Advertisement

ತಾಂತ್ರಿಕ ಸಮಸ್ಯೆ: ಬಾಗಿಲು ಮುಚ್ಚಿದ ಇ-ಟಾಯ್ಲೆಟ್‌!

11:12 AM Sep 19, 2017 | Team Udayavani |

ಮಹಾನಗರ: ದ.ಕ. ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಎರಡು ತಿಂಗಳ ಹಿಂದೆ ಆರಂಭಗೊಂಡ `ಇ-ಟಾಯ್ಲೆಟ್‌’ ವ್ಯವಸ್ಥೆ ತಾಂತ್ರಿಕ ಸಮಸ್ಯೆಗಳಿಗೆ ಒಳಗಾಗಿ ಇದೀಗ ಗ್ರಹಣ ಹಿಡಿದಂತಾಗಿದೆ. ಆರಂಭವಾದ 5ರ ಪೈಕಿ ಎರಡು ಮಾತ್ರ ಸುಸ್ಥಿತಿಯಲ್ಲಿದ್ದರೆ, ಉಳಿದ ಮೂರು ಇ-ಟಾಯ್ಲೆಟ್‌ಗಳು ಬಾಗಿಲು ಹಾಕಿವೆ!

Advertisement

ಲಾಲ್‌ಭಾಗ್‌ ಬಸ್‌ ನಿಲ್ದಾಣ ಸಮೀಪದ ಎರಡು ಇ-ಟಾಯ್ಲೆಟ್‌ಗಳು “ನೋ ವಾಟರ್‌/ನೋ ಪವರ್‌’ ಎಂಬ ಅಕ್ಷರ ದೊಂದಿಗೆ ಕೆಲವು ದಿನಗಳಿಂದ ಬಾಗಿಲು ಹಾಕಿವೆ. ಹಂಪನಕಟ್ಟೆಯ ಇ-ಟಾಯ್ಲೆಟ್‌ ಬಾಗಿಲನ್ನೇ ತೆರೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಂಗಳೂರಿನಲ್ಲಿ ಸಾರ್ವಜನಿ ಕರಿಗೆ ಲಾಭವಾಗಬೇಕಾದ ಮಹಾನಗರ ಪಾಲಿಕೆಯ ಪ್ರತಿಷ್ಠಿತ ಯೋಜನೆಯೊಂದು ಫಲ ನೀಡದೆ ಕೇವಲ ಪ್ರದರ್ಶನಕ್ಕೆ ಸೀಮಿತವಾದಂತಾಗಿದೆ!

ಮಂಗಳೂರಿನ ಸಾರ್ವಜನಿಕ ಶೌಚಾಲ ಯಗಳು ಗಬ್ಬೆದ್ದಿವೆ. ರಿಪೇರಿ ಮಾಡುವುದೇ ಕಷ್ಟ ಎಂಬ ಸ್ಥಿತಿಗೆ ತಲುಪಿದಾಗ ಮಂಗಳೂರಿನಲ್ಲಿ ಇ-ಟಾಯ್ಲೆಟ್‌ ಎಂಬ ಪರಿಕಲ್ಪನೆ ಜಾರಿಗೆ ಬಂತು. ಮಂಗಳೂರಿನ ಲಾಲ್‌ಭಾಗ್‌ ಬಸ್‌ ನಿಲ್ದಾಣ ಸಮೀಪ ಎರಡು, ಕದ್ರಿ ಪಾರ್ಕ್‌ನ ಮುಂಭಾಗ ಎರಡು ಹಾಗೂ ಹಂಪನಕಟ್ಟೆಯಲ್ಲಿ ಒಂದು ಇ-ಟಾಯ್ಲೆಟ್‌ಗಳಿಗೆ ಜು. 12ರಂದು ಚಾಲನೆ ನೀಡಲಾಗಿತ್ತು.

