ಮುಂಬೈ: ಟೀಂ ಇಂಡಿಯಾ ಇದೀಗ ಬದಲಾವಣೆಯ ಹಂತದಲ್ಲಿದೆ. ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಅವರು ಟಿ20 ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ. ಮತ್ತೊಂದೆಡೆ ಭಾರತ ತಂಡದ ಕೋಚಿಂಗ್ ಸ್ಟಾಫ್ ಬದಲಾಗಿದೆ. ರಾಹುಲ್ ದ್ರಾವಿಡ್ ಅವರಿಂದ ತೆರವಾದ ಮುಖ್ಯ ಕೋಚ್ ಸ್ಥಾನಕ್ಕೆ ಗೌತಮ್ ಗಂಭೀರ್ ಅವರು ಬಂದಿದ್ದಾರೆ. ಉಳಿದ ಸಿಬ್ಬಂದಿಗಳ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ.
ಬ್ಯಾಟಿಂಗ್ ಕೋಚ್ ಸ್ಥಾನಕ್ಕೆ ಅಭಿಷೇಕ್ ನಾಯರ್ ಹೆಸರು ಬಹುತೇಕ ಅಂತಿಮವಾಗಿದೆ. ಉಳಿದಂತೆ ಬೌಲಿಂಗ್ ಕೋಚ್ ಸ್ಥಾನಕ್ಕೆ ಜಹೀರ್ ಖಾನ್, ಲಕ್ಷ್ಮೀಪತಿ ಬಾಲಜಿ ಹೆಸರು ಕೇಳಿಬಂದಿದೆ. ಅಲ್ಲದೆ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಮೋರ್ನೆ ಮೊರ್ಕೆಲ್ ಹೆಸರನ್ನು ಗಂಭೀರ್ ಸೂಚಿಸಿದ್ದಾರೆ ಎನ್ನಲಾಗಿದೆ.
ಟೀಂ ಇಂಡಿಯಾದ ಪ್ರಮುಖ ವೇಗಿ ಮೊಹಮ್ಮದ್ ಶಮಿ ಅವರು ಕಳೆದ ಏಕದಿನ ವಿಶ್ವಕಪ್ ಬಳಿಕ ಯಾವುದೇ ಕ್ರಿಕೆಟ್ ಆಡಿಲ್ಲ. ಗಾಯಗೊಂಡಿದ್ದ ಅವರು ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿ ವಿರಾಮ ಪಡೆದು ಮತ್ತೆ ತಯಾರಿ ಮಾಡುತ್ತಿದ್ದಾರೆ. ಭಾರತ ತಂಡವು ಭವಿಷ್ಯದಲ್ಲಿ ಟಿ20 ಮಾದರಿಯಲ್ಲಿ ಯುವ ಪಡೆಯೊಂದಿಗೆ ಮುಂದುವರಿಯುವುದು ಬಹುತೇಕ ನಿಶ್ಚಿತವಾದ ಕಾರಣದಿಂದ ಶಮಿ ಅವರು ಮತ್ತೆ ಟಿ20 ಆಡುತ್ತಾರಾ ಎನ್ನುವುದು ಅನುಮಾನವಾಗಿದೆ.
ಇದುವರೆಗೆ ಟೀಂ ಇಂಡಿಯಾದ ಬೌಲಿಂಗ್ ಕೋಚ್ ಆಗಿದ್ದ ಪರಾಸ್ ಮಾಂಬ್ರೆ ಅವರು ಇದೀಗ ಶಮಿ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ. ಗಂಭೀರ್ ಮತ್ತವರ ತಂಡವು ತಡಮಾಡದೆ ಶಮಿ ಮತ್ತವರ ಭವಿಷ್ಯದ ಬಗ್ಗೆ ಚರ್ಚಿಸಬೇಕಿದೆ ಎಂದಿದ್ದಾರೆ.
“ಸಿಬ್ಬಂದಿಗಳು ಶಮಿಯೊಂದಿಗೆ ಮಾತನಾಡಬೇಕು. ಅವನು ಏನು ಮುಂದೆ ಮಾಡಬೇಕೆಂದು ತಿಳಿದುಕೊಳ್ಳಬೇಕು. ಯಾಕೆಂದರೆ ಅವನೇನು ಯುವಕನಲ್ಲ, ಆದ್ದರಿಂದ ಅವನು ಎಲ್ಲಿ ಹೊಂದಿಕೊಳ್ಳುತ್ತಾನೆ ಮತ್ತು ಅವನು ಇನ್ನೂ ಎಷ್ಟು ವರ್ಷ ಆಡಲು ನೋಡುತ್ತಿದ್ದಾನೆ? ನಾವು ಅವನನ್ನು ಹೇಗೆ ಬುದ್ಧಿವಂತಿಕೆಯಿಂದ ಬಳಸುತ್ತೇವೆ? ಎಂದು ತಿಳಿದುಕೊಳ್ಳಬೇಕು. ಶಮಿಯಿಂದ ಉತ್ತಮ ಕ್ರಿಕೆಟ್ ಪಡೆಯುವುದು ಹೇಗೆ ಎಂದು ಗಂಭೀರ್ ಮತ್ತವರ ತಂಡದ ಖಂಡಿತ ಕಂಡುಕೊಳ್ಳುತ್ತಾರೆ” ಎಂದು ಮಾಂಬ್ರೆ ದಿ ಟೆಲಿಗ್ರಾಫ್ ಆನ್‌ಲೈನ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
“ಈಗ ಟೆಸ್ಟ್ ಗಳ ಮೇಲೆ ಕೇಂದ್ರೀಕೃತವಾಗಿದ್ದರೆ, ಅವರು ಆಸ್ಟ್ರೇಲಿಯಾ ಸರಣಿಗೆ ಫಿಟ್ ಆಗಿರುತ್ತಾರೆ ಎಂದು ಖಚಿತಪಡಿಸಿಕೊಳ್ಳಿ. ಆದಾಗ್ಯೂ, ಶಮಿ ಏನು ಬಯಸುತ್ತಾರೆ ಮತ್ತು ಅವರ ದೇಹವು ಏನು ಹೇಳುತ್ತದೆ ಎಂಬುದು ಮುಖ್ಯ. ಆದರೆ ದೀರ್ಘ ವಿರಾಮವನ್ನು ಹೊಂದಿರುವ ಕಾರಣ ಆಸ್ಟ್ರೇಲಿಯಾ ಪ್ರವಾಸದ ಮೊದಲು ಅವರು ಸ್ವಲ್ಪ ಕ್ರಿಕೆಟ್ ಆಡಬೇಕಾದ ಅಗತ್ಯವಿದೆ” ಎಂದು ಮಾಂಬ್ರೆ ಹೇಳಿದರು.