Advertisement

ಉಪನೋಂದಣಾಧಿಕಾರಿ ಕಚೇರಿಯಲ್ಲಿ ತಾಂತ್ರಿಕ ಸಮಸ್ಯೆ

03:04 PM May 25, 2023 | Team Udayavani |

ಕೆ.ಆರ್‌.ಪೇಟೆ: ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ತಾಂತ್ರಿಕ ಸಮಸ್ಯೆ ಇರುವುದರಿಂದ ಪುರಸಭಾ ವ್ಯಾಪ್ತಿಯ ಯಾವುದೇ ಆಸ್ತಿಯನ್ನು ನೋಂದಣಿ, ಅಡಮಾನ ಸೇರಿ ಯಾವುದೇ ಪರಭಾರೆ ಮಾಡಲಾಗದೇ ಜನರಿಗೆ ತೀವ್ರ ತೊಂದರೆ ಎದುರಾಗಿದೆ.

Advertisement

ಯಾವುದೇ ಆಸ್ತಿಯನ್ನು ಮಾರಾಟ ಮಾಡಲು, ಅಡಮಾನ ಇಟ್ಟು ಸಾಲ ಪಡೆಯುವುದು ಸೇರಿ ಸಾರ್ವಜನಿಕರ ಆಸ್ತಿಯನ್ನು ಬದಲಾವಣೆ ಮಾಡಲು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ.

ಈಗ ಕಳೆದ ತಿಂಗಳಿಂದ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿನ ಅಧಿ ಕಾರಿಗಳು ಪುರಸಭಾ ವ್ಯಾಪ್ತಿಯ ಯಾವುದೇ ಆಸ್ತಿಯನ್ನು ನೋಂದಣಿ ಮಾಡಲಾಗುತ್ತಿಲ್ಲ. ಮುಂದೆ ಎಷ್ಟು ದಿನಕ್ಕೆ ಸಮಸ್ಯೆ ಸರಿಯಾಗುತ್ತದೆ ಎಂಬುದನ್ನು ಹೇಳಲಾಗದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದ ಕಷ್ಟದಲ್ಲಿರುವ ಜನರಿಗೆ ತೊಂದರೆಯಾಗಿದೆ. ಈ ಬಗ್ಗೆ ಜಿಲ್ಲಾಧಿ ಕಾರಿಗಳು ಗಮನ ಹರಿಸಬೇಕಾಗಿದೆ.

ದೇವರು ಕೊಟ್ಟರೂ ಪೂಜಾರಿ ಕೊಡುತ್ತಿಲ್ಲ: ಹೇಮಾವತಿ ಬಡಾವಣೆಯಲ್ಲಿ ಅಕ್ರಮ ನಿವೇಶನ ಹಂಚಿಕೆಯ ನೆಪವೊಡ್ಡಿ ಸುಮಾರು ಎರಡು ದಶಕಗಳಿಂದ ಲೋಕಾಯುಕ್ತದಲ್ಲಿ ಪ್ರಕರಣ ಇದುದ್ದರಿಂದ ಇಲ್ಲಿನ ಆಸ್ತಿಗಳ ಯಾವುದೇ ಪರಭಾರೆಯಾಗದೇ ಇದ್ದುದರಿಂದ ನೂರಾರು ಜನರು ಮುಂಗಡ ಹಣ ಪಾವತಿಮಾಡಿ ನೋಂದಣಿ ಮಾಡಿಸಿಕೊಳ್ಳಲು ಕಾಯುತ್ತಿದ್ದರು. ಈಗ ಸರ್ಕಾರದಿಂದ ಕೆ.ಎನ್‌.ಕೆಂಗೇಗೌಡರ ಅವಧಿಯಲ್ಲಿ ವಿತರಣೆಯಾಗಿರುವ ನಿವೇಶನಗಳ ಪರಭಾರೆ ಮಾಡಲು ಸರ್ಕಾರದಿಂದ ಆದೇಶ ಬಂದಿದೆ.