ಲಾಲ್‌ಭಾಗ್‌ನಲ್ಲಿ `ನೋ ವಾಟರ್‌/ನೋ ಪವರ್‌’
ಇ-ಟಾಯ್ಲೆಟ್‌ ಬಳಕೆಗೆ ಯೋಗ್ಯವಿದ್ದರೆ ಹೊರಭಾಗದಲ್ಲಿ ನೀಲಿ ದೀಪ ಕಾಣಿಸಬೇಕು. ರವಿವಾರ ಲಾಲ್‌ಭಾಗ್‌ನಲ್ಲಿರುವ ಎರಡು ಇ ಟಾಯ್ಲೆಟ್‌ಗಳಲ್ಲಿ ನೀಲಿ ಲೈಟ್‌ ಕಾಣಿಸಲೇ ಇಲ್ಲ. ಲೈಟ್‌ ಹಾಳಾಗಿ, ಟಾಯ್ಲೆಟ್‌ ಸರಿ ಇರಬಹುದು ಎಂದು ನಾಣ್ಯ ಹಾಕಿದರೆ ಬಾಗಿಲೂ ತೆರೆಯಲಿಲ್ಲ, ನಾಣ್ಯವೂ ಬರಲಿಲ್ಲ. `ನೋ ವಾಟರ್‌ / ನೋ ಪವರ್‌’ ಎಂದಷ್ಟೇ ಬರೆಯಲಾಗಿತ್ತು. ಹೀಗಾಗಿ ಟಾಯ್ಲೆಟ್‌ ಬಳಕೆಗೆ ಸಿಗುತ್ತಿರಲಿಲ್ಲ. ಈ ಬಗ್ಗೆ ಸಮೀಪದ ಅಂಗಡಿಯವರಲ್ಲಿ ವಿಚಾರಿಸಿದಾಗ, “ನಿಜವಾಗಿಯೂ ಇದು ಉತ್ತಮ ಯೋಜನೆ. ಆದರೆ, ಇದು ಯಾವಾಗ ಸರಿ ಇರುತ್ತದೆ, ಯಾವಾಗ ಹಾಳಾಗುತ್ತದೋ ಗೊತ್ತಾಗುವುದಿಲ್ಲ’ ಎನ್ನುತ್ತಾರೆ.

ಬಾಗಿಲು ಓಪನ್‌ ಆಗ್ತಿಲ್ಲ!
ಹಂಪನಕಟ್ಟೆಯ ವೆನ್ಲಾಕ್ ಆಸ್ಪತ್ರೆ ಮುಂಭಾಗ ಇ-ಟಾಯ್ಲೆಟ್‌ ವ್ಯವಸ್ಥೆಯನ್ನು ಈ ಹಿಂದೆ ಜೋಡಿಸಿಡಲಾಗಿತ್ತು. ಆದರೆ, ಇ-ಟಾಯ್ಲೆಟ್‌ನಿಂದ ಒಳಚರಂಡಿಗೆ ನೇರ ಸಂಪರ್ಕ ಸಮಸ್ಯೆ ಉಂಟಾಗಿ ಕಾರ್ಯ ನಿರ್ವಹಿಸಲೇ ಇಲ್ಲ. ಉದ್ಘಾಟನೆಯಾಗಿ ಕೆಲವು ದಿನಗಳವರೆಗೆ ಇದು ಬಾಗಿಲು ಹಾಕಿತ್ತು. ಒಳಚರಂಡಿ ಸಂಪರ್ಕ ಸಾಧ್ಯವೇ ಇಲ್ಲ ಎನ್ನುವುದು ಪಕ್ಕಾ ಆದ ಬಳಿಕ, ವೆನ್ಲಾಕ್ ಮುಂಭಾಗ ಜೋಡಿಸಿದ್ದ ಇ-ಟಾಯ್ಲೆಟ್‌ ವ್ಯವಸ್ಥೆಯನ್ನು ಪೂರ್ಣವಾಗಿ ತೆಗೆದು, ಪುರಭವನದ ಮುಂಭಾಗದ ರೈಲ್ವೇ ನಿಲ್ದಾಣಕ್ಕೆ ಹೋಗುವ ರಸ್ತೆ ಬದಿಯಲ್ಲಿ ತಿಂಗಳ ಹಿಂದಷ್ಟೇ ಜೋಡಿಸಿಡಲಾಗಿತ್ತು. ಈಗ ಇಲ್ಲೂ ತಾಂತ್ರಿಕ ಸಮಸ್ಯೆ ಎದುರಾಗಿದೆ. ನೀಲಿ ಲೈಟ್‌ ಉರಿಯುತ್ತಿಲ್ಲ. ನಾಣ್ಯ ಹಾಕಿದರೆ ವಾಪಸ್‌ ಬರುತ್ತಿದೆ. ಈ ಮಧ್ಯೆ ಹಂಪನಕಟ್ಟೆ ಇ-ಟಾಯ್ಲೆಟ್‌ ಕಸದ ರಾಶಿಯ ಮಧ್ಯೆ ಇರುವುದರಿಂದ ಸ್ವತ್ಛತೆ ಮರೀಚಿಕೆ ಎನಿಸಿದೆ. “ಇ-ಟಾಯ್ಲೆಟ್‌ ಪರಿಕಲ್ಪನೆ ಅತ್ಯಂತ ಪರಿಣಾಮಕಾರಿ. ಬಹುತೇಕ ಜನರು ಬಳಸುತ್ತಿದ್ದಾರೆ. ಆದರೆ, ಒಂದೆರಡು ದಿನದಿಂದ ಇ-ಟಾಯ್ಲೆಟ್‌ ಬಾಗಿಲು ಸಮಸ್ಯೆ ಎದುರಾಗಿದೆ. ಪ್ರಸ್ತುತ ಇ-ಟಾಯ್ಲೆಟ್‌ ಕಾರ್ಯನಿರ್ವಹಿಸುತ್ತಿಲ್ಲ’ ಎನ್ನುತ್ತಾರೆ, ಸ್ಥಳೀಯರು.

