ಬೆಂಗಳೂರು: ಕೋವಿಡ್ ಲಸಿಕೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ವದಂತಿ ಹಬ್ಬಿಸುತ್ತಿರುವುದು ಸಾರ್ವಜನಿಕರ ಜೀವದೊಂದಿಗೆ ಚಲ್ಲಾಟವಾಡಿದಂತೆ ಎಂದು ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದರು.
ಕೋವಿಡ್ ಲಸಿಕೆಗೆ ಸಂಬಂಧಿಸಿ ಪಾಲಿಕೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಲಸಿಕೆಗೆ ಬಿಜೆಪಿ ಲಸಿಕೆ ಎಂದು ಹೇಳುವುದು ಹಾಗೂ ಇದರ ಬಗ್ಗೆೆ ಸಾರ್ವಜನಿಕರನ್ನು ತಪ್ಪು ದಾರಿಗೆ ಎಳೆಯುವುದು ಬೇಜವಾಬ್ದಾರಿಯ ನಡೆ. ಲಸಿಕೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ರಾಜಕಾರಣಿ ಅಕಿಲೇಶ್ ಯಾದವ್ ಸೇರಿದಂತೆ ಮತ್ತಿತರರು ಈ ರೀತಿ ಮಾತನಾಡಿದ್ದಾರೆ. ಇಲ್ಲಿಯವರೆಗೆ ರಾಜ್ಯದ ಯಾವುದೇ ರಾಜಕಾರಣಿಯೂ ಲಸಿಕೆಯ ಬಗ್ಗೆೆ ಹಗುರವಾಗಿ ಮಾತನಾಡಿಲ್ಲ.
ಕೋವಿಡ್ ಲಸಿಕೆ ಬರುವುದರಿಂದ ಲಕ್ಷಾಂತರ ಜನರ ಜೀವ ಉಳಿಯಲಿದೆ. ಕೊರೊನಾ ಬರುವುದಕ್ಕೂ ಮುನ್ನ ಇದ್ದ ಪರಿಸ್ಥಿತಿ ನಿರ್ಮಾಣವಾಗಲಿದೆ. ಹೀಗಾಗಿ, ರಾಜ್ಯದ ಎಲ್ಲ ರಾಜಕೀಯ ನಾಯಕರಲ್ಲಿ ತಪ್ಪು ಮಾಹಿತಿ ನೀಡದಂತೆ ಮನವಿ ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ:ಚಿಕ್ಕಮಗಳೂರು ಜಿಲ್ಲೆಯಲ್ಲಿ 4 ವಿದ್ಯಾರ್ಥಿಗಳು ಮತ್ತು 2 ಶಿಕ್ಷಕರಲ್ಲಿ ಕೋವಿಡ್ ಸೋಂಕು ಪತ್ತೆ
ಕೋವಿಡ್ ಲಸಿಕೆಗೆ ಸಂಬಂಧಿಸಿದ ಸುಳ್ಳು ಸುದ್ದಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಲಸಿಕೆಗಾಗಿ ಜನ ಕಾತುರದಿಂದ ಕಾಯುತ್ತಿದ್ದಾರೆ. ಹಲವು ಹಂತದ ಸಂಶೋಧನೆಗಳ ನಂತರವಷ್ಟೇ ಲಸಿಕೆ ಮಾರುಕಟ್ಟೆೆಗೆ ಮುಕ್ತವಾಗಲಿದೆ. ಹೀಗಾಗಿ, ಯಾವುದೇ ಆತಂಕ ಬೇಡ ಎಂದರು.