Advertisement
ತರುಣ್ ಜಿನ್‌ರಾಜ್ ಅಲಿಯಾಸ್ ಪ್ರವೀಣ್ ಬಾಟಲೆ ಬಂಧಿತ ಆರೋಪಿ. 2003ರಲ್ಲಿ ಪತ್ನಿ ಸಜಿನಿಯನ್ನು ವ್ಯವಸ್ಥಿತ ಸಂಚು ರೂಪಿಸಿ ಕೊಲೆಗೈದಿದ್ದ ತರುಣ್, ನಂತರ ತಲೆ ಕೂದಲು ತೆಗೆಸಿ ಗುರುತು ಸಿಗದಂತೆ ವೇಷ ಬದಲಿಸಿಕೊಂಡು ಬೆಂಗಳೂರಿಗೆ ಬಂದಿದ್ದ. ತನ್ನ ಹೆಸರನ್ನು ಪ್ರವೀಣ್ ಬಾಟಲೆ ಎಂದು ಬದಲಿಸಿಕೊಂಡು. ಶೈಕ್ಷಣಿಕ ದಾಖಲೆಗಳಲ್ಲಿಯೂ ಹೆಸರು ಬದಲಿಸಿದ್ದ. ಸಾಫ್ಟ್ವೇರ್ ಕಂಪನಿಯಲ್ಲಿ ಉದ್ಯೋಗ ಪಡೆದಿದ್ದ.
ಕುಟುಂಬಸ್ಥರಿಗೆ ಕೇಳಿದರೆ ಸೊಸೆ ಮೃತಪಟ್ಟ ಮೇಲೆ ಆತ ಮನೆಗೆ ಬಂದಿಲ್ಲ ಎಂದು ಹೇಳುತ್ತಿದ್ದರು. ಆತನ ಬಗ್ಗೆ ಸಣ್ಣ ಸುಳಿವು ನೀಡುತ್ತಿರಲಿಲ್ಲ. ಕಳೆದ ಹಲವು ದಿನಗಳ ಹಿಂದೆ ಈ ಪ್ರಕರಣದ ಮರು ತನಿಖೆ ಆರಂಭಿಸಿದ್ದ ಪೊಲೀಸರು, ತರುಣ್ ಬಂಧನಕ್ಕೆ ಮಾಹಿತಿ ಕಲೆ ಹಾಕುವಾಗ ಆತ ಬೆಂಗಳೂರಿನಲ್ಲಿ ನೆಲೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರ ಸಹಕಾರ ಕೋರಿದ್ದರು.
Related Articles
Advertisement
ನಕಲಿ ಆಧಾರ್ ಕಾರ್ಡ್: ಆರೋಪಿ ತರುಣ್ ಹುಳಿಮಾವು ಪ್ರದೇಶದಲ್ಲಿ ವಾಸವಿದ್ದು, ಪ್ರವೀಣ್ ಬಾಟಲೆ ಹೆಸರಿನಲ್ಲಿ ಆಧಾರ್ ಕಾರ್ಡ್ ಕೂಡ ಮಾಡಿಸಿಕೊಂಡಿದ್ದಾನೆ. ಮೊದಲಿದ್ದ ಸಿಮ್ ಕಾರ್ಡ್ ಬಳಸದೆ ಹೊಸ ಸಿಮ್ ಕಾರ್ಡ್ ಬಳಸುತ್ತಿದ್ದ. ಅಕ್ಕ-ಪಕ್ಕದ ನಿವಾಸಿಗಳು, ಕಂಪನಿ ಸಿಬ್ಬಂದಿ ಸೇರಿ ಯಾರಿಗೂ ತನ್ನ ಅಸಲಿ ಹೆಸರು ಹೇಳಿರಲಿಲ್ಲ. ಜತೆಗೆ ಕಂಪನಿಯಲ್ಲಿ ಇತ್ತೀಚೆಗಷ್ಟೇ ಸೀನಿಯರ್ ಮ್ಯಾನೇಜರ್ ಆಗಿ ಬಡ್ತಿ ಹೊಂದಿದ್ದ ಎಂದು ತಿಳಿದು ಬಂದಿದೆ.
