ಪಟ್ನಾ : ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಪತ್ನಿ, ಮಾಜಿ ಬಿಹಾರ ಮುಖ್ಯಮಂತ್ರಿ ರಾಬ್ರಿ ದೇವಿ ಅವರು ತನ್ನ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಗೆ ‘ಇನ್ನಾದರೂ ಬೇಗನೆ ಮನೆಗೆ ಮರಳಿ ಬಾ ಮಗನೇ’ ಎಂದು ಅತ್ಯಂತ ಭಾವನಾತ್ಮಕವಾಗಿ ಮನವಿ ಮಾಡಿಕೊಂಡಿದ್ದಾರೆ.
ತೇಜ್ ಪ್ರತಾಪ್ ಯಾದವ್ ಅವರು ತಾನು ನೂತನವಾಗಿ ವಿವಾಹವಾಗಿರುವ ಪತ್ನಿಯಿಂದ ವಿಚ್ಚೇದನ ಪಡೆಯಲು ಕೋರ್ಟಿಗೆ ಅರ್ಜಿ ಸಲ್ಲಿಸಿದ ಬಳಿಕ ಲಾಲು ಅವರನ್ನು ಕಳೆದ ವರ್ಷ ರಾಂಚಿ ಜೈಲಿನಲ್ಲಿ ಭೇಟಿಯಾದಂದಿನಿಂದ ಈ ವರೆಗೂ ಮನೆಗೆ ಮರಳಿಲ್ಲ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
ಬಿಹಾರದಲ್ಲಿ ನಡೆದಿದ್ದ ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದ ಒಂದು ದಿನದ ತರುವಾಯ ರಾಬ್ರಿ ದೇವಿ ಅವರು ತನ್ನ ಪುತ್ರ ತೇಜ್ ಪ್ರತಾಪ್ ಗೆ ಮನ ಕರಗುವ ರೀತಿಯಲ್ಲಿ , “ಬಹುತ್ ಹುವಾ, ಲೌಟ್ ಆವೋ ಬೇಟಾ’ (ಸಾಕಷ್ಟು ಆಯಿತು ಮಗಾ, ಇನ್ನಾದರೂ ಮನೆಗೆ ಮರಳಿ ಬಾ) ಎಂದು ವಿನಂತಿಸಿಕೊಂಡರು.
ತೇಜ್ ಪ್ರತಾಪ್ ಯಾದವ್ ಅವರು ಕಳೆದ ವರ್ಷ ಮೇ ತಿಂಗಳಲ್ಲಿ ಆರ್‌ಜೆಡಿ ಹಿರಿಯ ನಾಯಕನ ಪುತ್ರಿ ಐಶ್ವರ್ಯಾ ರಾಯ್ ಅವರನ್ನು ವಿವಾಹವಾಗಿದ್ದರು.
ತನ್ನ ಇಬ್ಬರು ಪುತ್ರರಾಗಿರುವ ತೇಜ್ ಪ್ರತಾಪ್ ಮತ್ತು ತೇಜಸ್ವಿ ಯಾದವ್ ಅವರ ನಡುವೆ ಯಾವುದೇ ಬಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದ ರಾಬ್ರಿ ದೇವಿ, ಆ ಬಗೆಯ ವರದಿಗಳನ್ನು ತಳ್ಳಿಹಾಕಿದರು. ಈ ರೀತಿ ವದಂತಿಗಳೆಲ್ಲವೂ ಸ್ಥಾಪಿತ ಹಿತಾಸಕ್ತಿಗಳ ಸೃಷ್ಟಿ ಎಂದಾಕೆ ಹೇಳಿದರು.