ಅದರಂತೆ ನಿಯಮಬದ್ಧವಾಗಿರುವ ನಿವೇಶನಗಳನ್ನು ಈಗ ಪುರಸಭೆಯಿಂದ ಇ-ಖಾತೆ ಮಾಡಿಕೊಡುತ್ತಿದ್ದಾರೆ. ಆದರೆ, ನೋಂದಣಿ ಆಗುತ್ತಿಲ್ಲ. ಹತ್ತು ಹದಿನೈದು ವರ್ಷಗಳ ನಂತರ ಪುರಸಭೆಯವರು ಖಾತೆಯನ್ನು ಮಾಡಿಕೊಟ್ಟರೂ ನೋಂದಣಿ ಮಾಡಿಸಿಕೊಳ್ಳಲು ನೋಂದಣಾಧಿ ಕಾರಿಗಳ ಕಚೇರಿಯಲ್ಲಿ ತಾಂತ್ರಿಕ ಸಮಸ್ಯೆ ಇದೆ. ಇದರಿಂದ ದೇವರು ವರಕೊಟ್ಟರೂ ಪೂಜಾರಿ ಕೊಡುತ್ತಿಲ್ಲ ಎಂಬಂತಾಗಿದೆ. ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Advertisement

ಸರ್ಕಾರದ ಯಾವುದೇ ಕೆಲಸ ಈಗ ಆನ್‌ಲೈನ್‌ ಮೂಲಕವೇ ಮಾಡಬೇಕು ಎಂಬ ನಿಯಮ ಎಷ್ಟು ಅನುಕೂಲವೋ ಅಷ್ಟೇ ಅನಾನುಕೂಲ ಇದೆ. ತಾಂತ್ರಿಕ ಸಮಸ್ಯೆಗಳಿಂದ ಜನರಿಗೆ ತೊಂದರೆ ಆಗುತ್ತಿದೆ. ಸಂಬಂಧಪಟ್ಟ ಅಧಿ ಕಾರಿಗಳು ಸಮಸ್ಯೆ ಬಗೆಹರಿಸಬೇಕಾಗಿದೆ. – ಎಚ್‌.ಆರ್‌.ಲೋಕೇಶ್‌, ಪುರಸಭಾ ಸದಸ್ಯರು.

ನಾವುಗಳು ಸಾರ್ವಜನಿಕರಿಗೆ ನಿಯಮಾನುಸಾರ ಎಲ್ಲಾ ದಾಖಲೆಗಳನ್ನು ಸರಿಯಾಗಿ ಸಿದ್ಧಪಡಿಸಿ ನೀಡುತ್ತಿದ್ದೇವೆ. ನಮ್ಮಿಂದ ಯಾರಿಗೂ ಸಮಸ್ಯೆ ಆಗುತ್ತಿಲ್ಲ, ಉಪ ನೋಂದಣಾಧಿ ಕಾರಿಗಳ ಕಚೇರಿಯಲ್ಲಿ ಸಮಸ್ಯೆ ಇರುವುದು ನನ್ನ ಗಮನಕ್ಕೆ ಬಂದಿಲ್ಲ. – ಬಸವರಾಜು, ಮುಖ್ಯಾಧಿಕಾರಿ, ಪುರಸಭೆ, ಕೆ.ಆರ್‌.ಪೇಟೆ.

ಕೆಲವು ದಿನಗಳಿಂದ ಪುರಸಭಾ ವ್ಯಾಪ್ತಿಯ ಆಸ್ತಿಗಳ ನೋಂದಣಿ ಯಲ್ಲಿ ಸಮಸ್ಯೆ ಇರುವುದು ನನ್ನ ಗಮನಕ್ಕೂ ಬಂದಿದೆ. ಈಗ ಚಾಲ್ತಿಯ ಲ್ಲಿರುವ ಕಾವೇರಿ ತಂತ್ರಾಂಶದಲ್ಲಿ ಸಮಸ್ಯೆ ಆಗಿದೆ. ಈ ಬಗ್ಗೆ ಮೇಲಧಿ ಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಶೀಘ್ರ ಸಮಸ್ಯೆ ಬಗೆಹರಿಸಲಾಗುತ್ತದೆ. – ಕುಮಾರಸ್ವಾಮಿ, ಉಪನೊಂದಣಾಧಿಕಾರಿ.

– ಅರುಣ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next