Advertisement
ಒಂದು ರೀತಿಯಲ್ಲಿ ಕಳೆದ ಕೆಲವು ದಿನಗಳಿಂದ ತಾಂತ್ರಿಕ ಹಾಗೂ ಪ್ರಕೃತಿ ನಡುವೆ ‘ಕಣ್ಣಾಮುಚ್ಚಾಲೆ’ ಆಟ ನಡೆಯುತ್ತಿದೆ ಎಂದರೂ ತಪ್ಪಿಲ್ಲ. ಮೋಡ ಬಿತ್ತನೆಗೆ ವಿಮಾನಗಳು ಸಜ್ಜಾಗಿದ್ದಾಗ ವಾಯು ಸಂಚಾರ ನಿಯಂತ್ರಕರ (ಎಟಿಸಿ) ಅನುಮತಿ ಸಿಕ್ಕಿರುವುದಿಲ್ಲ. ಅನುಮತಿ ಸಿಕ್ಕಿದಾಗ ಮೋಡಗಳು ಚದುರಿ ಹೋಗಿರುತ್ತವೆ. ‘ಎಲ್ಲಿ ಹೋಗುವಿರಿ ಮೋಡಗಳೇ ನಿಲ್ಲಿ… ನಿಲ್ಲಿ… ನಿಲ್ಲಿ’ ಅನ್ನುವ ಬದಲು ‘ಎಲ್ಲಿ ಹೋದವು ಮೋಡಗಳು’ ಎಂದು ಹುಡುಕುವುದು ವರ್ಷಧಾರೆ ನಿರ್ವಹಿಸುತ್ತಿರುವವರ ನಿತ್ಯದ ಕಾಯಕ ಆಗಿಬಿಟ್ಟಿದೆ.
Related Articles
Advertisement
ಸಮಸ್ಯೆ ಏನು?ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹಾರಾಟ ನಡೆಸುವ ವಿಮಾನಗಳಿಂದ ಮೋಡ ಬಿತ್ತನೆ ವಿಮಾನಗಳ ಹಾರಾಟಕ್ಕೆ ಅಷ್ಟೊಂದು ಅಡಚಣೆ ಉಂಟಾಗುವುದಿಲ್ಲ. ಏಕೆಂದರೆ ಅಲ್ಲಿಂದ ಆಕಾಶಕ್ಕೆ ಹಾರುವ ವಿಮಾನಗಳು ಹಾರಾಟ ಆರಂಭಿಸಿದ ಕೇವಲ 10ರಿಂದ 15 ನಿಮಿಷಗಳಲ್ಲಿ 35 ಸಾವಿರ ಅಡಿ ಎತ್ತರಕ್ಕೆ ಹೋಗಿ ಬಿಡುತ್ತವೆ. ಆದರೆ ಜಕ್ಕೂರು, ಯಲಹಂಕ ಹಾಗೂ ಎಚ್‌ಎಎಲ್‌ನಲ್ಲಿ ಹೆಚ್ಚಾಗಿ ಯುದ್ಧ ವಿಮಾನಗಳ ತರಬೇತಿ ಹಾರಾಟ ನಡೆಯುತ್ತದೆ. ಈ ವಿಮಾನಗಳು 10 ಸಾವಿರ ಅಡಿ ಎತ್ತರದಲ್ಲಿ ಹಾರಾಡುತ್ತವೆ. ಅದೇ ಮೋಡ ಬಿತ್ತನೆಯ ವಿಮಾನಗಳು 5ರಿಂದ 7 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತವೆ. ಯುದ್ಧ ತರಬೇತಿ ವಿಮಾನಗಳು ಜೆಟ್ ವಿಮಾನಗಳಾದರೆ, ಮೋಡ ಬಿತ್ತನೆಯದು ಅತ್ಯಾಧುನಿಕ ತಂತ್ರಜ್ಞಾನದ ವಿಶೇಷ ವಿಮಾನವಾಗಿರುತ್ತದೆ. ಎರಡೂ ವಿಮಾನಗಳು ಒಂದೇ ಅಥವಾ ಸಮೀಪದ ಪ್ರದೇಶಗಳಲ್ಲಿ ಹಾರಾಟ ನಡೆಸುವುದು ಸಾಧ್ಯವಿಲ್ಲ. ತಾಂತ್ರಿಕ ಸಮಸ್ಯೆಗಳು ಎದುರಾಗುವುದರ ಜತೆಗೆ ಕೆಲವೊಮ್ಮೆ ಅನಾಹುತಗಳೂ ಸಂಭವಿಸಬಹುದು ಅಧಿಕಾರಿಗಳು ವಿವರಿಸುತ್ತಾರೆ. ಇದು ಮೊದಲೇ ಗೊತ್ತಿರಲಿಲ್ಲವೆ ?
