Advertisement

ಅನಂತ್‌ ಮಾತಿನಂತೆ ರಾಜಕೀಯಕ್ಕೆ ತೇಜಸ್ವಿನಿ

06:35 AM Jan 28, 2019 | |

ಬೆಂಗಳೂರು: “ನಮ್ಮಿಬ್ಬರಲ್ಲಿ ಒಬ್ಬರು ರಾಜಕೀಯ ಕ್ಷೇತ್ರದಲ್ಲಿರಬೇಕು ಎಂದು ಹಿಂದೆ ಅನಂತಕುಮಾರ್‌ ಅವರು ಹೇಳಿದ್ದರು. ಅವರ ಮಾತಿನಂತೆ ರಾಜಕೀಯದಲ್ಲಿರಲು ನಿರ್ಧರಿಸಿದ್ದೇನೆ!’ ಇದು ಕೇಂದ್ರದ ಮಾಜಿ ಸಚಿವ ದಿವಂಗತ ಅನಂತಕುಮಾರ್‌ ಅವರ ಪತ್ನಿ ತೇಜಸ್ವಿನಿ ಅನಂತ್‌ ಕುಮಾರ್‌ ಅವರ ಮಾತು. ಅನಂತಕುಮಾರ್‌ ಅವರು ಅಕಾಲಿಕವಾಗಿ ವಿಧಿವಶರಾದ ಬಳಿಕ ರಾಜಕೀಯ ಕ್ಷೇತ್ರದಿಂದ ದೂರವಿರಲು ಬಯಸಿದ್ದರು.

Advertisement

ಆದರೆ ಜನರ ಒತ್ತಾಯ, ಅನಂತಕುಮಾರ್‌ ಅವರು ಹೇಳಿದ್ದ ಮಾತಿನಂತೆ ಕೊನೆಗೂ ರಾಜಕೀಯದಲ್ಲಿರಲು ತೀರ್ಮಾನಿಸಿದ್ದಾರೆ. ಪಕ್ಷ ಬಯಸಿದರೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. “ಉದಯವಾಣಿ’ಯೊಂದಿಗೆ ಹಂಚಿಕೊಂಡ ಮಾತುಗಳ ಸಾರ ಇಲ್ಲಿದೆ.

ನಾನು ರಾಜಕೀಯದಲ್ಲಿ ಇರದಿದ್ದರೂ ಎರಡು ದಶಕಕ್ಕಿಂತಲೂ ಹೆಚ್ಚು ಕಾಲದಿಂದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲೇ ಕಳೆದಿದ್ದೇನೆ. 1997ರಲ್ಲಿ ಅದಮ್ಯ ಚೇತನ ಸಂಸ್ಥೆ ಸ್ಥಾಪನೆಯಾಯಿತು. ಅನಂತಕುಮಾರ್‌ ಅವರು 1998ರ ಲೋಕಸಭಾ ಚುನಾವಣೆಯಿಂದಲೂ ಪ್ರಚಾರ ಇತರೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಹಾಗಿದ್ದರೂ ರಾಜಕೀಯ ಕ್ಷೇತ್ರದಲ್ಲಿರುವ ಇಚ್ಛೆ ಇರಲಿಲ್ಲ ಎಂದು ತೇಜಸ್ವಿನಿ ಅನಂತಕುಮಾರ್‌ ತಿಳಿಸಿದರು.

ರಾಜಕೀಯದ ವಿಚಾರ ಕುರಿತು ಚರ್ಚಿಸುವಾಗ ನಮ್ಮಿಬ್ಬರಲ್ಲಿ ಒಬ್ಬರು ರಾಜಕೀಯದಲ್ಲಿರಬೇಕು ಎಂದು ಅನಂತಕುಮಾರ್‌ ಹೇಳಿದ್ದರು. ಆದರೆ ಅಕಾಲಿಕವಾಗಿ ಅವರನ್ನು ಕಳೆದುಕೊಳ್ಳಬೇಕಾಯಿತು. ನಂತರವೂ ನಾನು ರಾಜಕೀಯದಲ್ಲಿರಲು ಬಯಸಿರಲಿಲ್ಲ. ಅದಮ್ಯ ಚೇತನ ಸಂಸ್ಥೆಯ ಮೂಲಕವೇ ಸಮಾಜ ಸೇವೆ ಮುಂದುವರಿಸಲು ಚಿಂತಿಸಿದ್ದೆ.

ಆದರೆ ಸಾಕಷ್ಟು ಮಂದಿ ರಾಜಕೀಯದಲ್ಲಿರುವಂತೆ ಮನವಿ, ಒತ್ತಾಯ ಮಾಡುತ್ತಿದ್ದರು. ಅನಂತಕುಮಾರ್‌ ಅವರು ಹೇಳಿದ ಮಾತುಗಳು ನೆನಪಾಗುತ್ತಿದ್ದವು. ಅವರ ಕನಸು, ಆಶಯವನ್ನು ಮುಂದುವರಿಸುವ ಉದ್ದೇಶದಿಂದ ರಾಜಕೀಯ ಕ್ಷೇತ್ರದಲ್ಲಿರಲು ನಿರ್ಧರಿಸಿದ್ದೇನೆ ಎಂದು ಹೇಳಿದರು.

