ಸೌತಾಂಪ್ಟನ್: ಕಿವೀಸ್ ವಿರುದ್ಧ ಆಡಲಾಗುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಟೀಮ್ ಇಂಡಿಯಾ ಭರ್ಜರಿ ಅಭ್ಯಾಸ ಆರಂಭಿಸಿದೆ. ಶುಕ್ರವಾರ ಭಾರತದ ಆಟಗಾರರೆಲ್ಲ ಒಟ್ಟಾಗಿ ಸೌತಾಂಪ್ಟನ್ ಅಂಗಳದಲ್ಲಿ ಬ್ಯಾಟಿಂಗ್, ಫೀಲ್ಡಿಂಗ್ ಮತ್ತು ಬೌಲಿಂಗ್ ಅಭ್ಯಾಸ ನಡೆಸಿದ್ದಾರೆ.
ಮೊಹಮ್ಮದ್ ಶಮಿ, ಬುಮ್ರಾ, ಸಿರಾಜ್ ಬೌಲಿಂಗ್ ಅಭ್ಯಾಸ ನಡೆಸಿದರೆ, ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಪಂತ್, ಪೂಜಾರ ನೆಟ್ ಪ್ರ್ಯಾಕ್ಟೀಸ್ ಮುಗಿಸಿದರು. ಬಳಿಕ ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಅವರ ಮಾರ್ಗದರ್ಶನದಂತೆ ಸ್ಲಿಪ್ ನಲ್ಲಿ ಕ್ಯಾಚ್ ಪಡೆಯುವ ಅಭ್ಯಾಸ ನಡೆಸಿದರು.
ಅಭ್ಯಾಸ ಪಂದ್ಯ: ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ ತಂಡದ ಆಟಗಾರರನ್ನು ಎರಡು ತಂಡಗಳನ್ನಾಗಿ ವಿಂಗಡಿಸಿ ಚತುರ್ದಿನ ಪಂದ್ಯ ನ್ನಾಡಿಸಲಾಗುವುದು. ಇದರಿಂದ ಇಂಗ್ಲೆಂಡ್ ವಾತಾವರಣಕ್ಕೆ ಹೊಂದಿಕೊಳ್ಳಬಹುದು ಎನ್ನುವುದು ಕೋಚ್ ರವಿಶಾಸ್ತ್ರಿಯವರ ಯೋಜನೆಯಾಗಿದೆ.
“ಅಭ್ಯಾಸ ಮಾಡಲು ಹೆಚ್ಚು ದಿನಗಳ ಕಾಲಾವಕಾಶ ಸಿಗದಿರುವುದಕ್ಕೆ ಚಿಂತಿಸ ಬೇಕಿಲ್ಲ. ಫೈನಲ್ ಗೆಲ್ಲಲು ತಂಡದ ಆಟಗಾರರು ಮಾನಸಿಕವಾಗಿ ಸದೃಢರಾಗಿರಬೇಕು’ ಎಂದು ನಾಯಕ ವಿರಾಟ್ ಕೊಹ್ಲಿ ಆಟಗಾರರಿಗೆ ಕಿವಿಮಾತು ಹೇಳಿದ್ದಾರೆ.
ಪಂತ್ ಸ್ಫೋಟಕ ಬ್ಯಾಟಿಂಗ್: ಯುವ ಆಟಗಾರ ರಿಷಭ್ ಪಂತ್ ನೆಟ್‌ನಲ್ಲಿ ದೊಡ್ಡ ಹೊಡೆತಗಳ ಅಭ್ಯಾಸ ನಡೆಸಿದ್ದು, ಆಸ್ಟ್ರೇಲಿಯದಲ್ಲಿ ನಡೆಸಿದ ಬ್ಯಾಟಿಂಗ್ ಪರಾಕ್ರಮವನ್ನು ಇಂಗ್ಲೆಂಡ್ ನಲ್ಲಿಯೂ ಮುಂದುವರಿಸುವ ಸೂಚನೆಯೊಂದನ್ನು ನೀಡಿದ್ದಾರೆ. ಪಂತ್ ಬ್ಯಾಟಿಂಗ್ ಅಭ್ಯಾಸದ ವೀಡಿಯೋವನ್ನು ಬಿಸಿಸಿಐ ಪೋಸ್ಟ್ ಮಾಡಿದ್ದು, ಮತ್ತೂಂದು ಸ್ಫೋಟಕ ಸರದಿಯನ್ನು ಎದುರು ನೋಡು ತ್ತಿರುವುದಾಗಿ ತಿಳಿಸಿದೆ