Advertisement

ತುಳು ಭಾಷೆ ಅಧಿಕೃತ ಭಾಷೆಯೆಂಬ ಘೋಷಣೆಗೆ “ತಾಂತ್ರಿಕ ದೋಷ’ಅಡ್ಡಿ

01:57 AM Jun 13, 2022 | Team Udayavani |

ಕಾಪು: ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಸಹಿತವಾಗಿ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕೆಂಬ ಬೇಡಿಕೆ ಈಡೇರಿಕೆಗೆ ಅಡ್ಡಿಯಾಗಿರುವ “ತಾಂತ್ರಿಕ ದೋಷ’ದ ನಿವಾರಣೆಗಾಗಿ ತುಳುನಾಡಿನ ವಿವಿಧ ದೇವಸ್ಥಾನ ಮತ್ತು ದೈವಸ್ಥಾನಗಳಲ್ಲಿ ನಡೆಸಲು ಉದ್ದೇಶಿಸಿರುವ ದೈವ – ದೇವರಿಗೆ ಮೊರೆ ಎಂಬ ವಿನೂತನ ಅಭಿಯಾನಕ್ಕೆ ಬಾರ್ಕೂರಿನಲ್ಲಿ ರವಿವಾರ ಚಾಲನೆ ನೀಡಲಾಯಿತು.

Advertisement

ಇಲ್ಲಿನ ಶ್ರೀ ಪಂಚಲಿಂಗೇಶ್ವರ ಮತ್ತು ತಾಯಿ ಭುವನೇಶ್ವರಿ ದೇವಸ್ಥಾನದಲ್ಲಿ ಆಳುಪ ರಾಜ ವಂಶಸ್ಥ ಮತ್ತು ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ| ಆಕಾಶ್‌ರಾಜ್‌ ಜೈನ್‌ ಅವರು ಪ್ರಾರ್ಥನೆಗೈಯ್ಯುವ ಮೂಲಕ ವಿನೂತನ ಅಭಿಯಾನಕ್ಕೆ ಚಾಲನೆ ನೀಡಿದರು.

ತುಳುವರು ಮೊದಲು ದೈವ ದೇವರನ್ನು ನೆನೆಯುವುದು ವಾಡಿಕೆ. ಹಾಗಾಗಿ ತುಳು ಭಾಷೆಗೆ ಸೂಕ್ತ ಸ್ಥಾನಮಾನ ನೀಡುವಲ್ಲಿ ಅಡ್ಡಿಯಾಗುತ್ತಿದೆ ಎನ್ನಲಾಗಿರುವ ತಾಂತ್ರಿಕ ದೋಷಗಳ ನಿವಾರಣೆಯಾಗಲಿ ಎಂಬ ಉದ್ದೇಶದೊಂದಿಗೆ ತುಳು ಸಾಹಿತ್ಯ ಅಕಾಡೆಮಿ, ಜೈ ತುಳುನಾಡು ಮತ್ತು ತುಳು ಪರ ಹೋರಾಟಗಾರರು ತಮ್ಮ ಹತ್ತಿರದ ದೈವಾಲಯ ಮತ್ತು ದೇವಸ್ಥಾನಗಳಲ್ಲಿ ಪ್ರಾರ್ಥನೆ ಸಲ್ಲಿಸಲು ನಿರ್ಧರಿಸಿದ್ದಾರೆ.

ತುಳುನಾಡಿನ ಧಾರ್ಮಿಕ ಕ್ಷೇತ್ರಗ‌ಳಾದ ಪುಂಡರೀಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಬೇಲಾಡಿ, ಶ್ರೀ ಬ್ರಹ್ಮ ಮೊಗೇರ ದೇವಸ್ಥಾನ ಅಲಿಮಾರು ಗುಡ್ಡೆ ಈದು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಮಲ್ಪೆ ಕಲ್ಮಾಡಿ ಕೊರಗಜ್ಜನ ಕಟ್ಟೆ, ಶ್ರೀ ಮಹಾಂಕಾಳಿ ಮಠ ಪಳ್ಳಿ, ಬಾರ್ಕೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕುಂಬ್ಳೆ ಸಿರಿಯಾ ಶಂಕರನಾರಾಯಣ ದೇವಸ್ಥಾನ, ಮಂಜೇಶ್ವರ – ಕಾಸರಗೋಡು, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ ಸಹಿತ ವಿವಿಧ ದೇವಸ್ಥಾನ ಮತ್ತು ದೈವಸ್ಥಾನಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಲಾಯಿತು.

ದೈವ ಪ್ರೇರಣೆಯಾಗಲಿ
ತುಳುನಾಡಿನ ದೈವ ದೇವರು ಎಲ್ಲರಿಗೂ ಸದ್ಬುದ್ಧಿ ನೀಡಿ ತುಳು ಭಾಷೆಗೆ ಸಿಗಬೇಕಿರುವ ಮಾನ್ಯತೆಯನ್ನು ದೊರಕಿಸಿ ಕೊಡಲು ದೈವ ಪ್ರೇರಣೆಯಾಗಲಿ ಎಂದು ಪ್ರಾರ್ಥಿಸಿದ್ದೇವೆ ಎಂದು ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಆಕಾಶ್‌ರಾಜ್‌ ಜೈನ್‌ ತಿಳಿಸಿದ್ದಾರೆ.

Advertisement

ನಿರಂತರ ಹೋರಾಟ
ಬಹಳಷ್ಟು ವರ್ಷಗಳಿಂದ ತುಳು ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕೆಂಬ ಬೇಡಿಕೆಯಿದೆ. ಮಾತ್ರವಲ್ಲದೆ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವಂತೆಯೂ ಹೋರಾಟ ನಡೆಯುತ್ತಿದೆ. ಈ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ನೇತೃತ್ವದ ನಿಯೋಗವು ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಮನವಿ ನೀಡಿತ್ತು. ವರ್ಷದ ಹಿಂದೆ ಬೃಹತ್‌ ಟ್ವಿಟರ್‌ ಅಭಿಯಾನ ನಡೆಸಿ ಆಗ್ರಹಿಸಲಾಗಿತ್ತು. ಹ್ಯಾಶ್‌ ಟ್ಯಾಗ್‌ ಮೂಲಕ ಟ್ವೀಟ್‌ ಮಾಡಲಾಗಿತ್ತು. ಕರಾವಳಿಯ ಶಾಸಕರು ಮತ್ತು ಸಂಸದರು ಕೂಡ ಇದಕ್ಕೆ ಬೆಂಬಲ ಸೂಚಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ ಕುಮಾರ್‌ ಅವರು ತುಳು ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಘೋಷಿಸುವುದು ನನ್ನ ಕಾರ್ಯಸೂಚಿಯಲ್ಲಿ ಆದ್ಯತೆಯ ಸ್ಥಾನದಲ್ಲಿದೆ ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next