Advertisement

ದಕ್ಷಿಣಕ್ಕೆ ತೇಜಸ್ವಿ ಸೂರ್ಯ ಬಿಜೆಪಿ ಅಭ್ಯರ್ಥಿ

12:22 PM Mar 26, 2019 | Lakshmi GovindaRaju |

ಬೆಂಗಳೂರು: ತೀವ್ರ ಕುತೂಹಲ ಮೂಡಿಸಿರುವ ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಸೋಮವಾರ ತಡರಾತ್ರಿ ಅಂತಿಮಗೊಂಡಿದೆಯಾದರೂ ಅಧಿಕೃತ ಘೋಷಣೆ ಬಾಕಿಯಿದ್ದು, ಕುತೂಹಲ ಮೂಡಿಸಿದೆ.

Advertisement

ದಕ್ಷಿಣ ಕ್ಷೇತ್ರಕ್ಕೆ ಈ ನಡುವೆ ಶಾಸಕರಾದ ಎಲ್‌.ಎ.ರವಿಸುಬ್ರಹ್ಮಣ್ಯ, ಎಸ್‌.ಸುರೇಶ್‌ ಕುಮಾರ್‌ ಅವರ ಹೆಸರು ದಿಢೀರ್‌ ಕೇಳಿಬಂತು. ಜತೆಗೆ, ಪ್ರಖರ ಹಿಂದುತ್ವ ಪ್ರತಿಪಾದಕರು ಹಾಗೂ ಯುವ ಜನತೆಯನ್ನು ಸೆಳೆಯುವ ವಾಗ್ಮಿಯೊಬ್ಬರನ್ನು ಕಣಕ್ಕಿಳಿಸುವ ಬಗ್ಗೆ ವರಿಷ್ಠರ ಮಟ್ಟದಲ್ಲಿ ಚರ್ಚೆ ನಡೆಯಿತು.

ಚಕ್ರವರ್ತಿ ಸೂಲಿಬೆಲೆ, ತೇಜಸ್ವಿ ಸೂರ್ಯ ಸೇರಿದಂತೆ ಕೆಲವರ ಹೆಸರು ಚಾಲ್ತಿಗೆ ಬಂದಿದ್ದವು ಎಂದು ಹೇಳಲಾದ‌ರೂ ವರಿಷ್ಠರು ಯಾರನ್ನು ಆಯ್ಕೆ ಮಾಡಿದ್ದಾರೆ ಎಂಬುದು ತಡರಾತ್ರಿವರೆಗೆ ಗೌಪ್ಯವಾಗಿಯೇ ಉಳಿದಿತ್ತು. ಈ ನಡುವೆ ಗ್ರಾಮಾಂತರ ಕ್ಷೇತ್ರದಿಂದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಪುತ್ರಿ ನಿಶಾ ಹೆಸರು ಕೇಳಿಬಂದಿದ್ದರೂ ಈ ಬಗ್ಗೆ ಕ್ಷೇತ್ರದಲ್ಲಿ ಪ್ರತಿರೋಧ ವ್ಯಕ್ತವಾಗಿತ್ತು.

ಪುತ್ರಿ ಬದಲಿಗೆ ಯೋಗೇಶ್ವರ್‌ ಅವರಿಗೇ ಟಿಕೆಟ್‌ ನೀಡಬೇಕೆಂಬ ಒತ್ತಾಯವೂ ಇತ್ತು. ಆದರೆ ಸ್ಪರ್ಧೆಗೆ ಯೋಗೇಶ್ವರ್‌ ಒಲವು ತೋರಲಿಲ್ಲ ಎನ್ನಲಾಗಿದೆ. ಹೀಗಾಗಿ ಮಾಜಿ ಶಾಸಕ ಸುರೇಶ್‌ಗೌಡ ಹೆಸರು ಚಾಲ್ತಿಗೆ ಬಂದಿದ್ದು, ಈ ಕ್ಷೇತ್ರದ ಅಭ್ಯರ್ಥಿ ಘೋಷಣೆ ಬಾಕಿದೆ.

ರಾಜ್ಯ ಬಿಜೆಪಿ ಕೋರ್‌ ಕಮಿಟಿಯಲ್ಲಿ ತೇಜಸ್ವಿನಿ ಅನಂತ ಕುಮಾರ್‌ ಅವರ ಹೆಸರನ್ನು ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಶಿಫಾರಸು ಮಾಡಿದ್ದರು ಎನ್ನಲಾಗಿತ್ತು. ಆದರೆ, ಮೊದಲ ಎರಡು ಪಟ್ಟಿಯಲ್ಲಿ ಆ ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಣೆಯಾಗದಿರುವುದು ಸಹಜವಾಗಿಯೇ ತೇಜಸ್ವಿನಿ ಅನಂತಕುಮಾರ್‌ ಹಾಗೂ ಬೆಂಬಲಿಗರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು.

Advertisement

ಬೆಂಬಲಿಗರನ್ನು ಸಮಾಧಾನಪಡಿಸಿದ ತೇಜಸ್ವಿನಿ: ಮೊದಲ ಎರಡು ಪಟ್ಟಿಗಳಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಣೆಯಾಗದ ಕಾರಣ ಆಕ್ರೋಶಗೊಂಡಿದ್ದ ನೂರಾರು ಬೆಂಬಲಿಗರು, ಬಿಜೆಪಿ ಕಾರ್ಯಕರ್ತರು ಸೋಮವಾರ ತೇಜಸ್ವಿನಿ ಅನಂತಕುಮಾರ್‌ ಅವರ ನಿವಾಸದ ಬಳಿ ಜಮಾಯಿಸಿದ್ದರು.

ಆದರೆ ಅವರನ್ನು ಸಮಾಧಾನಪಡಿಸಿದ ತೇಜಸ್ವಿನಿ ಅವರು, ವರಿಷ್ಠರ ನಿರ್ಧಾರದಂತೆ ಮುಂದುವರಿಯೋಣ ಎಂಂದು ತಿಳಿಸಿದರು. ಈ ಬಗ್ಗೆ ಟ್ವೀಟ್‌ ಮಾಡಿರುವ ತೇಜಸ್ವಿನಿ ಅನಂತಕುಮಾರ್‌, ಆಕ್ರೋಶಗೊಂಡಿರುವ ನೂರಾರು ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರು ಸೋಮವಾರ ಮನೆಗೆ ಬಂದಿದ್ದರು.

ಅನಂತ ಕುಮಾರ್‌ ಅವರು ದೇಶ ಮೊದಲು, ಪಕ್ಷ ನಂತರ, ನಾನು ಕೊನೆ ಎಂದು ನಂಬಿದ್ದವರು. ಅದರಂತೆ ನಾವೆಲ್ಲಾ ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುವ ಜತೆಗೆ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗೋಣ ಎಂಬುದಾಗಿ ಹೇಳಿದ್ದೇನೆ’ ಎಂದು ಚಿತ್ರಸಹಿತ ಸಂದೇಶ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next