ಹೈದರಾಬಾದ್: ಎರಡು ಪ್ರತ್ಯೇಕ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಒಟ್ಟು ಐವರು ಸಾವನ್ನಪ್ಪಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಸೋಮವಾರ(ಡಿ.25 ರಂದು) ತಿಳಿಸಿದ್ದಾರೆ.
ಭಾನುವಾರ ರಾತ್ರಿ ಎನ್‌ಎಚ್ 186ರಲ್ಲಿ ತನ್ನ ಬೈಕ್ ನಲ್ಲಿ ರಮಾವತ್ ಕೇಶವ್ (19) ಮಿರ್ಯಾಲಗುಡದಿಂದ ಪೆದ್ದವೂರ ಕಡೆಗೆ ಹೋಗುತ್ತಿದ್ದರು. ಈ ವೇಳೆ ವೇಂಪಡು ಗ್ರಾಮದಲ್ಲಿ ನಡೆದುಕೊಂಡು ಬರುತ್ತಿದ್ದ ನಾಗರಾಜು (28) ಎಂಬಾತನಿಗೆ ಢಿಕ್ಕಿ ಹೊಡೆದಿದ್ದಾರೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಸೋಮವಾರ ಘಟನೆ ಬಗ್ಗೆ ಮಾಹಿತಿ ತಿಳಿದು ರಮಾವತ್ ಕೇಶವ್ ಮನೆಯ 7 ಮಂದಿ ಕಾರಿನಲ್ಲಿ ಘಟನಾ ಸ್ಥಳಕ್ಕೆ ಬರಲು ಹೊರಟಿದ್ದಾರೆ. ಆದರೆ ಮಂಜು ಕವಿದ ವಾತಾವರಣದ ನಡುವೆ ಬರುತ್ತಿದ್ದಾಗ ಪಾರ್ವತಿಪುರಂ ಬಳಿ ಮೃತರ ಕುಟುಂಬ ಸದಸ್ಯರ ವಾಹನಕ್ಕೆ ಆಯಿಲ್ ಢಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲಿದ್ದ 7 ಮಂದಿಯಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರಮಾವತ್ ಪಾಂಡು (40), ರಮಾವತ್ ಘನ್ಯಾ (40) ಮತ್ತು ರಮಾವತ್ ಬುಜ್ಜಿ (38) ಮೃತಪಟ್ಟಿದ್ದಾರೆ. ಉಳಿದ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೃತ ಐವರು ಮಲ್ಲೇವಣಿ ಕುಂಟ ತಾಂಡಾ ಗ್ರಾಮದವರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಿರ್ಯಾಲಗೂಡ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.