ಜಿನರಾಜ್ ಎಂದ ಕೂಡಲೇ ತಿರುಗಿದ್ದ: ಆರೋಪಿ ಸಾಫ್ಟ್ವೇರ್ ಕಂಪನಿಯಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಬಗ್ಗೆ ಮಾಹಿತಿಯಂತೆ ಆತನ ಬಂಧನಕ್ಕೆ ವಿಶೇಷ ತಂಡ ತೆರಳಿತ್ತು. ಆದರೆ, ತರುಣ್ ಜಿನರಾಜ್ ಎಂಬ ಹೆಸರಿನ ಉದ್ಯೋಗಿಯೇ ಇರಲಿಲ್ಲ. ಅಲ್ಲದೆ, 15 ವರ್ಷಗಳ ಹಿಂದಿನ ಫೋಟೋ ನೋಡಿ ಆತನನ್ನು ಗುರ್ತಿಸುವುದು ಕಷ್ಟವಾಗಿತ್ತು. ಹೀಗಾಗಿ, ಕಂಪನಿಯ ಮುಂಭಾಗ ನಿಂತುಕೊಂಡು ರಾತ್ರಿ ಪಾಳಿಗೆ ಕೆಲಸಕ್ಕೆ ಆಗಮಿಸುತ್ತಿದ್ದ ಸಿಬ್ಬಂದಿಯನ್ನು ಗುರ್ತಿಸಿ “ಜಿನರಾಜ್’ ಎಂದು ಕರೆದ ಕೂಡಲೇ ತರುಣ್ ಹಿಂತಿರುಗಿ ನೋಡಿದ್ದ. ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪತ್ನಿಯ ಕೊಲೆ ಮಾಡಿದ್ದ ವಿಷಯ ಒಪ್ಪಿಕೊಂಡ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಪತ್ನಿ ಕೊಂದ ನಂತರ ಆತನೇ ದೂರು ನೀಡಿದ್ದ ಆರೋಪಿ ತರುಣ್ ಜಿನರಾಜ್ ಸಾಫ್ಟ್ವೇರ್ ಉದ್ಯೋಗಿಯಾಗಿದ್ದ ಪತ್ನಿ ಸಜನಿಯನ್ನು 2003ರ ಆಗಸ್ಟ್ ನಲ್ಲಿ ಸಹಚರರ ಜತೆಗೂಡಿ ಹಗ್ಗದಿಂದ ಕತ್ತು ಬಿಗಿದು ಕೊಲೆಗೈದಿದ್ದ. ನಂತರ, ಆತನೇ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ನಾನು ಮನೆಯಲ್ಲಿ ಇಲ್ಲದ ವೇಳೆ ಮನೆ ಡಕಾಯಿತಿಗೆ ಬಂದಿರುವ ಕಳ್ಳರು, ಚಿನ್ನಾಭರಣ ದೋಚಿ ಪತ್ನಿಯನ್ನು ಕೊಲೆಗೈದಿದ್ದಾರೆ ಎಂದು ದೂರು ನೀಡಿದ್ದ. ಪತ್ನಿಯ ಅಂತ್ಯ ಕ್ರಿಯೆಯನ್ನೂ ಮಾಡಿದ್ದ ಆರೋಪಿ, ಕೆಲವು ದಿನಗಳ ಬಳಿಕ ಸದ್ದಿಲ್ಲದೆ ಪರಾರಿಯಾಗಿದ್ದ. ಈ ಕೃತ್ಯದ ಬಗ್ಗೆ ಆತನ ಕುಟುಂಬಸ್ಥರಿಗೆ ಗೊತ್ತಿದ್ದರೂ, ಇದುವರೆಗೂ ಮಗನ ಇರುವಿಕೆ ಬಗ್ಗೆ ಬಾಯಿಬಿಟ್ಟಿರಲಿಲ್ಲ ಎಂದು ಅಧಿಕಾರಿ ಹೇಳಿದರು.