ಈ ಸಮಸ್ಯೆ ಮೊದಲೇ ಗೊತ್ತಿರಲಿಲ್ಲವೇ? ಇಂತಹ ಗಂಭೀರ ತಾಂತ್ರಿಕ ವಿಷಯ ಕಡೆಗಣಿಸಿದ್ದು ಯಾಕೆ ಎಂದು ಕೇಳಿದ್ದಕ್ಕೆ, ಸಮಸ್ಯೆ ಇಷ್ಟೊಂದು ಗಂಭೀರ ಆಗಬಹುದು ಎಂದು ಅಂದುಕೊಂಡಿರಲಿಲ್ಲ. ಅಲ್ಲದೇ ಮೋಡ ಬಿತ್ತನೆಯ ಆರಂಭದ ದಿನ ಮಾತ್ರ ಜಕ್ಕೂರು ವಾಯುನೆಲೆಯಿಂದ ಹಾರಾಟ ನಡೆಸಿ, ಬಳಿಕ ಎಚ್‌ಎಎಲ್ ಮೂಲಕ ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಕೆಲವೊಂದು ಕಾರಣಗಳಿಂದಾಗಿ ಜಕ್ಕೂರು ವಾಯುನೆಲೆ ಬಳಸಿಕೊಂಡೇ ಕಾರ್ಯಾಚರಣೆ ನಡೆಸಬೇಕಾಯಿತು. ಜಕ್ಕೂರು ಹಾಗೂ ಯಲಹಂಕ ವಾಯುನೆಲೆಗಳು ಒಂದೇ ಕಡೆ, ಕಡಿಮೆ ಅಂತರದಲ್ಲಿ ಇರುವುದರಿಂದ ಯಲಹಂಕದ ವಾಯುನೆಲೆಯಿಂದ ಯುದ್ಧ ವಿಮಾನಗಳ ತರಬೇತಿ ಹಾರಾಟ ಹೆಚ್ಚಾಗಿರುತ್ತದೆ. ಹಾಗಾಗಿ ಈ ತಾಂತ್ರಿಕ ಸಮಸ್ಯೆ ನಾವು ಭಾವಿಸಿದ್ದಕ್ಕಿಂತ ಹೆಚ್ಚು ಗಂಭೀರವಾಗಿ ಮೂಡಿಬಂದಿದೆ. ಎಟಿಸಿಗಳ ಜತೆಗಿನ ಸಭೆಯಲ್ಲಿ ಇದಕ್ಕೆಲ್ಲ ಪರಿಹಾರ ಕಂಡುಕೊಂಡು ವರ್ಷಧಾರೆಗೆ ಅಡ್ಡಿಯಾಗಿರುವ ಗೊಂದಲಗಳನ್ನು ದೂರ ಮಾಡಲಾಗುವುದು ಎಂದು ಅಧಿಕಾರಿಗಳು ಸಮರ್ಥನೆ ನೀಡುತ್ತಾರೆ. ‘ಎರಡು ದಿನಗಳ ಹಿಂದೆ ಉಸ್ತುವಾರಿ ಸಮಿತಿ ಸಭೆ ನಡೆಸಲಾಗಿದೆ. ಆ. 29ಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಎಚ್‌ಎಎಲ್, ಯಲಹಂಕ ಹಾಗೂ ಜಕ್ಕೂರು ವಾಯುನೆಲೆಗಳ ವಾಯು ಸಂಚಾರ ನಿಯಂತ್ರಕರ ಸಭೆ ಕರೆಯಲಾಗಿದೆ. ಈ ಸಭೆಯನ್ನು ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆಯ ಆಯುಕ್ತರು ಮತ್ತು ಮುಖ್ಯ ಅಭಿಯಂತರರು ಸಮನ್ವಯ ಮಾಡುತ್ತಿದ್ದಾರೆ’.
– ಟಿ.ಎಂ. ವಿಜಯಭಾಸ್ಕರ್, ಅಪರ ಮುಖ್ಯಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತ *ರಫೀಕ್ ಅಹ್ಮದ್