ಹೊಸದಿಲ್ಲಿ: ತೆಲಂಗಾಣ ವಿಧಾನಸಭೆ ಚುನಾವಣೆಗೆ ಕೇವಲ 3 ದಿನಗಳು ಬಾಕಿಯಿರುವಂತೆಯೇ ಚುನಾವಣಾ ಆಯೋಗವು “ರೈತ ಬಂಧು’ ಯೋಜನೆಯಡಿ ಅನ್ನದಾತರಿಗೆ ನೀಡಲಾಗುವ ಆರ್ಥಿಕ ನೆರವು ವಿತರಣೆಗೆ ಸಿಎಂ ಕೆ. ಚಂದ್ರಶೇಖರ್ ರಾವ್ ನೇತೃತ್ವದ ರಾಜ್ಯ ಸರಕಾರಕ್ಕೆ ನೀಡಿದ್ದ ಅನುಮತಿಯನ್ನು ವಾಪಸ್ ಪಡೆದಿದೆ.
ಸಚಿವರೊಬ್ಬರು ಈ ಯೋಜನೆಯ ಹೆಸರು ಹೇಳಿಕೊಂಡುಣ ನೀತಿ ಸಂಹಿತೆ ಉಲ್ಲಂಘಿಸಿದ ಬೆನ್ನಲೇ ಈ ಬೆಳವಣಿಗೆ ನಡೆದಿದೆ.ಚುನಾವಣ ಆಯೋಗದ ಈ ಆದೇಶ ಹೊರ ಬೀಳುತ್ತಿದ್ದಂತೆ, ಆಡಳಿತಾರೂಢ ಬಿಆರ್‌ಎಸ್ ಮತ್ತು ಕಾಂಗ್ರೆಸ್ ನಡುವೆ ಭಾರೀ ವಾಕ್ಸಮರ ಆರಂಭವಾಗಿದೆ.
ನೀತಿ ಸಂಹಿತೆ ಜಾರಿಯಲ್ಲಿದ್ದರೂ ಇತ್ತೀಚೆಗಷ್ಟೇ ಚುನಾವಣ ಆಯೋಗವು ಹಿಂಗಾರು ಬೆಳೆಗೆ ನೀಡಲಾಗುವ ಆರ್ಥಿಕ ನೆರವನ್ನು ವಿತರಿಸಲು ರಾಜ್ಯ ಸರಕಾರಕ್ಕೆ ಕೆಲವು ಷರತ್ತುಗಳೊಂದಿಗೆ ಅನುಮತಿ ನೀಡಿತ್ತು. ಜತೆಗೆ ಇದನ್ನು ಪ್ರಚಾರಕ್ಕಾಗಿ ಬಳಸಿ ಕೊಳ್ಳು ವಂತಿಲ್ಲ ಎಂದೂ ಸೂಚಿಸಿತ್ತು. ಆದರೆ ಬಿಆರ್‌ಎಸ್ ನಾಯಕರು ಷರತ್ತು ಉಲ್ಲಂ ಸಿದ ಹಿನ್ನೆಲೆಯಲ್ಲಿ ಅನುಮತಿ ವಾಪಸ್ ಪಡೆಯಲಾಗಿದೆ.
ಪರಸ್ಪರ ಆರೋಪ-ಪ್ರತ್ಯಾರೋಪ: ಆಯೋಗದ ಆದೇಶ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್, “ಕೆಸಿಆರ್ ನೇತೃತ್ವದ ಪಕ್ಷದ ನಾಯಕರ ಬೇಜವಾ ಬ್ದಾರಿಯುತ ವರ್ತನೆ ಹಾಗೂ ಸ್ವಾರ್ಥವೇ ಇದಕ್ಕೆ ಕಾರಣ. ರೈತ ಬಂಧುವಿನಡಿ ಸಿಗುವ ಹಣವು ಅನ್ನದಾತರ ಹಕ್ಕು. ವರ್ಷಪೂರ್ತಿ ಪಟ್ಟ ಪರಿಶ್ರಮಕ್ಕೆ ಸಿಗುತ್ತಿದ್ದ ಫಲವಿದು. ಆದರೆ ಈಗ ಅದನ್ನೂ ಸಿಗದಂತೆ ಮಾಡಿದ ಬಿಆರ್‌ಎಸ್ ಸರಕಾರವನ್ನು, ರೈತರು ಎಂದಿಗೂ ಕ್ಷಮಿಸುವುದಿಲ್ಲ’ ಎಂದು ಹೇಳಿದೆ.
ಇನ್ನೊಂದೆಡೆ ಆಯೋಗದ ಆದೇಶಕ್ಕೆ ಕಾಂಗ್ರೆಸ್ ಕಾರಣ ಎಂದು ಆರೋಪಿಸಿರುವ ಬಿಆರ್‌ಎಸ್ ಎಂಎಲ್‌ಸಿ ಕೆ.ಕವಿತಾ, “ರೈತ ಬಂಧು ಯೋಜನೆಯ ಹಣದ ವಿತರಣೆ ಸ್ಥಗಿತ ಗೊಳಿಸುವಂತೆ ಆಯೋಗಕ್ಕೆ ಕಾಂಗ್ರೆಸ್ ದೂರು ಸಲ್ಲಿಸಿತ್ತು. ಇದು ಕಾಂಗ್ರೆಸ್‌ನ ಕೀಳು ಮಟ್ಟದ ರಾಜಕಾರಣ’ ಎಂದಿದ್ದಾರೆ.
ನಾವೇ ವಿತರಿಸುತ್ತೇವೆ: ಪ್ರಸಕ್ತ ಚುನಾವಣೆಯಲ್ಲಿ ನಾವೇ ಗೆಲ್ಲಲಿದ್ದೇವೆ. ಮತ್ತೂಮ್ಮೆ ಅಧಿಕಾರ ವಹಿಸಿದ ಬಳಿಕ “ರೈತಬಂಧು’ ಅನ್ವಯ ಉಳಿದ ರೈತರಿಗೆ ವಿತ್ತೀಯ ನೆರವು ನೀಡುವುದನ್ನು ಮುಂದುವರಿಸಲಿದ್ದೇವೆ ಎಂದು ಸಿಎಂ ಕೆ.ಚಂದ್ರಶೇಖರ ರಾವ್ ಹೇಳಿದ್ದಾರೆ. ಚೆವಲ್ಲ ಮತ್ತು ಶಾದ್‌ನಗರಗಳಲ್ಲಿನ ರ‍್ಯಾಲಿಗಳಲ್ಲಿ ಮಾತನಾಡಿದ ಅವರು “ನಮ್ಮ ಯೋಜನೆಯಿಂದ ಲಾಭ ಪಡೆದ ಕಾಂಗ್ರೆಸ್‌ನಲ್ಲಿರುವ ಕೆಲವರು ಆಯೋಗಕ್ಕೆ ತಪ್ಪು ಮಾಹಿತಿ ನೀಡಿ ದೂರು ಕೊಟ್ಟಿದ್ದಾರೆ. ಅದರ ಪರಿಣಾಮವಾಗಿ ಆಯೋಗ ಈ ಆದೇಶ ಹೊರಡಿಸಿದೆ’ ಎಂದರು. ನ.30ರಂದು ತೆಲಂಗಾಣದಲ್ಲಿ ಮತದಾನ ನಡೆಯಲಿದ್ದು, ಡಿ.3ರಂದು ಫಲಿತಾಂಶ ಪ್ರಕಟವಾಗಲಿದೆ.