ಹೈದರಾಬಾದ್: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿಯೇ ಭಾರತ ತಂಡ ಅವಮಾನ ಅನುಭವಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ 190 ರನ್ ಗಳಿಸಿದ ಮೇಲೂ ಟೆಸ್ಟ್ ಪಂದ್ಯವನ್ನು ಸೋತು ಮುಖಭಂಗಕ್ಕೀಡಾಗಿದೆ. ಸೋತ ನಿರಾಶೆಯಲ್ಲಿರುವ ಟೀಂ ಇಂಡಿಯಾಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.
ಹೈದರಾಬಾದ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ 87 ರನ್ ಗಳಿಸಿದ್ದ ರವೀಂದ್ರ ಜಡೇಜಾ ಗಾಯಗೊಂಡಿದ್ದಾರೆ. ವರದಿಯ ಪ್ರಕಾರ, ಮಂಡಿರಜ್ಜು ಸಮಸ್ಯೆಯಿಂದಾಗಿ ಭಾರತದ ಆಲ್‌ರೌಂಡರ್ ವಿಶಾಖಪಟ್ಟಣಂನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯವನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಬೆನ್ ಸ್ಟೋಕ್ಸ್ ಎರಡನೇ ಇನ್ನಿಂಗ್ಸ್‌ನಲ್ಲಿ ಜಡೇಜಾ ಅವರನ್ನು ರನ್ ಔಟ್ ಮೂಲಕ ಔಟ್ ಮಾಡಿದರು. ಈ ವೇಳೆ ಜಡೇಜಾ ಮಂಡಿರಜ್ಜು ಸಮಸ್ಯೆಯಲ್ಲಿ ಸಿಲುಕಿದ್ದರು. ಅವರು ಓಡಲು ಕಷ್ಟಪಟ್ಟರು. ಫೆಬ್ರವರಿ 2 ರಂದು ಎರಡನೇ ಟೆಸ್ಟ್ ಪಂದ್ಯವು ಪ್ರಾರಂಭವಾಗಲಿದೆ, ಆ ಪಂದ್ಯದಲ್ಲಿ ಜಡೇಜಾ ಕಣಕ್ಕಿಳಿಯುವುದು ಅನುಮಾನವಾಗಿದೆ.
ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಜಡೇಜಾ ಗಾಯದ ಬಗ್ಗೆ ಹೆಚ್ಚು ಮಾಹಿತಿ ಬಹಿರಂಗಪಡಿಸಲಿಲ್ಲ ಆದರೆ ಶೀಘ್ರದಲ್ಲೇ ಅವರು ಫಿಸಿಯೋ ಜೊತೆ ಮಾತನಾಡಲಿದ್ದಾರೆ ಎಂದು ಹೇಳಿದ್ದಾರೆ.
ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್, ” ನೋಡೋಣ. ನಾನೂ ಇನ್ನೂ ಫಿಸಿಯೋ ಜೊತೆ ಮಾತನಾಡಿಲ್ಲ, ನಾನು ಹಿಂತಿರುಗಿದ ನಂತರ ನಾನು ಅವರೊಂದಿಗೆ ಮಾತನಾಡುತ್ತೇನೆ” ಎಂದಿದ್ದರು.
ಮೊದಲ ಟೆಸ್ಟ್ ಪಂದ್ಯ ಸೋಲನುಭವಿಸಿದ ಬಳಿಕ ಟೀಂ ಇಂಡಿಯಾ ಎರಡನೇ ಪಂದ್ಯಕ್ಕೆ ಬದಲಾವಣೆ ಮಾಡುವ ಸಾಧ್ಯತೆ ಹೆಚ್ಚಿದೆ. ಜಡೇಜಾ ಅನುಪಸ್ಥಿತಿಯಲ್ಲಿ ಲೆಗ್ ಸ್ಪಿನ್ನರ್ ಕುಲದೀಪ್ ಯಾದವ್ ಅವರು ಆಡುವ ಬಳಗದಲ್ಲಿ ಸ್ಥಾನ ಪಡೆಯಬಹುದು.