Advertisement

ಕದ್ರಿಯಲ್ಲಿ ನೀರು ಕೊರತೆ..!
ಈ ಮಧ್ಯೆ ಕದ್ರಿ ಪಾರ್ಕ್‌ ಮುಂಭಾಗದ ಇ-ಟಾಯ್ಲೆಟ್‌ ಸುಸ್ಥಿತಿಯಲ್ಲಿವೆ. ಕದ್ರಿ ಪಾರ್ಕ್‌ನಲ್ಲಿ ಬೆಳಗ್ಗೆ ಜಾಗಿಂಗ್‌, ವಾಕಿಂಗ್‌ ಬರುವವರು ಇ-ಟಾಯ್ಲೆಟ್‌ ಬಳಸುತ್ತಿದ್ದಾರೆ. ಶೌಚಗೃಹದ ಮೇಲೆ 250ರಿಂದ 300 ಲೀಟರ್‌ ನೀರು ಸಾಮರ್ಥ್ಯದ ಟ್ಯಾಂಕ್‌ ವ್ಯವಸ್ಥೆ ಇಲ್ಲಿದೆ. ಬೆಳಗ್ಗೆ ಅಧಿಕವಾಗಿ ಶೌಚಾಲಯ ಬಳಕೆಯಾಗುವ ಕಾರಣ 10 ಗಂಟೆ ಸುಮಾರಿಗೆ ನೀರು ಖಾಲಿಯಾಗುತ್ತದೆ. ಬಹುತೇಕ ಸಮಯದಲ್ಲಿ ಇಲ್ಲಿ ನೀರಿನ ಕೊರತೆ ಕಾಡುತ್ತಿದೆ. ಇ-ಟಾಯ್ಲೆಟ್‌ ಸ್ವಯಂಚಾಲಿಕ ವ್ಯವಸ್ಥೆಯಲ್ಲಿ ನಡೆಯು ವುದರಿಂದ, ಸಮಸ್ಯೆ ಎದುರಾದರೆ ರಿಪೇರಿಗೆ ಸಾಕಷ್ಟು ದಿನ ಹಿಡಿಯುತ್ತಿದ್ದು, ಇ-ಟಾಯ್ಲೆಟ್‌ ಪರಿಕಲ್ಪನೆಯ ಮೂಲ ಆಶಯವನ್ನೇ ಪ್ರಶ್ನಿಸುವಂತಾಗಿದೆ.

