ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಿಗೆ ಲಘು ಹೃದಯಾಘಾತವಾಗಿದ್ದು, ಅವರನ್ನು ಹೈದರಾಬಾದ್ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಟಿವಿ ಮಾಧ್ಯಮಗಳ ವರದಿ ತಿಳಿಸಿದೆ.
ಇದನ್ನೂ ಓದಿ:ಮಾಯಾವತಿ, ಒವೈಸಿಗೆ ಭಾರತ್ ರತ್ನ ಪ್ರಶಸ್ತಿ ಕೊಡಬೇಕು: ರಾವತ್ ಈ ಹೇಳಿಕೆಗೆ ಕಾರಣವೇನು?
ಆದರೆ ಕೆಲವು ಮಾಧ್ಯಮಗಳ ವರದಿ ಪ್ರಕಾರ, ಚಂದ್ರಶೇಖರ್ ರಾವ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆ್ಯಂಜಿಯೋಗ್ರಾಮ್ ಪರೀಕ್ಷೆಯಲ್ಲಿ ಯಾವುದೇ ಬ್ಲಾಕ್ ಪತ್ತೆಯಾಗಿಲ್ಲ. ಕೆಸಿಆರ್ ಗೆ ಯಾವುದೇ ರೀತಿಯ ಹೃದಯ ಸಂಬಂಧಿ ಸಮಸ್ಯೆ ಇಲ್ಲ ಎಂದು ಯಶೋಧಾ ಆಸ್ಪತ್ರೆಯ ವೈದ್ಯರು ತಿಳಿಸಿರುವುದಾಗಿ ಹೇಳಿವೆ.
ಹಿರಿಯ ವೈದ್ಯ ಪ್ರಮೋದ್ ಕುಮಾರ್ ಅವರ ಸಲಹೆ ಮೇರೆಗೆ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ಅವರು ವಿವಿಧ ರೀತಿಯ ಪರೀಕ್ಷೆಗೆ ಒಳಗಾಗಿದ್ದರು. ಎಡಗೈಯಲ್ಲಿ ನೋವು ಕಾಣಿಸಿಕೊಂಡ ನಂತರ ಕೆಸಿಆರ್ ಯಶೋಧಾ ಆಸ್ಪತ್ರೆಗೆ ಭೇಟಿ ನೀಡಿರುವ ವಿಚಾರ ತಿಳಿದಿರುವುದಾಗಿ ವರದಿ ವಿವರಿಸಿದೆ.
ಮುಖ್ಯಮಂತ್ರಿ ಕೆ.ಚಂದ್ರಶೇಖರ್ ಅವರು ಯಶೋಧಾ ಆಸ್ಪತ್ರೆಗೆ ದಾಖಲಾದ ನಂತರ ತೆಲಂಗಾಣ ಹಣಕಾಸು ಸಚಿವ ಹರೀಶ್ ರಾವ್, ಸಚಿವ ಕೆಟಿಆರ್ ದಿಢೀರ್ ಭೇಟಿ ನೀಡಿ ಆರೋಗ್ಯ ವಿಚಾರಿಸಿರುವುದಾಗಿ ವರದಿ ತಿಳಿಸಿದೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಯಾದಾದ್ರಿ ದೇವಸ್ಥಾನಕ್ಕೆ ಭೇಟಿ ನೀಡುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಕೆಸಿಆರ್ ರದ್ದುಗೊಳಿಸಿರುವುದಾಗಿ ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.