ಹೊಸದಿಲ್ಲಿ: ದಿವಂಗತ ಪ್ರತ್ಯೇಕತಾವಾದಿ ಉಗ್ರ ಸೈಯದ್ ಅಲಿ ಶಾ ಗಿಲಾನಿ ಸ್ಥಾಪಿಸಿದ್ದ ಪಾಕಿಸ್ಥಾನ-ಪರ ಪ್ರತ್ಯೇಕತಾವಾದಿ ಗುಂಪು ತೆಹ್ರೀಕ್-ಎ-ಹುರಿಯತ್ (TeH) ಅನ್ನು ಮುಂದಿನ ಐದು ವರ್ಷಗಳವರೆಗೆ ನಿಷೇಧಿತ ಸಂಘಟನೆ ಎಂದು ಸರಕಾರ ಭಾನುವಾರ ಘೋಷಿಸಿದೆ.
ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸುವಲ್ಲಿ ಮತ್ತು ಭಾರತ ವಿರೋಧಿ ಭಾವನೆಯನ್ನು ಹರಡುವಲ್ಲಿ ಗುಂಪು ತೊಡಗಿಸಿಕೊಂಡಿದ್ದಕ್ಕೆ ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಘೋಷಣೆ ಮಾಡಿದ್ದಾರೆ.
“ತೆಹ್ರೀಕ್-ಇ-ಹುರಿಯತ್, ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆಯಡಿಯಲ್ಲಿ ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಲಾಗಿದೆ. ಭಾರತದಿಂದ ಕಾಶ್ಮೀರವನ್ನು ಅನ್ನು ಪ್ರತ್ಯೇಕಿಸಲು ಮತ್ತು ಇಸ್ಲಾಮಿಕ್ ಆಳ್ವಿಕೆಯನ್ನು ಸ್ಥಾಪಿಸಲು ನಿಷೇಧಿತ ಚಟುವಟಿಕೆಗಳಲ್ಲಿ ಈ ಸಂಘಟನೆಯು ತೊಡಗಿಸಿಕೊಂಡಿದೆ ಎಂದು ಶಾ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಹಿಂದೆ ಸೈಯದ್ ಅಲಿ ಶಾ ಗಿಲಾನಿ ನೇತೃತ್ವದ ಮತ್ತು ಮಸರತ್ ಆಲಂ ಭಟ್ ಅವರ ಉತ್ತರಾಧಿಕಾರಿಯಾದ ತೆಹ್ರೀಕ್-ಇ-ಹುರಿಯತ್, ಭಾರತ ವಿರೋಧಿ ಮತ್ತು ಪಾಕಿಸ್ಥಾನ ಪರ ನಿಲುವು ಹೊಂದಿತ್ತು. ಮಸರತ್ ಆಲಂ ಭಟ್, ಪ್ರಸ್ತುತ ಜೈಲಿನಲ್ಲಿದ್ದು, ನಿಷೇಧಿತ ಸಂಘಟನೆಯಾದ ಮುಸ್ಲಿಂ ಲೀಗ್ ಆಫ್ ಜಮ್ಮು ಮತ್ತು ಕಾಶ್ಮೀರದ ಮುಖ್ಯಸ್ಥರಾಗಿದ್ದ. ಇದನ್ನೂ ಕಾನೂನುಬಾಹಿರವೆಂದು ಘೋಷಿಸಲಾಗಿದೆ.
ಮಿರ್ವೈಜ್ ಉಮರ್ ಫಾರೂಕ್ ನೇತೃತ್ವದ ಹುರಿಯತ್ ಬಣದಿಂದ ಹೊರಬಂದ ನಂತರ 2004 ರಲ್ಲಿ ಗಿಲಾನಿ ಅವರು ತೆಹ್ರೀಕ್-ಇ-ಹುರಿಯತ್ ಅನ್ನು ರಚಿಸಿದ್ದ. ಗೀಲಾನಿ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿದ್ದವು, ಜಮಾತ್-ಎ-ಇಸ್ಲಾಮಿಗೆ ರಾಜೀನಾಮೆ ನೀಡಿ ಈ ಗುಂಪನ್ನು ರಚಿಸಿ ನಂತರ ಕಟ್ಟರ್ ಪ್ರತ್ಯೇಕತಾವಾದಿ ನೇತೃತ್ವದ ಪ್ರತ್ಯೇಕತಾವಾದಿ ಒಕ್ಕೂಟವಾದ ಹುರಿಯತ್‌ನ ಮತ್ತೊಂದು ಬಣದ ಘಟಕವಾಗಿತ್ತು.