ಟಾಯ್ಲೆಟ್‌ಗಳದ್ದೇ ಸಮಸ್ಯೆ
ಮಂಗಳೂರಿನಲ್ಲಿ ಶೌಚಾಲಯ ಸಮಸ್ಯೆ ದೊಡ್ಡದಾಗಿದೆ.   ನಂತೂರು, ಮಾರ್ಕೆಟ್‌ ರಸ್ತೆ, ಕೆಪಿಟಿ ಜಂಕ್ಷನ್‌, ಕೊಟ್ಟಾರ ಚೌಕಿ, ಪಿ.ವಿ.ಎಸ್‌., ಕದ್ರಿ ಮಲ್ಲಿಕಟ್ಟೆ, ಹಂಪನಕಟ್ಟೆ, ಅತ್ತಾವರ, ಕಂಕನಾಡಿ, ಲಾಲ್‌ಭಾಗ್‌ ಹೀಗೆ ಹಲವು ಜಾಗದಲ್ಲಿ ಶೌಚಾಲಯ ಬಹುಮುಖ್ಯ. ಆದರೆ ಎಲ್ಲೂ ಸುಸಜ್ಜಿತ ಶೌಚಾಲಯಗಳಿಲ್ಲ. ಪಿವಿಎಸ್‌ ಜಂಕ್ಷನ್‌ನಲ್ಲಿದ್ದ ಶೌಚಾಲಯ ನಿರ್ವಹಣೆ ಇಲ್ಲದೆ ಗಬ್ಬು ನಾರುತ್ತಿದೆ. ಸ್ಟೇಟ್‌ ಬ್ಯಾಂಕ್‌ ಬಸ್‌ ನಿಲ್ದಾಣ ವ್ಯಾಪ್ತಿಯಲ್ಲಿ ಒಂದೆರಡು ಶೌಚಾಲಯಗಳ ಸ್ಥಿತಿಯೂ ಭಿನ್ನವೇನಿಲ್ಲ.

ಇ-ಟಾಯ್ಲೆಟ್‌; ಬಳಕೆ ಬಗ್ಗೆ ಮಾಹಿತಿ ಕೊರತೆ!
ಇ-ಟಾಯ್ಲೆಟ್‌ಗಳ ಬಳಕೆ ಬಗ್ಗೆ ಸಾರ್ವಜನಿಕರಿಗೆ ಪೂರ್ಣ ಮಾಹಿತಿ ಇಲ್ಲದ ಕಾರಣ ಇದರ ಪೂರ್ಣ ಉಪಯೋಗವೂ ಆಗುತ್ತಿಲ್ಲ ಎಂಬ ಅಪವಾದವೂ ಇದೆ. ಆಧುನಿಕ ತಂತ್ರಜ್ಞಾನದ ಶೌಚಗೃಹ ವ್ಯವಸ್ಥೆ ಇದು. ನಾಣ್ಯ ಪಾವತಿಸಿ ಉಪಯೋಗಿಸುವ ಸ್ವಯಂಚಾಲಿತ ಇದರಲ್ಲಿದೆ. ನಾಣ್ಯವನ್ನು ಶೌಚಗೃಹದ ಎದುರಿನ ನಿಗದಿತ ಸ್ಥಳದಲ್ಲಿ ಹಾಕಿದ ಕೂಡಲೇ ಶೌಚಗೃಹದ ಬಾಗಿಲು ತೆರೆದುಕೊಳ್ಳುತ್ತದೆ. ಲೈಟ್‌, ಫ್ಯಾನ್‌, ಎಕ್ಸಾಸ್ಟರ್‌ ವ್ಯವಸ್ಥೆಗಳು ಸ್ವಯಂಚಾಲಿತ. ಬಳಕೆಯ ನಂತರ ನೀರೂ ತಾನಾಗಿ ಹರಿಯುತ್ತದೆ. ಕೈ ತೊಳೆಯುವ ವ್ಯವಸ್ಥೆಯೂ ಇದೆ. ಶೌಚಗೃಹದ ಮೇಲೆ 250ರಿಂದ 300 ಲೀಟರ್‌ ಸಾಮರ್ಥ್ಯದ ಟ್ಯಾಂಕ್‌ ಅಳವಡಿಸಲಾಗುತ್ತದೆ. 3 ನಿಮಿಷ ಬಳಸಿದರೆ 1.5 ಲೀಟರ್‌ ನೀರು ತಾನಾಗಿಯೇ ಫ್ಲಶ್‌ ಆಗುತ್ತದೆ. ಅದಕ್ಕಿಂತ ಹೆಚ್ಚು ಉಪಯೋಗಿಸಿದರೆ 4.5 ಲೀಟರ್‌ ಹರಿಯುತ್ತದೆ. ಪ್ರತೀ 10 ಜನ ಬಳಸಿದ ಬಳಿಕ ಶೌಚಗೃಹ ಸ್ವಯಂಚಾಲಿತವಾಗಿ ಶುಚಿಯಾಗುವವ್ಯವಸ್ಥೆ ಇದೆ. ಆದರೆ, ಈ ಮಾಹಿತಿಯಿಲ್ಲದೆ ಕೆಲವರು ಇ-ಟಾಯ್ಲೆಟ್‌ನ ಎದುರು ಗಡೆ ಪರದಾಡುತ್ತಾರೆ. ನಾಣ್ಯ ಹಾಕದೆ ಬಾಗಿಲು ತೆರೆದುಕೊಳ್ಳದು ಎಂಬುದು ಗೊತ್ತಾಗದೆ ಕೆಲವರು ಬಾಗಿಲನ್ನು ಹಿಡಿದು ಎಳೆಯುತ್ತಾರೆ. ಇನ್ನೂ ಕೆಲವರು ಇಂತಹ ಸಮಸ್ಯೆಯೇ ಬೇಡ ಎಂದು ಇ-ಟಾಯ್ಲೆಟ್‌ನ ಹತ್ತಿರದಲ್ಲಿಯೇ ಮೂತ್ರ ವಿಸರ್ಜನೆ ನಡೆಸುತ್ತಿದ್ದಾರೆ!

