ಬೆಂಗಳೂರು: ದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಹೊರತಾದ ರಾಜಕೀಯ ಶಕ್ತಿ ಹುಟ್ಟುಹಾಕುವ ಉದ್ದೇಶದಿಂದ ಪ್ರಾದೇಶಿಕ ಪಕ್ಷಗಳು ಒಗ್ಗೂಡಿ ತೃತೀಯ ರಂಗ ರಚಿಸುವ ಪ್ರಯತ್ನದ ಹಿನ್ನೆಲೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಹಾಗೂ ಟಿಆರ್‌ಎಸ್ ನಾಯಕ ಕೆ.ಚಂದ್ರಶೇಖರ್‌ರಾವ್ ಶುಕ್ರವಾರ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಜತೆ ಮಹತ್ವದ ಮಾತುಕತೆ ನಡೆಸಿದ್ದಾರೆ.
ದೇವೇಗೌಡರ ಪದ್ಮನಾಭನಗರದಲ್ಲಿನ ನಿವಾಸದಲ್ಲಿ ಉಭಯ ನಾಯಕರು ಒಂದೂವರೆ ಗಂಟೆಗೂ ಹೆಚ್ಚು ಹೊತ್ತು ಮಾತುಕತೆ ನಡೆಸಿದ್ದು, ಈ ವೇಳೆ ತೃತೀಯ ರಂಗ ರಚನೆ ಜತೆಗೆ ರಾಜ್ಯ ವಿಧಾನಸಭೆ ಚುನಾವಣೆ ಬಗ್ಗೆಯೂ ಸಮಾಲೋಚನೆ ನಡೆದಿದೆ. ಈ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ನಟ ಪ್ರಕಾಶ್ ರೈ, ಟಿಆರ್‌ಎಸ್ ಸಂಸದರು, ಶಾಸಕರು ಉಪಸ್ಥಿತರಿದ್ದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಚಂದ್ರಶೇಖರ್‌ರಾವ್, ಕೇಂದ್ರದ ಬಿಜೆಪಿ ಸರ್ಕಾರ ಮತ್ತು ಕಾಂಗ್ರೆಸ್ ಹೊರತಾಗಿ ಪ್ರಾದೇಶಿಕ ಪಕ್ಷಗಳನ್ನು ಒಟ್ಟಾಗಿಸಿ ನೂತನ ತೃತೀಯ ರಂಗ ಸ್ಥಾಪನೆಗೆ ಮುಂದಾಗಿದ್ದೇವೆ. ಈಗಾಗಲೇ ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಅಲ್ಲಿನ ಸ್ಥಳೀಯ ಪಕ್ಷಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಇದರ ಮುಂದುವರಿದ ಭಾಗವಾಗಿ ದೇವೇಗೌಡರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ ಎಂದರು.
ಎಚ್.ಡಿ.ದೇವೇಗೌಡ ಮಾತನಾಡಿ, ಪ್ರತ್ಯೇಕ ತೆಲಂಗಾಣ ರಾಜ್ಯ ಸ್ಥಾಪನೆಯಾದ ನಂತರ ಕೆ.ಚಂದ್ರಶೇಖರ್‌ರಾವ್ ಅವರ ಮೊದಲ ಭೇಟಿ ಇದಾಗಿದೆ. ತೆಲಂಗಾಣ ಮುಖ್ಯಮಂತ್ರಿಯಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಪ್ರಾದೇಶಿಕ ಪಕ್ಷಗಳು ಒಗ್ಗೂಡಿ ರಚನೆಗೆ ಮುಂದಾಗಿರುವ ತೃತೀಯ ರಂಗ ಎಂದು ಹೇಳುವುದಕ್ಕಿಂತ ರಾಷ್ಟ್ರೀಯ ಪಕ್ಷಗಳ ವಿರುದ್ಧ ಹೋರಾಟ ಇದಾಗಿದೆ ಎಂದು ಹೇಳಿದರು.
ಜೆಡಿಎಸ್ ಪರ ಕೆಸಿಆರ್ ಪ್ರಚಾರ
ವಿಧಾನಸಭೆ ಚುನಾವಣೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ರಾಜ್ಯದಲ್ಲಿ ಜೆಡಿಎಸ್ ಪರ ಪ್ರಚಾರ ಮಾಡಲಿದ್ದಾರೆ. ಶುಕ್ರವಾರ ದೇವೇಗೌಡರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಶೇಖರರಾವ್, ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪರ ಪ್ರಚಾರ ಮಾಡಲಾಗುವುದು ಎಂದು ಹೇಳಿದರಲ್ಲದೆ, ತೆಲುಗು ಭಾಷಿಕರು ಜೆಡಿಎಸ್ ಬೆಂಬಲಿಸುವಂತೆ ಮನವಿ ಮಾಡಿದರು. ಎಚ್.ಡಿ.ಕುಮಾರಸ್ವಾಮಿ ಅವರು ಎಲ್ಲಿಗೆ ಬರಲು ಹೇಳುತ್ತಾರೋ, ಅಲ್ಲಿಗೆ ತೆರಳಿ ಪ್ರಚಾರದಲ್ಲಿ ಭಾಗವಹಿಸುತ್ತೇನೆ ಎಂದರು.