ಮುಂಬಯಿ: ರೈಲ್ವೇ ನಿಲ್ದಾಣದಲ್ಲಿ ಎಲ್ಲರೂ ಕೇಳುವಂಥ ಒಂದು ಪ್ರಶ್ನೆ ಇದೆ, ಬೆಳಗ್ಗೆ 6 ಗಂಟೆ ಟ್ರೈನ್ ಹೋಯ್ತಾ ಅಂತ! ಆದರೆ, ಈ ಪ್ರಶ್ನೆ ಕೇಳ್ಳೋದು ಬೆಳಗ್ಗೆ ಐದುವರೆಗೋ ಅಥವಾ ಐದು ಮುಕ್ಕಾಲಿಗೋ ಅಲ್ಲ, ಬೆಳಗ್ಗೆ 9 ಗಂಟೆಗೆ ಬಂದು ಕೆಲವರು ಇಂಥ ಪ್ರಶ್ನೆ ಕೇಳ್ತಾರೆ. ವಿಚಿತ್ರವೆಂದರೆ ಅದೆಷ್ಟೋ ಬಾರಿ, 6 ಗಂಟೆ ಟ್ರೈನ್ ಇನ್ನೂ ಹೋಗಿರಲ್ಲ, ಇನ್ನು ಬರಬೇಕಾಗಿರುತ್ತೆ! ಹೀಗಾಗಿಯೇ ತಡವಾಗಿ ಹೊರಡುವುದು, ಅಲ್ಲೆಲ್ಲೋ ನಿಲ್ಲುವುದು, ತಡವಾಗೇ ತಲುಪುವುದು ಭಾರತದ ರೈಲುಗಳ ಹುಟ್ಟು ಗುಣ. ಅದರಲ್ಲೂ ಕ್ರಾಸಿಂಗ್ ಕಾರಣದಿಂದ ಹತ್ತಿಪ್ಪತ್ತು ನಿಮಿಷ ಹಳಿ ಮೇಲೆ ಅಲುಗದೇ ನಿಲ್ಲುವ ಯಾವುದೇ ರೈಲು ತಲುಪ ಬೇಕಾದ ಸ್ಥಳವನ್ನು ಲೇಟಾಗಿಯೇ ತಲುಪುವುದೂ ಸಾಮಾನ್ಯ.
ಇದು ಎಲ್ಲ ರೈಲುಗಳ ಹಣೆಬರಹ. ಆದರೆ ಮುಂಬಯಿ -ಗೋವಾ ನಡುವೆ ಸಂಚರಿಸುವ ‘ತೇಜಸ್’ ಮಾತ್ರ ಈ ಲೇಟ್ ಲತೀಫ್ ರೈಲುಗಳ ಸಾಲಿನಿಂದ ದೂರ ಉಳಿದಿದೆ. ರವಿವಾರ ಸಂಜೆ ‘ತೇಜಸ್’ ಎಂದಿಗಿಂತ ಒಂದು ನಿಮಿಷ ಮೊದಲೇ ಮುಂಬಯಿಯ ಛತ್ರಪತಿ ಶಿವಾಜಿ ರೈಲು ನಿಲ್ದಾಣ ಪ್ರವೇಶಿಸಿದಾಗ ಅಲ್ಲಿದ್ದವರಿಗೆ ಅಚ್ಚರಿಯೋ ಅಚ್ಚರಿ! ಈ ಅಚ್ಚರಿ ರೈಲು ಬರೀ ಒಂದು ನಿಮಿಷ ಬೇಗ ಬಂದಿದ್ದಕ್ಕಲ್ಲ. ಬದಲಿಗೆ, ಗೋವಾದಿಂದ 3 ಗಂಟೆ ತಡವಾಗಿ ಹೊರಟ ತೇಜಸ್, ನಿಗದಿತ ಸಮಯಕ್ಕಿಂತ 1 ನಿಮಿಷ ಮೊದಲೇ ಬಂದಿತಲ್ಲ ಎಂಬುದೇ ಇದಕ್ಕೆ ಕಾರಣವಾಗಿತ್ತು!
ಸಾಮಾನ್ಯವಾಗಿ ಗೋವಾದ ಕರ್ಮಲಿ ನಿಲ್ದಾಣದಿಂದ ಬೆಳಗ್ಗೆ 7.30ಕ್ಕೆ ಹೊರಟು ಸಂಜೆ 7.45ಕ್ಕೆ ಮುಂಬಯಿ ತಲುಪುತ್ತಿದ್ದ ತೇಜಸ್, ಅಂದು ಕರ್ಮಲಿ ನಿಲ್ದಾಣದಿಂದ ಹೊರಟಾಗ ಸಮಯ ಬೆಳಗ್ಗೆ 10.30! ಮೂರು ತಾಸು ತಡವಾಗಿ ಹೊರಟರೂ ಛತ್ರಪತಿ ಶಿವಾಜಿ ರೈಲು ನಿಲ್ದಾಣವನ್ನು ಸಂಜೆ 7.44ಕ್ಕೆ ತಲುಪಿತ್ತು. ಈ ಅಪರೂಪದ ಘಟನೆ ರೈಲ್ವೇ ಇತಿಹಾಸದಲ್ಲೊಂದು ದಾಖಲೆಯಾಗಬಹುದೇನೋ!