6.25 ಲಕ್ಷ ರೂ. ವೆಚ್ಚ
ಒಂದು ಇ-ಟಾಯ್ಲೆಟ್‌ ಅಂದಾಜು ವೆಚ್ಚ 6.25 ಲಕ್ಷ ರೂ. ಶೌಚಗೃಹವನ್ನು ಪಿಎಸ್‌ಆರ್‌ ಫ‌ಂಡ್‌ನ‌ಲ್ಲಿ ಎಚ್‌ಪಿಸಿಎಲ್‌ ಪ್ರಾಯೋಜಕತ್ವದಲ್ಲಿ ನಿರ್ಮಿ ಸಲಾಗಿದೆ. ಇದನ್ನು ಸ್ಥಳಾಂತರಿಸುವುದೂ ಸುಲಭ. ಶೌಚಾಲಯ ಬಳಕೆಗೆ ಮೊದಲು ನಾಣ್ಯ ತೂರಿಸಬೇಕು. ಸೆನ್ಸಾರ್‌ ತಂತ್ರಜ್ಞಾನವಿರುವ ಕಾರಣ ನಕಲಿ ನಾಣ್ಯ ಬಳಸಿದರೆ ಬಾಗಿಲು ತೆರೆಯಲ್ಲ. ತಾಂತ್ರಿಕ ವ್ಯವಸ್ಥೆಗಳು, ಜಿಪಿಎಸ್‌ ಸಂಪರ್ಕ ಹೊಂದಿದೆ. ತಾಂತ್ರಿಕ ವ್ಯವಸ್ಥೆಗಳು ಕೈಕೊಟ್ಟರೆ ಕೂಡಲೇ ಕಂಪನಿಯ ಕೇಂದ್ರ ಕಚೇರಿಗೆ ಅಲರ್ಟ್‌ ಹೋಗುತ್ತದೆ. ಎಂಜಿನಿಯ ರ್‌ಗಳು ಬಂದು ರಿಪೇರಿ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ, ರಿಪೇರಿಗಾಗಿ ಇಲ್ಲಿ ದಿನ, ವಾರಗಟ್ಟಲೆ ಕಾಯಬೇಕಾಗಿದೆ.

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next