Advertisement

ಗೋವಾದಿಂದ ಮತ್ತೆ ಕಣಕುಂಬಿ ಕಿತಾಪತಿ

06:00 AM Jan 29, 2018 | |

ಬೆಳಗಾವಿ/ಖಾನಾಪುರ: ಎರಡು ವಾರದ ಹಿಂದೆ ಗೋವಾದ ಜಲಸಂಪನ್ಮೂಲ ಸಚಿವ ವಿನೋದ ಪಾಲೇಕರ್‌ ಖಾನಾಪುರ ತಾಲೂಕಿನ ಕಳಸಾ ನಾಲಾ ಪ್ರದೇಶಕ್ಕೆ ಭೇಟಿ ನೀಡಿ ತೀವ್ರ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಭಾನುವಾರ ಗೋವಾ ವಿಧಾನಸಭೆ ಸಭಾಧ್ಯಕ್ಷ ಮತ್ತು ಉಪಸಭಾಧ್ಯಕ್ಷರು ಅನಿರೀಕ್ಷಿತವಾಗಿ ಇದೇ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಸ್ಯೆ ಮತ್ತಷ್ಟು ಜಟಿಲಗಾಗುವಂತೆ ಮಾಡಿದರು.

Advertisement

ಯಾವುದೇ ಮುನ್ಸೂಚನೆ ನೀಡದೆ ಸಭಾಧ್ಯಕ್ಷ ಪ್ರಮೋದ ಸಾವಂತ್‌, ಉಪಸ್ಪೀಕರ್‌ ಮೈಕಲ್‌ ಲೋಬೋ, ಇಬ್ಬರು ಶಾಸಕರು, ಮಾಜಿ ಶಾಸಕರು ಸೇರಿದಂತೆ 40 ಕ್ಕೂ ಹೆಚ್ಚು ಸದಸ್ಯರ ತಂಡ ಕಣಕುಂಬಿ ಬಳಿಯ ಕಳಸಾ ನಾಲಾ ಪ್ರದೇಶಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿಯ ಪರಿಶೀಲನೆ ನಡೆಸಿತು. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ನಿಯೋಗ ಪರಿಶೀಲನೆ ನಡೆಸಿತು. ಜತೆಗೆ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳುವ ಮೂಲಕ ನ್ಯಾಯಾ ಧಿಕರಣಕ್ಕೆ ಸಲ್ಲಿಸಬೇಕಾದ ದಾಖಲೆಗಳ ಕುರಿತು ಮಾಹಿತಿ ಸಂಗ್ರಹಿಸಿತು. ಇದಲ್ಲದೇ ನಿಯೋಗವು ಕಣಕುಂಬಿಯಲ್ಲಿರುವ ಮಾವುಲಿ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿತು.

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಪ್ರಮೋದ ಸಾವಂತ್‌ ಹಾಗೂ ಮೈಕಲ್‌ ಲೋಬೋ ಕರ್ನಾಟಕ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು. ಕಳಸಾ ನಾಲಾ ಪ್ರದೇಶದಲ್ಲಿ ಕಾಮಗಾರಿ ಕೈಗೊಳ್ಳುವ ಮೂಲಕ ನ್ಯಾಯಾಧಿ ಕರಣದ ಆದೇಶ ಉಲ್ಲಂಘಿಸಲಾಗಿದೆ. ಇದನ್ನು ಗೋವಾ ವಿಧಾನಸಭೆ ಗಮನಕ್ಕೆ ತರುವುದಾಗಿ ಹೇಳಿದರು. ಆದರೆ, ಈ ಹೊತ್ತಿಗೆ ಯಾವುದೇ ಕಾಮಗಾರಿ ನಡೆಯುತ್ತಿಲ್ಲ ಎಂದೂ ಹೇಳಿದರು.

ಬರುವ ಫೆ.6ರಿಂದ ಮಹದಾಯಿ ನ್ಯಾಯಾ ಧಿಕರಣದಲ್ಲಿ ವಿಚಾರಣೆ ಆರಂಭವಾಗಲಿರುವುದರಿಂದ ಈ ನಿಯೋಗದ ಭೇಟಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇದೇ ವೇಳೆ ಕರ್ನಾಟಕದಲ್ಲಿ ಗೋವಾ ಸರ್ಕಾರದ ನಡೆಗೆ ಭಾರಿ ವಿರೋಧ ವ್ಯಕ್ತವಾಗಿದೆ.

ಸುಳ್ಳಾದ ವದಂತಿ
ಗೋವಾದ ಮುಖ್ಯಮಂತ್ರಿ ಮನೋಹರ ಪರೀಕ್ಕರ್‌ ಭಾನುವಾರ ಬೆಳಗ್ಗೆ ದಿಢೀರ್‌ನೆ ಕಳಸಾ ನಾಲಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವರೊಂದಿಗೆ ಗೋವಾ ಸರ್ಕಾರದ ಸಚಿವರು, ವಿಧಾನಸಭಾಧ್ಯಕ್ಷರು ಹಾಗೂ ಅದಿಕಾರಿಗಳಿದ್ದರು ಎಂಬ ಮಾಹಿತಿ ಕರ್ನಾಟಕದಲ್ಲಿ ಭಾರಿ ವಿರೋಧ ಹಾಗೂ ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು. ಗೋವಾದ ಮುಖ್ಯಮಂತ್ರಿಗಳು ಸುಮಾರು ಅರ್ಧಗಂಟೆ ಕಾಲ ಕಳಸಾ ನಾಲಾ ಪ್ರದೇಶದಲ್ಲಿ ಪರಿಶೀಲನೆ ನಡೆಸಿ ಕರ್ನಾಟಕದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು ಎಂದು ವದಂತಿಗಳು ಹರಡಿದ್ದವು. ಆದರೆ ಸ್ವಲ್ಪ ಹೊತ್ತಿನ ನಂತರ ಇದು ಸುಳ್ಳು. ಗೋವಾದ ಮುಖ್ಯಮಂತ್ರಿಗಳು ಬಂದಿಲ್ಲ ಎಂಬುದು ದೃಢಪಟ್ಟಿತು. ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಸುಧಿಧೀರಕುಮಾರ ರೆಡ್ಡಿ ಅವರೇ ಸ್ವತಃ ಗೋವಾದ ಮುಖ್ಯಮಂತ್ರಿಗಳು ಕಳಸಾ ನಾಲಾ ಪ್ರದೇಶಕ್ಕೆ ಭೇಟಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

ಗೋವಾದವರನ್ನು ತಡೆಯುವುದು ಬೇಡ. ಶಿಷ್ಟಾಚಾರದ ಪ್ರಕಾರ ಅವರ ಜತೆ ಸಹಕರಿಸಿ ಅಂತ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಆದರೆ, ಬರುವುದರ ಬಗ್ಗೆ ನಮಗೆ ತಿಳಿಸಿರಲಿಲ್ಲ. ಅವರು ವೀಕ್ಷಣೆ ಮಾಡಿ ಹೋಗಲಿ. ನಾವು ಕಾಮಗಾರಿ ಮುಂದುವರಿಸಿಲ್ಲ ಮತ್ತು ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ.
– ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next