ಬೆಂಗಳೂರು: ಇತ್ತೀಚೆಗೆ ನಮ್ಮ ಮೆಟ್ರೋ ಸೇವೆಯಲ್ಲಿ ಪದೇ ಪದೆ ತಾಂತ್ರಿಕ ದೋಷ ಕಾಣಿಸಿಕೊಳ್ಳುತ್ತಿದ್ದು, ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಯಲಚೇನಹಳ್ಳಿಯಿಂದ ಆರ್.ವಿ.ರಸ್ತೆಯ ಹಸಿರು ಮಾರ್ಗದ ಮೆಟ್ರೋ ರೈಲು ಬುಧವಾರ ಬೆಳಗಿನಜಾವ 5 ಗಂಟೆಗೆ ಸೇವೆ ಆರಂಭಿಸಬೇಕಿತ್ತು.
ಆದರೆ, ಥರ್ಡ್ ರೈಲ್ (ವಿದ್ಯುತ್ ಸಂಪರ್ಕ ಪೂರೈಸುವ ಲೈನ್) ಕೈಕೊಟ್ಟ ಹಿನ್ನೆಲೆಯಲ್ಲಿ ಸಮಸ್ಯೆ ಉಂಟಾಗಿತ್ತು. ನಂತರ ಸಿಬ್ಬಂದಿ ಸಮಸ್ಯೆ ಸರಿಪರಿಸಿದ ನಂತರ ಬೆಳಗ್ಗೆ 6.30ಕ್ಕೆ ರೈಲು ಸೇವೆ ಆರಂಭವಾಯಿತು. ಪರಿಣಾಮ, ಪ್ರಯಾಣಿಕರು ಸುಮಾರು ಒಂದೂವರೆ ಗಂಟೆ ಕಾಲ ಕಾಯಬೇಕಾಯಿತು.
ಕಳೆದ ಹಲವು ತಿಂಗಳಿನಿಂದ ಮೆಟ್ರೋ ಸೇವೆಯಲ್ಲಿ ತಾಂತ್ರಿಕ ದೋಷಗಳು ಕಂಡುಬಂದು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಲೇ ಇವೆ. ಆದರೆ, ಅಧಿಕಾರಿಗಳು ದೋಷಗಳ ಶಾಶ್ವತ ನಿವಾರಣೆಗೆ ಮುಂದಾಗದ ಹಿನ್ನೆಲೆಯಲ್ಲಿ ಮತ್ತೆ ಮತ್ತೆ ಸಮಸ್ಯೆ ಎದುರಾಗುತ್ತಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ರಾಜಾಜಿನಗರ ಮಾರ್ಗದಲ್ಲಿ ಲೋಕೋ ಪೈಲೆಟ್ ನಿಗದಿತ ವೇಗವಾಗಿ ರೈಲು ಚಾಲನೆ ಮಾಡದ ಕಾರಣ ರೈಲು ದಿಢೀರ್ ನಿಂತಿತ್ತು. ಈ ವೇಳೆ ರೈಲಿನ ಬಾಗಿಲುಗಳು ತೆರೆದುಕೊಳ್ಳದ ಹಿನ್ನೆಲೆಯಲ್ಲಿ ಪ್ರಯಾಣಿಕರು ಆತಂಕಕ್ಕೆ ಒಳಗಾಗಬೇಕಿತ್ತು. ಇದೇ ರೀತಿಯ ಹಲವಾರು ಘಟನೆಗಳು ನಡೆಯುತ್ತಿದ್ದು, ಶೀಘ್ರ ಸಮಸ್ಯೆಗಳ ನಿವಾರಿಸಲು ಬಿಎಂಆರ್‌ಸಿಎಲ್ ಮುಂದಾಗ ಬೇಕೆಂಬ ಒತ್ತಾಯ ಕೇಳಿಬಂದಿದೆ.
ಬುಧವಾರ ಈ ಕುರಿತು ಸ್ಪಷ್ಟನೆ ನೀಡಿರುವ ಬಿಎಂಆರ್‌ಸಿಎಲ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ವಸಂತರಾವ್, 3ನೇ ಥರ್ಡ್ ರೈಲ್ ಹಾಳಾದ ಹಿನ್ನೆಲೆಯಲ್ಲಿ ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಸಂಸ್ಥೆಯ ಸಿಬ್ಬಂದಿ ಕೂಡಲೇ ರೈಲ್ ಸರಿಪಡಿಸಿದರಿಂದ ಬೆಳಗ್ಗೆ 6.30ರಿಂದ ಸೇವೆ ಆರಂಭಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.
ಸಂಚಾರ ಸ್ಥಗಿತ ಪ್ರಕರಣಗಳು ಮೇ 17, 2017: ಬೈಯಪ್ಪನಹಳ್ಳಿಯಿಂದ ಮೈಸೂ ರು ರಸ್ತೆಗೆ ಹೊರಟಿದ್ದ ರೈಲು ಮಾಗಡಿ ರಸ್ತೆ ನಿಲ್ದಾಣ ದಲ್ಲಿ ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿತ್ತು. ಜನವರಿ 3, 2018: ನೇರಳೆ ಮಾರ್ಗದ ರೈಲಿನಲ್ಲಿ 26 ನಿಮಿಷ ವಿದ್ಯುತ್ ವ್ಯತ್ಯಯವಾಗಿ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿತ್ತು. ಮೇ 7, 2018: ಬೈಯಪ್ಪನಹಳ್ಳಿ-ಮೈಸೂರು ರಸ್ತೆ ನಡುವಿನ ನೇರಳೆ ಮಾರ್ಗದಲ್ಲಿ ತಾಂತ್ರಿಕ ದೋಷ. 35 ನಿಮಿಷ ರೈಲು ಸಂಚಾರ ಸ್ಥಗಿತ. ಜುಲೈ 17, 2018: ಬೈಯಪ್ಪನಹಳ್ಳಿ-ಮೈಸೂರು ಮಾರ್ಗದ ಆರು ಬೋಗಿಗಳ ಮೆಟ್ರೋ ರೈಲಿನಲ್ಲಿ ತಾಂತ್ರಿಕ ದೋಷ.