Advertisement

ತೆಲಂಗಾಣದಲ್ಲಿ ಕೆಸಿಆರ್‌ ಗರ್ವಭಂಗ

01:21 PM May 24, 2019 | Team Udayavani |

ಕಳೆದ ವರ್ಷದ ಡಿಸೆಂಬರ್‌ನಲ್ಲಿ ತೆಲಂಗಾಣ ವಿಧಾನ  ಸಭೆಗೆ ನಡೆದಿದ್ದ ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಭರ್ಜರಿ ಜಯ ಸಾಧಿಸಿತ್ತು. 119 ವಿಧಾನಸಭಾ ಕ್ಷೇತ್ರಗಳ ಪೈಕಿ 88ರಲ್ಲಿ ಹಾಲಿ ಆಡಳಿತ ಪಕ್ಷ ಗೆದ್ದಿತ್ತು. ಅದೇ ಮಾದರಿಯಲ್ಲಿ 17ರ ಪೈಕಿ 16ನ್ನು ಅನಾಯಾಸವಾಗಿ ಗೆದ್ದುಕೊಳ್ಳಬಹುದು ಎಂದು ನಿರೀಕ್ಷೆ ಮಾಡಿದ್ದರು. ಆದರೆ ಅವರ ನಿರೀಕ್ಷೆ ಸುಳ್ಳಾಗಿದೆ. ಟಿಆರ್‌ಎಸ್‌ 10 ಕ್ಷೇತ್ರಗಳಲ್ಲಿ ಗೆದ್ದರೆ, ಚಂದ್ರಶೇಖರ ರಾವ್‌ ಅವರ ಭದ್ರ ಕೋಟೆಯಲ್ಲಿ ಬಿಜೆಪಿ-4, ಕಾಂಗ್ರೆಸ್‌-3, ಎಐಎಂಐಎಂ-1 ಕ್ಷೇತ್ರಗಳಲ್ಲಿ ಗೆದ್ದುಕೊಂಡಿದೆ.

Advertisement

ಅಡಿಲಾಬಾದ್‌ನಲ್ಲಿ ಬಿಜೆಪಿಯ ಸೋಯಂ ಬಾಪು ರಾವ್‌ ಟಿಆರ್‌ಎಸ್‌ನ ಗೋಡಂ ನಾಗೇಶ್‌ ವಿರುದ್ಧ, ನಿಜಾಮಾಬಾದ್‌ನಲ್ಲಿ ಬಿಜೆಪಿಯ ಅರ ವಿಂದ ಧರ್ಮಪುರಿ ಟಿಆರ್‌ಎಸ್‌ ಅಭ್ಯರ್ಥಿ, ಹಾಲಿ ಸಂಸದೆ ಕೆ.ಕವಿತಾ ವಿರುದ್ಧ ಗೆಲವು ಸಾಧಿಸಿದ್ದಾರೆ. ಟಿಆರ್‌ಎಸ್‌ನ ಪ್ರಮುಖ ನಾಯಕ, ಹಾಲಿ ಸಂಸದ ವಿನೋದ್‌ ಕುಮಾರ್‌ ಬಿನಪ್ಪಲ್ಲಿ ಬಿಜೆಪಿಯ ಬಂಡಿ ಸಂಜಯ ಕುಮಾರ್‌ ವಿರುದ್ಧ ಕರೀಂನಗರ್‌ನಲ್ಲಿ ಸೋಲು ಅನುಭವಿಸಿದ್ದಾರೆ. ಇನ್ನು ಸಿಕಂದರಾಬಾದ್‌ನಲ್ಲಿ ಜಿ.ಕಿಶನ್‌ ರೆಡ್ಡಿ ಜಯ ಸಾಧಿಸಿದ್ದಾರೆ.

ನಲಗೊಂಡಾದಲ್ಲಿ ಕಾಂಗ್ರೆಸ್‌ನ ಉತ್ತಮ ಕುಮಾರ್‌ ರೆಡ್ಡಿ ಗುತ್ತ ಸುಖೇಂದರ್‌ ರೆಡ್ಡಿ ವಿರುದ್ಧ ಜಯಸಾಧಿಸಿದ್ದಾರೆ. ಬೋಂಗಿರ್‌ನಲ್ಲಿ ಕಾಂಗ್ರೆಸ್‌ನ ಕೋಮಟಿ ರೆಡ್ಡಿ ವೆಂಕಟ ರೆಡ್ಡಿ ಟಿಆರ್‌ಎಸ್‌ನ ಡಾ. ಬೂರಾ ನರಸಯ್ಯ ಗೌಡ್‌ ವಿರುದ್ಧ ಜಯ ಸಾಧಿಸಿ ದ್ದಾರೆ. ಇತ್ತೀಚೆಗೆ ಪ್ರಕಟವಾಗಿರುವ ಚುನಾವಣೋತ್ತರ ಸಮೀಕ್ಷೆಗಳಲ್ಲಿಯೂ ಕೂಡ ಟಿಆರ್‌ಎಸ್‌ ಉತ್ತಮ ಸಾಧನೆ ಮಾಡಲಿದೆ ಎಂದು ಪ್ರಸ್ತಾಪ ಮಾಡಲಾಗಿತ್ತು. ಫೆಡರಲ್‌ ಫ್ರಂಟ್‌ ರಚನೆ ಮಾಡುವ ಉದ್ದೇಶದಿಂದಲೇ ಹೈದರಾಬಾದ್‌ ಲೋಕಸಭಾ ಕ್ಷೇತ್ರದಲ್ಲಿ ಅಸಾದುದ್ದೀನ್‌ ಒವೈಸಿ ಅವರ ಎಎಂಐಎಂ ಪಕ್ಷದ ಜತೆಗೆ ಹೊಂದಾಣಿಕೆ ಮಾಡಿಕೊಂಡಿದ್ದರು ಮತ್ತು ಆ ಕ್ಷೇತ್ರದಲ್ಲಿ ಟಿಆರ್‌ಎಸ್‌ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರಲಿಲ್ಲ.