ಮುಂಬಯಿ-ಗೋವಾ ನಡುವೆ ವಾರದಲ್ಲಿ ಮೂರು ದಿನ ಸಂಚರಿಸುವ ತೇಜಸ್, 750 ಕಿ.ಮೀ. ದೂರ ಕ್ರಮಿಸಲು ಸಾಮಾನ್ಯವಾಗಿ 10 ತಾಸು ತೆಗೆದುಕೊಳ್ಳುತ್ತದೆ. ಮಳೆಗಾಲದ ದಿನಗಳಲ್ಲಿ ಇಷ್ಟೇ ದೂರ ಕ್ರಮಿಸಲು 12ರಿಂದ 15 ತಾಸಾಗುತ್ತದೆ. ಅದರಲ್ಲೂ ರವಿವಾರ ಬೆಳಗ್ಗೆ ಗೋವಾದಿಂದ ಹೊರಟ ತೇಜಸ್‌ಗೆ ಇದು ಮಳೆಗಾಲದ ಮೊದಲ ಪ್ರಯಾಣವಾಗಿತ್ತು. ಶನಿವಾರ ಮುಂಬಯಿಂದ ಹೊರಟ ತೇಜಸ್ ಕೊಂಚ ತಡವಾಗೇ ಗೋವಾ ತಲುಪಿತ್ತು. ಹೀಗಾಗಿ ಕುಡಲ್ ನಿಲ್ದಾಣಕ್ಕೆ 2 ತಾಸು 17 ನಿಮಿಷ ತಡವಾಗಿ ಬಂದಿದ್ದು, ರತ್ನಗಿರಿ ನಿಲ್ದಾಣ ತಲುಪುವಾಗ ಎಂದಿಗಿಂತ ಒಂದು ತಾಸು ಲೇಟಾಗಿತ್ತು. ಆದರೆ ಪನ್ವೆಲ್ ನಿಲ್ದಾಣವನ್ನು ಎಂದಿಗಿಂತ ಕೇವಲ 14 ನಿಮಿಷ ತಡವಾಗಿ ತಲುಪಿತು ಎಂದು ಪ್ರಯಾಣಿಕರು ತಿಳಿಸಿದ್ದಾರೆ.
ವೇಗ, ಬ್ರೇಕ್ ಮತ್ತು ಚಾಲಾಕಿ ಚಾಲಕ
ತಡವಾಗಿದ್ದ 3 ತಾಸು ಸಮಯವನ್ನು ಚಾಲಕ ಕೇವಲ ನಾಲ್ಕು ನಿಲ್ದಾಣಗಳ ನಡುವೆ ಸರಿದೂಗಿಸಿದ್ದು ಹೇಗೆ ಎಂಬ ಪ್ರಶ್ನೆ ಕಾಡದೆ ಇರದು. ಐಷಾರಾಮಿ ರೈಲು ತೇಜಸ್, ಶಕ್ತಿಶಾಲಿ ಎಲೆಕ್ಟ್ರೋ-ನ್ಯೂಮ್ಯಾಟಿಕ್ ಬ್ರೇಕಿಂಗ್ ವ್ಯವಸ್ಥೆ ಹೊಂದಿದ್ದು, ಗಂಟೆಗೆ ಗರಿಷ್ಠ 200 ಕಿ.ಮೀ. ವೇಗವಾಗಿ ಚಲಿಸುತ್ತದೆ. ಈ ವೇಗ ಹಾಗೂ ಆಧುನಿಕ ಬ್ರೇಕಿಂಗ್ ಸೌಲಭ್ಯ ಬಳಸಿಕೊಂಡ ಚಾಲಕ, ಕರ್ಮಲಿ – ಕುಡಲ್ ನಿಲ್ದಾಣಗಳ ನಡುವೆ ಗಂಟೆಗೆ 153 ಕಿ.ಮೀ., ಕುಡಲ್ – ರತ್ನಗಿರಿ ನಡುವೆ ಗಂಟೆಗೆ 137 ಕಿ.ಮೀ. ಮತ್ತು ರತ್ನಗಿರಿ – ಪನ್ವೆಲ್ ನಡುವೆ ಗಂಟೆಗೆ ಸರಾಸರಿ 125 ಕಿ.ಮೀ. ವೇಗವಾಗಿ ಚಾಲನೆ ಮಾಡುವ ಮೂಲಕ ಮೂರು ತಾಸಿನ ಅಂತರ ಸರಿಗಟ್ಟಿದ್ದಾರೆ.