ಸಿಲ್ಹೆಟ್: ವನಿತಾ ಏಷ್ಯಾಕಪ್ ಕೂಟದ ಸೆಮಿ ಫೈನಲ್ ಪಂದ್ಯವನ್ನು ನಿರೀಕ್ಷೆಯಂತೆ ಭಾರತ ತಂಡವು ಜಯಿಸಿದೆ. ಥಾಯ್ಲೆಂಡ್ ವಿರುದ್ಧ ನಡೆದ ಪಂದ್ಯವನ್ನು 74 ರನ್ ಅಂತರದಿಂದ ಗೆದ್ದ ಹರ್ಮನ್ ಪಡೆಯು ಫೈನಲ್ ಪ್ರವೇಶ ಪಡೆದಿದೆ.
ಸಿಲ್ಹೆಟ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 20 ಓವರ್ ಗಳಲ್ಲಿ ಆರು ವಿಕೆಟ್ ಗಳಲ್ಲಿ 148 ರನ್ ಗಳಿಸಿದರೆ, ಥಾಯ್ಲೆಂಡ್ ತಂಡವು 9 ವಿಕೆಟ್ ಕಳೆದುಕೊಂಡು ಕೇವಲ 74 ರನ್ ಮಾತ್ರ ಗಳಿಸಿತು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಭಾರತ ತಂಡಕ್ಕೆ ಶಫಾಲಿ ಉತ್ತಮ ಆರಂಭ ನೀಡಿದರು. 28 ಎಸೆತಗಳನ್ನು ಎದುರಿಸಿದ ಶಫಾಲಿ ಒಂದು ಸಿಕ್ಸರ್ ಐದು ಬೌಂಡರಿ ಸಹಾಯದಿಂದ 42 ರನ್ ಗಳಿಸಿದರು. ಉಳಿದಂತೆ ಜೆಮಿಮಾ 27 ರನ್, ಹರ್ಮನ್ ಪ್ರೀತ್ ಕೌರ್ 36 ರನ್ ಮಾಡಿದರು.
ಇದನ್ನೂ ಓದಿ:ಮಳೆಯಿಂದ ಹಾನಿಯಾದವರಿಗೆ ಪರಿಹಾರ ವಿತರಣೆಯಲ್ಲಿ ಲೋಪ ಸಲ್ಲದು: ಸಿಎಂ ಬೊಮ್ಮಾಯಿ ಸೂಚನೆ
ಗುರಿ ಬೆನ್ನತ್ತಿದ ಥಾಯ್ಲೆಂಡ್ ಪರ ಸೊರ್ನಾರಿನ್ ಟಿಪೋಚ್ ಮತ್ತು ನತ್ತಾಯ ಬೂಚ್ಚತ್ತಮ್ ಮಾತ್ರ ಎರಡಂಕಿ ಮೊತ್ತ ಗಳಿಸಿದರು. ಅವರಿಬ್ಬರೂ ತಲಾ 21 ರನ್ ಗಳಿಸಿದರು. ಭಾರತದ ಪರ ದೀಪ್ತಿ ಶರ್ಮಾ ಮೂರು ವಿಕೆಟ್, ರಾಜೇಶ್ವರಿ ಗಾಯಕ್ವಾಡ್ ಎರಡು ವಿಕೆಟ್, ರೇಣುಕಾ, ಸ್ನೇಹ್ ಮತ್ತು ಶಫಾಲಿ ತಲಾ ಒಂದು ವಿಕೆಟ್ ಪಡೆದರು.