ರಿಷಬ್ ಶೆಟ್ಟಿ ನಿರ್ಮಾಣದ, ಎಂ.ಭರತರಾಜ್ ನಿರ್ದೇಶನದ “ಲಾಫಿಂಗ್ ಬುದ್ಧ’ ಆಗಸ್ಟ್ 30ರಂದು ತೆರೆಕಾಣಲಿದೆ. ಈಗಾಗಲೇ ಟ್ರೇಲರ್ ಹಾಗೂ ಹಾಡಿನ ಮೂಲಕ ಚಿತ್ರ ನಿರೀಕ್ಷೆ ಹುಟ್ಟಿಸಿದೆ. ಚಿತ್ರದ ಮತ್ತೂಂದು ಆಕರ್ಷಣೆ “ಗಂಟುಮೂಟೆ’ ಖ್ಯಾತಿಯ ನಟಿ ತೇಜು ಬೆಳವಾಡಿ. ಈ ಸಿನಿಮಾಗೆ ಸೇರಿದ ಬಗೆ, ಅಲ್ಲಿನ ಅನುಭವಗಳ ಬಗ್ಗೆ ಅವರು ಮಾತು ಹಂಚಿಕೊಂಡಿದ್ದಾರೆ.
ಚಿತ್ರಕ್ಕೆ ತಾನು ಆಯ್ಕೆಯಾದ ಬಗ್ಗೆ ಮಾತನಾಡುವ ತೇಜು “ನನ್ನ ಗಂಡನ ಜತೆ “ಅಗಲಿರಲಾರೆ..’ಎಂಬ ಹಾಡಿಗೆ ಸಣ್ಣ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದೆ. ಅದನ್ನು ನಿರ್ದೇಶಕ ಭರತರಾಜ್ ಅವರು ನೋಡಿದರು. ಹಾಡಿನಲ್ಲಿ ನಾನು ತೋರಿಸಿದ ಭಾವಾಭಿನಯ ಇಷ್ಟಪಟ್ಟು, ಕರೆ ಮಾಡಿದರು. ನಂತರ ಪ್ರಮೋದ್ ಅವರ ಜತೆ ಲುಕ್ ಟೆಸ್ಟ್ ಆಯಿತು. ಒಂದೇ ದಿನದಲ್ಲಿ ಚಿತ್ರದ ಸತ್ಯವತಿ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿದರು’ ಎನ್ನುತ್ತಾರೆ ತೇಜು.
“ಚಿತ್ರದಲ್ಲಿನ ಸತ್ಯವತಿ ಪಾತ್ರ ನನಗೆ ಅತ್ಯಂತ ಆಪ್ತ. ನಿರ್ದೇಶಕ ಭರತರಾಜ್ ನನ್ನನ್ನು ಯಥಾವತ್ತಾಗಿ ತೆರೆ ಮೇಲೆ ತೋರಿಸಿದ್ದಾರೆ. ಒಂದು ಮನೆ ನಡೆಸುವುದಕ್ಕೆ ಗಂಡ ಬೆನ್ನೆಲುಬಾಗಿ ನಿಂತಿರುತ್ತಾನೆ. ಅದೇ ಅವನು ಜೀವನದಲ್ಲಿ ಕುಗ್ಗಿದಾಗ ಅವನ ಹೆಂಡತಿ ನೀಡುವ ನೈತಿಕ ಬೆಂಬಲ, ಪರಿಸ್ಥಿತಿ ನಿಭಾಯಿಸುವುದು ಈ ರೀತಿಯ ಪಾತ್ರ ನನ್ನದು. ಚಿತ್ರದುದ್ದಕ್ಕೂ ಶಾಂತವಾಗಿ ನನ್ನ ಪಾತ್ರ ಸಾಗುತ್ತದೆ. ಪಾತ್ರಕ್ಕೆ ಹೆಚ್ಚಿನ ತಯಾರಿ ಏನು ಇರಲಿಲ್ಲ’ ಎನ್ನುತ್ತಾರೆ ತೇಜು.
“ಲಾಫಿಂಗ್ ಬುದ್ಧ’ ಏಕೆ ನೋಡಬೇಕು ಎಂಬ ಪ್ರಶ್ನೆಗೆ ಉತ್ತರಿಸುತ್ತಾ, “ಪೊಲೀಸರ ಬಗ್ಗೆ ಹೆಚ್ಚಾಗಿ ಕೆಟ್ಟ ಸುದ್ದಿಗಳನ್ನೇ ಕೇಳುತ್ತೇವೆ. ಈ ಚಿತ್ರದಲ್ಲಿ ಅವರ ಬೇರೊಂದು ಮುಖ ಕಾಣಬಹುದು. ಚಿತ್ರ ನೋಡಿ ಪ್ರೇಕ್ಷಕರು ಹಸನ್ಮುಖರಾಗಿ ಹೊರ ಬರುತ್ತಾರೆ’ ಎನ್ನುತ್ತಾರೆ.