Advertisement

ಬೆಂಗಳೂರು ದಕ್ಷಿಣ ಕ್ಷೇತ್ರವು ಬಹಳ ವಿಶಿಷ್ಟತೆಗಳಿಂದ ಕೂಡಿದೆ. ದೇಶ ಹಾಗೂ ಜಗತ್ತಿಗೆ ಉತ್ತಮ ಪ್ರತಿಭೆಗಳನ್ನು ನೀಡಿದ ಶಿಕ್ಷಣ ಸಂಸ್ಥೆಗಳು ದಕ್ಷಿಣ ಭಾಗದಲ್ಲಿವೆ. ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಏರೋಸ್ಪೇಸ್‌ ಇತರೆ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದೆ. ಜತೆಗೆ ಸಾಂಸ್ಕೃತಿಕ ವೈವಿಧ್ಯತೆಯನ್ನು ಉಳಿಸಿಕೊಂಡು ಬಂದಿದೆ.

ಜತೆಗೆ ಪರಿಸರ ಸಂರಕ್ಷಣೆಗೂ ವಿಶೇಷ ಒತ್ತು ನೀಡಲಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಬೆಂಗಳೂರು ದಕ್ಷಿಣ ಕ್ಷೇತ್ರ ಎಲ್ಲ ದೃಷ್ಟಿಯಿಂದಲೂ ವಿಶೇಷವೆನಿಸಿದೆ. ಹಣ, ತೋಳ್ಬಲವಿಲ್ಲದ ಮಧ್ಯಮ ವರ್ಗದವರು ಚುನಾವಣೆಯಲ್ಲಿ ಗೆಲ್ಲಬಹುದು ಎಂಬುದನ್ನು ಅನಂತಕುಮಾರ್‌ ಅವರು ತೋರಿಸಿಕೊಟ್ಟಿದ್ದಾರೆ. ಅದು ಮುಂದುವರಿಯಬೇಕಿದೆ. ಪಕ್ಷ ಬಯಸಿದರೆ ಈ ಕ್ಷೇತ್ರದಿಂದಲೇ ಸ್ಪರ್ಧಿಸಲು ಚಿಂತಿಸಿದ್ದೇನೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರ ಕೈಬಲಪಡಿಸಬೇಕಿದೆ. ಅವರ ಆಶಯದಂತೆ ದೇಶವನ್ನು ಅಭಿವೃದ್ಧಿಪಡಿಸುವಂತೆ ಎಲ್ಲ ಹಂತಗಳಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕಿದೆ. ನಾನು ಪಕ್ಷದ ಸದಸ್ಯತ್ವವನ್ನೂ ಪಡೆದಿದ್ದೇನೆ. ಅನಂತಕುಮಾರ್‌ಅವರನ್ನು ವಿವಾಹದಾಗಲೇ ಪಕ್ಷವನ್ನೂ ಸೇರಿದ್ದೇನೆ. ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಅನಂತಕುಮಾರ್‌ ಸಾಕಷ್ಟು ಕನಸು ಕಂಡಿದ್ದರು. ಅದನ್ನು ಮುಂದುವರಿಸುವ ಜತೆಗೆ ಜನರ ಒತ್ತಾಸೆಯಂತೆ ಸ್ಪರ್ಧಿಸಲು ಚಿಂತಿಸಿದ್ದೇನೆ ಎಂದು ತಿಳಿಸಿದರು.

ಪಕ್ಷ ಇಚ್ಛಿಸಿ ಸೂಚಿಸಿದರೆ ಸ್ಪರ್ಧೆ: ಅನಂತಕುಮಾರ್‌ ಅವರು ವಿಧಿವಶರದ ಬಳಿಕ ರಾಜಕೀಯದಲ್ಲಿರುವಂತೆ ಪಕ್ಷದ ಹಿರಿಯ ನಾಯಕರೆಲ್ಲಾ ಮೌಖೀಕವಾಗಿ ಸೂಚಿಸುತ್ತಿದ್ದರು. ಇಂತಹ ಹೊತ್ತಿನಲ್ಲಿ ರಾಜಕೀಯದಿಂದ ದೂರ ಉಳಿಯುವ ಮಾತುಗಳನ್ನಾಡಬಾರದು. ಅನಂತಕುಮಾರ್‌ ಅವರ ಆಶಯಗಳನ್ನು ಜಾರಿಗೊಳಿಸಲು ರಾಜಕೀಯ ಪ್ರವೇಶಿಸಬೇಕು ಎಂದು ಹಿರಿಯ ನಾಯಕರು ಹೇಳಿದ್ದರು. ಹಾಗಾಗಿ ಪಕ್ಷ ಇಚ್ಛಿಸಿ ಸ್ಪರ್ಧಿಸುವಂತೆ ಸೂಚಿಸಿದರೆ ಸ್ಪರ್ಧಿಸುತ್ತೇನೆ ಎಂದು ತೇಜಸ್ವಿನಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next