Advertisement

ಬಿಹಾರ ಚುನಾವಣಾ ಕದನ: 4 ಬಾರಿ ಸಿಎಂ ಆದ ನಿತೀಶ್ ಗೆ ತೇಜಸ್ವಿ ಯಾದವ್ ಸವಾಲು!

06:28 PM Oct 14, 2020 | Nagendra Trasi |

ಪಾಟ್ನಾ: ಬಿಹಾರ ವಿರೋಧ ಪಕ್ಷದ ನಾಯಕ, ಮಹಾಘಟಬಂಧನ್ ಮೈತ್ರಿಯ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿರುವ ನಿತೀಶ್ ಕುಮಾರ್ ಅವರ ತವರು ಕ್ಷೇತ್ರ ನಳಂದಾದಲ್ಲಿಯೂ ಸ್ಪರ್ಧಿಸುವುದಾಗಿ ಸವಾಲೆಸೆದಿದ್ದಾರೆ.

Advertisement

ನಳಂದಾದ ಯಾವುದೇ ಕ್ಷೇತ್ರದಲ್ಲಿಯೇ ನಿತೀಶ್ ಕುಮಾರ್ ಸ್ಪರ್ಧಿಸಿದರೂ ನಾನು ಅವರ ವಿರುದ್ಧ ಸ್ಪರ್ಧಿಸುತ್ತೇನೆ ಎಂದು ತೇಜಸ್ವಿ(30ವರ್ಷ) ರಾಘೋಪುರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡುತ್ತ ಈ ಪ್ರತಿಕ್ರಿಯೆ ನೀಡಿದ್ದಾರೆ.

ನಾಮಪತ್ರ ಸಲ್ಲಿಸುವ ವೇಳೆ ಹಾಜಿಪುರ್ ನಿಂದ ತೆರಳುವ ಮುನ್ನ ತೇಜಸ್ವಿ ಯಾದವ್ ತಾಯಿ ರಾಬ್ರಿ ದೇವಿ ಹಾಗೂ ಸಹೋದರ ತೇಜ್ ಪ್ರತಾಪ್ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದರು. ರಾಬ್ರಿ ದೇವಿ ಅವರು ಪತಿ ಲಾಲುಪ್ರಸಾದ್ ಯಾದವ್ ಅವರ ಫೋಟೋವನ್ನು ಕೈಯಲ್ಲಿ ಹಿಡಿದುಕೊಂಡಿದ್ದರು. ಲಾಲುಪ್ರಸಾದ್ ಬಹುಕೋಟಿ ಮೇವು ಹಗರಣದಲ್ಲಿ ದೋಷಿಯಾಗಿದ್ದು, ರಾಂಚಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಲಾಲುಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾದಳ 2015ರಲ್ಲಿ ನಡೆದ ಚುನಾವಣೆಯಲ್ಲಿ 80 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್, ಆರ್ ಜೆಡಿ ಹಾಗೂ ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾದಳ ಮಹಾಮೈತ್ರಿಯೊಂದಿಗೆ ಚುನಾವಣೆ ಎದುರಿಸಿತ್ತು. 2015ರಲ್ಲಿ ಜೆಡಿಯು 71 ಸ್ಥಾನ, ಕಾಂಗ್ರೆಸ್ 27 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.

ಇದನ್ನೂ ಓದಿ:ನಾಡ ಹಬ್ಬ ದಸರಾ ಸರಳ ಆಚರಣೆಗೆ ಮಾರ್ಗ ಸೂಚಿ ಪ್ರಕಟ: ಏನಿದೆ ಮಾರ್ಗಸೂಚಿಯಲ್ಲಿ?

Advertisement

ಎರಡು ವರ್ಷಗಳ ಆಡಳಿತಾವಧಿಯಲ್ಲಿ 2017ರ ಜುಲೈನಲ್ಲಿ ನಿತೀಶ್ ಕುಮಾರ್ ಪಕ್ಷ ಬಿಜೆಪಿ ಜತೆ ಕೈಜೋಡಿಸಿತ್ತು. 2013ರಲ್ಲಿ ಎನ್ ಡಿಎ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿದ್ದರಿಂದ ಮುನಿಸಿಕೊಂಡಿದ್ದ ನಿತೀಶ್ ಎನ್ ಡಿಎ ಮೈತ್ರಿಯಿಂದ ಹೊರಬಂದಿದ್ದರು.

ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ತೇಜಸ್ವಿ ಯಾದವ್ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ನಿತೀಶ್ ಕುಮಾರ್ ಕೂಡಾ ತಿರುಗೇಟು ನೀಡಿದ್ದು, ನಿಮ್ಮ ತಂದೆ, ತಾಯಿಯ(ಲಾಲು, ರಾಬ್ರಿ)15 ವರ್ಷಗಳ ಕಾಲಾವಧಿಯಲ್ಲಿ ಎಷ್ಟು ಉದ್ಯೋಗ ಸೃಷ್ಟಿಯಾಗಿದೆ ಎಂಬುದನ್ನು ಮತದಾರರು ಕೇಳಲಿದ್ದಾರೆ ಎಂದು ಹೇಳಿದ್ದರು.

ಇದನ್ನೂ ಓದಿ:ಬಿಹಾರ ಚುನಾವಣೆ 2020: 3ವರ್ಷ V/S 30 ವರ್ಷ! ಪಪ್ಪು ಯಾದವ್ ಪಿಡಿಎ ಮುಖ್ಯಮಂತ್ರಿ ಅಭ್ಯರ್ಥಿ

ಅಕ್ಟೋಬರ್ 28ರಂದು ಬಿಹಾರ ಮೊದಲ ಹಂತದ ವಿಧಾನಸಭಾ ಚುನಾವಣೆ ನಡೆಯಲಿದೆ, ನವೆಂಬರ್ 3ರಂದು ಎರಡನೇ ಹಂತ, ನವೆಂಬರ್ 7ರಂದು ಮೂರನೇ ಹಂತದ ಚುನಾವಣೆ ನಡೆಯಲಿದೆ. ನವೆಂಬರ್ 10ರಂದು ಫಲಿತಾಂಶ ಪ್ರಕಟವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next