ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ (US President) ಡೊನಾಲ್ಡ್ ಟ್ರಂಪ್ ಮೇಲೆ ಎರಡನೇ ಬಾರಿ ನಡೆದ ಹ*ತ್ಯೆ ಪ್ರಯತ್ನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಶತಕೋಟ್ಯಧಿಪತಿ ಎಲಾನ್ ಮಸ್ಕ್ (Elon Musk), ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮೇಲೆ ಯಾಕೆ ಹ*ತ್ಯಾ ಪ್ರಯತ್ನ ನಡೆಯುತ್ತಿಲ್ಲ ಎಂದು ಪ್ರಶ್ನಿಸುವ ಮೂಲಕ ವಿವಾದಕ್ಕೆ ಗುರಿಯಾಗಿರುವುದಾಗಿ ವರದಿ ತಿಳಿಸಿದೆ.
ಫ್ಲೋರಿಡಾ ಗಾಲ್ಫ್ ಕ್ಲಬ್‌ನಲ್ಲಿ ಭಾನುವಾರ(ಸೆ.15) ಆಟವಾಡುತ್ತಿದ್ದ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಲಾಗಿದ್ದು ಅದೃಷ್ಟವಶಾತ್ ಗುಂಡಿನ ದಾಳಿಯಿಂದ ಟ್ರಂಪ್ ಬಚಾವಾಗಿದ್ದರು.
ಇದೊಂದು ಹ*ತ್ಯಾ ಪ್ರಯತ್ನ ಎಂಬುದಾಗಿ ಎಫ್ ಬಿಐ(FBI) ಸ್ಪಷ್ಟಪಡಿಸಿದೆ. ಘಟನೆಯಲ್ಲಿ ಡೊನಾಲ್ಡ್ ಟ್ರಂಪ್ ಅವರಿಗೆ ಯಾವುದೇ ತೊಂದರೆಯಾಗಿಲ್ಲ. ಅವರ ಪ್ರಚಾರದ ಮೇಲೂ ಪರಿಣಾಮ ಬೀರಿಲ್ಲ ಎಂದು ವರದಿ ವಿವರಿಸಿದೆ.
ಡೊನಾಲ್ಡ್ ಟ್ರಂಪ್ ಅವರನ್ನು ಕೊಲ್ಲಲು ಜನರು ಯಾಕೆ ಬಯಸುತ್ತಿದ್ದಾರೆ ಎಂದು ಪ್ರಶ್ನಿಸಿ ಟ್ವೀಟ್ ಮಾಡಿರುವ ಮಸ್ಕ್, ಆದರೆ ಯಾರೊಬ್ಬರೂ ಬೈಡೆನ್ ಆಗಲಿ ಹ್ಯಾರಿಸ್ ಅವರನ್ನು ಕೊಲ್ಲಲು ಪ್ರಯತ್ನಿಸುತ್ತಿಲ್ಲವೇಕೆ ಎಂದು ತಿಳಿಸಿದ್ದಾರೆ.
ಈ ದೇಶದಲ್ಲಿ ರಾಜಕೀಯ ಹಿಂಸಾಚಾರಕ್ಕಾಗಲಿ ಅಥವಾ ಹಿಂಸಾಚಾರಕ್ಕೆ ಅವಕಾಶ ಇಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಶ್ವೇತಭವನ ಬಿಡುಗಡೆಗೊಳಿಸಿರುವ ಪ್ರಕಟನೆಯಲ್ಲಿ ತಿಳಿಸಿದ್ದಾರೆ.