ್ಟ್ರೀಯ ಏಕತಾ ದಿನ’ವನ್ನಾಗಿ ಆಚರಿಸುವಂತೆ ಒತ್ತಾಯಿಸಿ ಕೇಂದ್ರ ಮತ್ತು ತೆಲಂಗಾಣ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ದಿನದ ಪ್ರಯುಕ್ತ ಶುಕ್ರವಾರವೇ ಅವರು “ತಿರಂಗಾ ಬೈಕ್‌ ರ್‍ಯಾಲಿ’ಗೆ ಚಾಲನೆ ನೀಡಿದ್ದಾರೆ. ಈ ವೇಳೆ ಮುಸ್ಲಿಂ ಸಮುದಾಯದ ಅನೇಕರು ಶುಕ್ರವಾರದ ಪ್ರಾರ್ಥನೆ ಮುಗಿಸಿ, ರಾಷ್ಟ್ರ ಧ್ವಜದೊಂದಿಗೆ ರ್‍ಯಾಲಿಯಲ್ಲಿ ಭಾಗವಹಿಸಿದ್ದರು.

ತೆಲಂಗಾಣ ರಾಜ್ಯ ನಿರ್ಮಾಣವಾಗಿ 8 ವರ್ಷಗಳ ನಂತರ ಕೇಂದ್ರ ಸರ್ಕಾರಕ್ಕೆ “ಹೈದರಾಬಾದ್‌ ವಿಮೋಚನಾ ದಿನ’ದ ನೆನಪಾಗಿದೆ. ಅಮಿತ್‌ ಶಾ ಹೈದರಾಬಾದ್‌ಗೆ ಬರುವಾಗ 1,000 ಕೋಟಿ ರೂ.ಗಳ ಅನುದಾನ ತರಲಿದ್ದಾರೋ ಅಥವಾ ಕೇವಲ ಹಿಂದೂ-ಮುಸ್ಲಿಂ ದ್ವೇಷವೋ?.
– ಕೆ.ಟಿ.ರಾಮರಾವ್‌, ತೆಲಂಗಾಣ ಕೈಗಾರಿಕಾ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next