Advertisement

23 ಎಕರೆ ಸರ್ಕಾರದ ವಶಕ್ಕೆ ಪಡೆದ ತಹಶೀಲ್ದಾರ್‌

07:39 PM Mar 22, 2020 | Lakshmi GovindaRaj |

ನಂಜನಗೂಡು: ತಹಶೀಲ್ದಾರ್‌ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ತಾಲೂಕಿನ ಚಿಕ್ಕಯ್ಯನ ಛತ್ರದ ಬಸವನಪುರ ಸಮೀಪದ ಕಪಿಲಾ ನದಿ ದಂಡೆಯ ಹಳೆ‌ಯ ನಡು ತೋಪು (ಹಾಲಿ ಭತ್ತದ ಗದ್ದೆಯನ್ನು) ಸ್ವಾಧೀನಕ್ಕೆ ಪಡೆದರು. ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್‌ ಮಹೇಶಕುಮಾರ್‌, ಈ ಜಾಗ ಸರ್ಕಾರದ್ದಾಗಿದ್ದು, ಹಲವು ದಶಕಗಳಿಂದ 23.17 ಎಕರೆಯನ್ನು ಜವನಯ್ಯ ಮಹದೇವಪ್ಪ ಕುಟುಂಬ ಅತಿಕ್ರಮಿಸಿಕೊಂಡು ಸಾಗುವಳಿ ಮಾಡುತ್ತಿತ್ತು.

Advertisement

ಈ ಕುರಿತು ಅನೇಕ ವರ್ಷ ವಿವಿಧ ಹಂತಗಳಲ್ಲಿ ಕಾನೂನಿನ ಹೋರಾಟ ನಡೆದಿದ್ದು, ಇದೀಗ ಹೈಕೋರ್ಟ್‌ ತೀರ್ಪಿನ ಅನ್ವಯ ಜಿಲ್ಲಾಧಿಕಾರಿ ಆದೇಶದ‌ ಮೇರೆಗೆ ಈ ಭೂಮಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ. ಈ ಜಾಗದ ಸುತ್ತ ಹದ್ದು ಬಸ್ತು ಮಾಡಿಸಿ ಸರ್ಕಾರದ ಜಾಗ ಎಂಬ ನಾಮಫ‌ಲಕ ಅಳವಡಿಸಿದರು. ಉಪನೋಂದಣಾಧಿಕಾರಿಗಳ ಕಾರ್ಯಾಲಯದ ಪ್ರಕಾರ ಈ ಭೂಮಿ ಇಂದಿನ ಬೆಲೆ 4 ಕೋಟಿ ರೂ. ಎಂದ ಅವರು ಇದನ್ನು ಪಕ್ಕದ ಊರಿನ ಸ್ಮಶಾನಕ್ಕೆ ಅಥವಾ ಅರಣ್ಯ ಬೆಳೆಸಲು ಉಪಯೋಗಿಸಲಾಗುವುದು ಎಂದರು.

ಸ್ವಾಧೀನಕ್ಕೆ ವಿರೋಧ: ಈ ಭೂಮಿಯನ್ನು ಸಾಗುವಳಿ ಮಾಡುತ್ತಿದ್ದ ಜವನಯ್ಯ ಮಹದೇವಮ್ಮ ಕುಟುಂಬದವರಾದ ಮಹದೇವಸ್ವಾಮಿ, ಸೋಮಣ್ಣ, ನಂಜುಂಘಸ್ವಾಮಿ ಜಯಕುಮಾರ ಮತ್ತಿತರರು ಸ್ಥಳಕ್ಕೆ ಆಗಮಿಸಿ ಇದು ತಮ್ಮ ತಾತ ಮುತ್ತಾತ ಕಾಲದಿಂದ ತಮ್ಮ ಕುಟುಂಬದ ಸ್ವಾಧೀನದಲ್ಲಿದ್ದು ಈಗಲೂ ನ್ಯಾಯಾಲಯದಿಂದ ಈ ಭೂಮಿ ಸ್ವಾಧೀನಕ್ಕೆ ತಡೆ ತರಲಾಗಿದೆ.ನ್ಯಾಯಾಲಯದಿಂದ ತಡೆ ಬಂದಿದ್ದರೆ ಅದರ ಪ್ರತಿ ನೀಡಿ ವಾಪಸಾಗುತ್ತೇನೆ. ಇಲ್ಲವಾದಲ್ಲಿ ನೀವು ವಾಪಸಾಗಿ ಎಂದು ಖಡಕ್ಕಾಗಿ ಉತ್ತರಿಸಿದ ತಹಶೀಲ್ದಾರ್‌ ಸ್ವಾಧೀನ ಪ್ರಕ್ರಿಯೆ ಮುಂದುವರಿಸಿ ಸರ್ಕಾರದ ಆಸ್ತಿ ಎಂದು ಘೋಷಿಸಿದರು.

ಇದು ಹಿಪ್ಪೆ ತೋಟ: ಸ್ಥಳಕ್ಕೆ ಆಗಮಿಸಿದ ಹಿರಿಯರ ಪ್ರಕಾರ ಮಹಾರಾಜರ ಕಾಲದಲ್ಲಿ ಇದು ಹಿಪ್ಪೆ ತೋಪಾಗಿತ್ತು. ಇಲ್ಲಿ ಇದ್ದ ಅಸಂಖ್ಯಾತ ಹಿಪ್ಪೆ ಮರಗಳ ಬೀಜ ಆಯ್ದು ನಂಜನಗೂಡಿನ ಶ್ರೀಕಂಠೇಶ್ವರ ಹಾಗೂ ಕಳಲೆ ಕೈವಲ್ಯಾ ದೇವಿ ಅಮ್ಮನ ದೇವಾಲಯಗಳಿಗೆ ದೀಪದ ಎಣ್ಣೆಗಾಗಿ ಈ ತೋಪಿನ ಬೀಜ ಬಳಕೆಯಾಗುತ್ತಿತ್ತು ಎಂದರು. ಕೆಲವು ದಶಕಗಳ ಹಿಂದೆ ಈ ತೋಪಿನಲ್ಲಿದ್ದ ಹಿಪ್ಪೆ ಮರ ನಾಶ ಮಾಡಿ ಭೂಮಿಯಲ್ಲಿದ್ದ ಬೆಲೆ ಬಾಳುವ ಮರಗಳನ್ನು ಮಾರಿಕೊಂಡ ನಂತರ ಭತ್ತ ಬೆಳೆಯುವ ಕೃಷಿ ಭೂಮಿಯಾಗಿದ್ದನ್ನು ಹಿರಿಯರು ಮೆಲಕು ಹಾಕಿದರು. ಕಂದಾಯ ಇಲಾಖೆ ಅಧಿಕಾರಿಗಳಾದ ಶಿವಪ್ರಕಾಶ , ನಾಗರಾಜು, ಆರ್‌ಐಗಳಾದ ಪ್ರಕಾಶ, ಅನಿಲ್‌ ಕುಮಾರ್‌, ಗಿರೀಶ, ಬಸವಣ್ಣ, ಗ್ರಾಮಾಂತರ ಠಾಣಾಧಿಕಾರಿ ಸತೀಶ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next