ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಎದ್ದಿರುವ ಗೊಂದಲ ಬಗೆಹರಿಸುವ ಸಂಬಂಧ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರು ಸೋಮವಾರ ಕ್ಷೇತ್ರ ವ್ಯಾಪ್ತಿಯ ಶಾಸಕರ ಹಾಗೂ ಮುಖಂಡರ ಸಭೆ ನಡೆಸಿದ್ದರು. ಸಭೆಯಲ್ಲಿ ಬಹುತೇಕರು ತೇಜಸ್ವಿನಿ ಅನಂತ ಕುಮಾರ್ ಅವರಿಗೆ ಟಿಕೆಟ್ ನೀಡುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಭೆಯ ನಂತರ ಮಾತನಾಡಿದ ಆರ್. ಅಶೋಕ್, ದಿವಂಗತ ಅನಂತಕುಮಾರ್ ಅವರ ಆದರ್ಶಗಳನ್ನು ನಾವು ಜೀವಂತವಾಗಿಡಬೇಕಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಬಗ್ಗೆ ಚರ್ಚೆ ಮಾಡಿದ್ದೇವೆ. ತೇಜಸ್ವಿನಿ ಅನಂತಕುಮಾರ ಈ ಕ್ಷೇತ್ರದ ಅಭ್ಯರ್ಥಿ ಆಗಬೇಕೆಂಬ ಅಭಿಪ್ರಾಯ ಎಲ್ಲರಿಂದ ವ್ಯಕ್ತವಾಗಿದೆ. ಸಭೆಯಲ್ಲಿ ಇದ್ದವರು ಎಲ್ಲರೂ ಬೆಂಗಳೂರು ದಕ್ಷಿಣಕ್ಕೆ ತೇಜಸ್ವಿನಿ ಅನಂತಕುಮಾರ ಅಭ್ಯರ್ಥಿ ಆಗಬೇಕು ಎಂದು ಹೇಳಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಹಾಗೂ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಅವರು ಮುಂದಿನ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು.
ಶಾಸಕ ವಿ.ಸೋಮಣ್ಣ ಮಾತನಾಡಿ, ಬೆಂಗಳೂರು ದಕ್ಷಿಣ ಬಿಜೆಪಿ ಭದ್ರಕೋಟೆ. ಅನಂತಕುಮಾರ ಸವಿನೆನಪಿಗೆ ಮುಡಿಪಾಗಿಡಲು ಈ ಚುನಾವಣೆ ಎದುರಿಸುತ್ತೇವೆ. ನಾಳೆಯಿಂದಲೇ ನಾವು ಲೋಕಸಭೆ ಚುನಾವಣೆ ಕಾರ್ಯ ಆರಂಭ ಮಾಡುತ್ತೇವೆ. ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸಹೋದರಿ ತೇಜಸ್ವಿನಿ ಅನಂತಕುಮಾರ ಅವರನ್ನು ಆರಿಸಿ ಕಳುಹಿಸುವ ಕೆಲಸ ಮಾಡುತ್ತೇವೆ ಎಂದರು.
ಕ್ಷೇತ್ರ ಪ್ರಮುಖರ ಸಭೆ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದಿವಂಗತ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರು ಸೋಮವಾರ ಬಿಜೆಪಿ ಲೋಕಸಭಾ ಚುನಾವಣಾ ಉಸ್ತುವಾರಿ ಆರ್. ಅಶೋಕ್ ಅವರ ಮನೆಗೆ ಭೇಟಿ ನೀಡಿ ಸುಮಾರು 45 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ. ತಮಗೆ ಟಿಕೆಟ್ ಸಿಗುವುದು ಖಚಿತ ಎಂದು ಭಾವಿಸಿದ್ದ ತೇಜಸ್ವಿನಿಯವರು ಈ ಸಂಬಂಧ ಹೆಚ್ಚಿನ ಪ್ರಯತ್ನಕ್ಕೆ ಹೋಗಿರಲಿಲ್ಲ. ಆದರೆ, ಇಷ್ಟು ವರ್ಷದಿಂದ ಪಕ್ಷದ ಚಟುವಟಿಕೆಯಲ್ಲಿ ಭಾಗಿಯಾಗಿರುವ ತಮ್ಮ ಸಹಕಾರ ಕೋರಲು ಆಗಮಿಸಿಲ್ಲ ಎಂದು ಅನೇಕ ಹಿರಿಯ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಕೆಲವರಂತೂ ಅವರ ವಿರುದ್ಧ ಕೆಲಸ ಮಾಡಲು ಮುಂದಾಗಿದ್ದರು. ಹೀಗಾಗಿ ಎಲ್ಲ ನಾಯಕರನ್ನೂ ಭೇಟಿ ಮಾಡಿ ವಿಶ್ವಾಸಕ್ಕೆ ತೆಗೆದುಕೊಂಡರೆ ಮಾತ್ರ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದು ಎಂದು ವರಿಷ್ಠರ ಸೂಚನೆ ಹಿನ್ನೆಲೆಯಲ್ಲಿ ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಚರ್ಚೆ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿ ತೇಜಸ್ವಿನಿ ಅನಂತಕುಮಾರ್, ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಲವು ನಾಯಕರೊಂದಿಗೆ ಚರ್ಚೆ ಮಾಡಿ ಮುಂದುವರಿಸುತ್ತಿದ್ದೇನೆ ಎಂದು ಹೇಳಿದರು.
ಬೆಂಗಳೂರು ದಕ್ಷಿಣದಿಂದ ನಾನು ನಿಲ್ಲಬೇಕು ಎಂದು ನನ್ನ ಹೆಸರು ಕೇಂದ್ರಕ್ಕೆ ಶಿಪಾರಸು ಮಾಡಲು ನಿರ್ಧರಿಸಲಾಗಿದೆ. ನನ್ನ ಮೇಲೆ ನಂಬಿಕೆ ಇಟ್ಟು ಈ ನಿರ್ಧಾರ ಕೈಗೊಂಡಿದ್ದಾರೆ. ನಮ್ಮ ನಾಯಕರ ನಂಬಿಕೆಯನ್ನು ಉಳಿಸುವ ಕಾರ್ಯ ಮಾಡುತ್ತೇನೆ.
-ತೇಜಸ್ವಿನಿ ಅನಂತಕುಮಾರ್