ಸೋತ ಕವಿತಾ
ನಿಜಾಮಾಬಾದ್‌ ಕ್ಷೇತ್ರದಲ್ಲಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳಲ್ಲದೆ, 185 ಮಂದಿ ರೈತರು ಕಣದಲ್ಲಿದ್ದರು. ಕೆಂಪು ಜೋಳಕ್ಕೆ ತೆಲಂಗಾಣ ಸರ್ಕಾರ ಸೂಕ್ತ ರೀತಿಯ ಬೆಲೆ ನೀಡಲಿಲ್ಲ ಎಂದು ಆರೋಪಿಸಿ ರೈತರು ಸ್ಪರ್ಧೆ ಮಾಡಿದ್ದರು. ಈ ಕ್ಷೇತ್ರದಿಂದ ಸ್ಪರ್ಧೆ ಮಾಡಿದ ಪ್ರಮುಖರಲ್ಲಿ ಸಿಎಂ ಪುತ್ರಿ ಕೆ.ಕವಿತಾ ಪ್ರಮುಖರಾಗಿದ್ದಾರೆ. ಅವರು ಬಿಜೆಪಿಯ ಧರ್ಮಪುರಿ ಅರವಿಂದ ವಿರುದ್ಧ ಸೋಲು ಅನುಭವಿಸಿದ್ದಾರೆ.

ಹಿನ್ನಡೆಗೆ ಕಾರಣ
ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಬಳಿಕ ಟಿಆರ್‌ಎಸ್‌ ಮುಖ್ಯಸ್ಥ ಕೆ.ಚಂದ್ರಶೇಖರ ರಾವ್‌ ರಾಷ್ಟ್ರ ರಾಜಕಾರಣದಲ್ಲಿ ಮಿಂಚುವ ಆಸೆ ಹೊಂದಿದರು. ಫೆಡರಲ್‌ ಫ್ರಂಟ್‌ ರಚನೆ ಹುಮ್ಮಸ್ಸಿನಲ್ಲಿದ್ದ ಅವರು ಪ್ರಚಾರದತ್ತ ಹೆಚ್ಚಿನ ಗಮನ ಕೊಡಲಿಲ್ಲ. ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರ ಬಿರುಸಿನ ಪ್ರಚಾರದ ಮುಂದೆ ಇತರ ಪಕ್ಷಗಳು ಮಂಕಾದವು.

Advertisement

ದಕ್ಷಿಣದಲ್ಲಿ ಬಿಜೆಪಿ ಸಾಧನೆ ಮಾಡುತ್ತಿದೆ ಎನ್ನುವುದಕ್ಕೆ ತೆಲಂಗಾಣದಲ್ಲಿನ ಪಕ್ಷದ ಸಾಧನೆ ಗಮನಾರ್ಹ. ಪಕ್ಷದ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ.
ಮುರಳೀಧರ ರಾವ್‌, ಬಿಜೆಪಿ ನಾಯಕ


ಗೆದ್ದ ಪ್ರಮುಖರು

ಉತ್ತಮ ರೆಡ್ಡಿ, ನಲಗೊಂಡಾ
ಕೋಮಟಿ ರೆಡ್ಡಿ ವೆಂಕಟ ರೆಡ್ಡಿ, ಬೋಂಗಿರ್‌
ಸೋಯಂ ಬಾಪುರಾವ್‌, ಅಡಿಲಾಬಾದ್‌
ಅಸಾದುದ್ದೀನ್‌ ಒವೈಸಿ, ಹೈದರಾಬಾದ್‌
ಬಂಡಿ ಸಂಜಯ ಕುಮಾರ್‌, ಕರೀಂನಗರ

ಸೋತ ಪ್ರಮುಖರು
ಕೆ.ಕವಿತಾ, ನಿಜಾಮಾಬಾದ್‌
ಅನಿಲ್‌ ಕುಮಾರ್‌ ಗಾಲಿ, ಮೇದಕ್‌
ಆಗಂ ಚಂದ್ರಶೇಖರ್‌, ಪೆದ್ದಂಪಲ್ಲಿ
ದೊಮ್ಮಟಿ ಸಂಭಯ್ಯ, ವರಂಗಲ್‌
ಡಾ.ಮಲ್ಲು ರವಿ, ನಗರಕರ್ನೂಲು

Advertisement

Udayavani is now on Telegram. Click here to join our channel and stay updated with the latest news.

Next