ಆಳಂದ: ಒಕ್ಕಲುತನಕ್ಕೆ ಎತ್ತುಗಳೇ ಆಧಾರ, ಇವುಗಳಿಲ್ಲದೇ ಕೃಷಿ ಅಸಾಧ್ಯವೆಂಬ ಕಾಲವೊಂದಿತ್ತು. ಆದರೀಗ ಕಾಲಕಳೆದಂತೆ ಕೃಷಿ ವಿಜ್ಞಾನಿಗಳ ತಂತ್ರಜ್ಞಾನ ಆವಿಷ್ಕಾರ ಫಲದಿಂದ ಬಿತ್ತನೆ ಅಷ್ಟೇಯಲ್ಲ ಬೆಳೆ ನಿರ್ವಹಣೆಯಲ್ಲೂ ಟ್ರ್ಯಾಕ್ಟರ್ ಅನ್ನು ಪ್ರಮುಖ ಸಾಧನೆವಾಗಿ ಬಳಸುತ್ತಿದ್ದಾರೆ.
ಕೃಷಿಗೆ ಎತ್ತುಗಳ ಬಳಕೆ ಕಡಿಮೆಯಾಗುತ್ತಿದ್ದಂತೆ ಪರ್ಯಾಯವಾಗಿ ಬಹುತೇಕ ರೈತರು ಟ್ರ್ಯಾಕ್ಟರ್ ಮೊರೆ ಹೋಗಿ ಬಿತ್ತನೆ, ಗಳ್ಯಾ, ಮಾಗಿ ಉಳುಮೆಗೆ ಸೀಮಿತಗೊಳಿಸಿದ್ದರು. ಆದರೀಗ ಮತ್ತೂಂದು ಹೆಜ್ಜೆ ಮುಂದೆ ಹೋಗಿ ಟ್ರ್ಯಾಕ್ಟರ್‌ನಿಂದಲೇ ಬೆಳೆಯಲ್ಲಿ ಎಡೆ ಹೊಡೆಯತೊಡಗಿದ್ದಾರೆ.
ತಾಲೂಕಿನ ರುದ್ರವಾಡಿ ಗ್ರಾಮದ ರೈತ ಚಂದ್ರಕಾಂತ ಖೋಬ್ರೆ ಎಂಬುವರು ಈ ಭಾಗದಲ್ಲಿ ಮೊದಲ ಬಾರಿ ಬೆಳೆಯಲ್ಲಿ ಟ್ರ್ಯಾಕ್ಟರ್ ನಿಂದಲೇ ಬೆಳೆಗೆ ಧಕ್ಕೆಯಾಗದಂತೆ ಎಡೆ ಹೊಡೆದು ತೋರಿಸಿದ್ದಾರೆ. ಕೃಷಿಗೆ ಉಂಟಾಗುವ ದುಬಾರಿ ವೆಚ್ಚ ಭರಿಸದೇ ಎತ್ತುಗಳ ಪಾಲನೆ ಪೋಷಣೆ ಆಗದೇ ಬಹುತೇಕರು ಮಾರಿಕೊಂಡಿದ್ದೇ ಹೆಚ್ಚು. ಬೇಕೆಂದಾಗ ಎತ್ತುಗಳು ಸಕಾಲಕ್ಕೆ ಸಿಗುತ್ತಿಲ್ಲ. ಇದಕ್ಕೆ ಎರಡು ಕೂಲಿಯಾಳುಗಳು ಕೂಡಾ ದೊರೆಯದೇ ಇರುವುದರಿಂದ ಟ್ರ್ಯಾಕ್ಟರ್‌ನಿಂದಲೇ ಎಡೆ ಹೊಡೆಯಲು ಯತ್ನಿಸಿದ್ದಾರೆ. ಬರುವ ದಿನಗಳಲ್ಲಿ ನೀರಾವರಿ, ಖುಷ್ಕಿ, ಯಾವುದೇ ಬೆಳೆಯಲ್ಲೂ ಬಿತ್ತನೆ ಜತೆಗೆ ಎಡೆಯನ್ನು ಎತ್ತುಗಳ ಸಹಾಯವಿಲ್ಲದೇ ಟ್ರ್ಯಾಕ್ಟರ್ ನಿಂದಲೇ ಹೊಡೆಯಬಹುದು ಎಂಬುದನ್ನು ಮಾಡಿ ತೋರಿಸಿದ್ದಾರೆ.
ದಿನಕ್ಕೆ 15ರಿಂದ 20 ಎಕರೆ ಟ್ರ್ಯಾಕ್ಟರ್‌ನ ಐದು ತಾಳಿನಿಂದ ಎಡೆ ಹೊಡೆಯಬಹುದು. ಎತ್ತುಗಳಿಂದ ದಿನಕ್ಕೆ ಮೂರು ತಾಳಿನ ಎಡೆ ಹೊಡೆದರೆ ಐದಾರು ಎಕರೆ ಮಾತ್ರ ಸಾಕಾಗುತ್ತಿದೆ. 15ರಿಂದ 20 ಎಕರೆ ಎಡೆ ಸಾಗುವ ಕಾರ್ಯವನ್ನು ತಾಂತ್ರಿಕತೆ ಒಳಗೊಂಡ ಟ್ರ್ಯಾಕ್ಟರ್ ಸಫಲಗೊಳಿಸಿದೆ ಎನ್ನುತ್ತಾರೆ ರೈತರು. ಬಿತ್ತನೆ ಬೆಳೆಯ ಯಾವುದೇ ಸಾಲಿನಲ್ಲಿ ಎಡೆಗೆ ತಕ್ಕಂತೆ ಜೋಡಿಸಿಕೊಂಡು ಸಾಗಿಸಿದರೆ ಬೆಳೆಗೆ ಧಕ್ಕೆಯಾಗದು.
–ಚಂದ್ರಕಾಂತ ಖೋಬ್ರೆ, ರೈತ, ರುದ್ರವಾಡಿ