Advertisement

ಗೆಲುವಿನ ಹಾದಿಯಲ್ಲಿ ಟೀಮ್‌ ಇಂಡಿಯಾ; ದ್ವಿತೀಯ ದಿನವೂ ಬೌಲರ್‌ಗಳ ಮೇಲುಗೈ

10:27 PM Mar 13, 2022 | Team Udayavani |

ಬೆಂಗಳೂರು: ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯ ದಲ್ಲಿ ಭಾರತದ ಹಿಡಿತ ಬಿಗಿಗೊಂಡಿದೆ. ಬ್ಯಾಟಿಂಗಿಗೆ ಕಠಿನವಾದ ಟ್ರ್ಯಾಕ್‌ನಲ್ಲಿ ಲಂಕೆಗೆ 447 ರನ್ನುಗಳ ಬೃಹತ್‌ ಗುರಿ ನೀಡಿರುವ ಟೀಮ್‌ ಇಂಡಿಯಾ, ಸರಣಿಯನ್ನು ಕ್ಲೀನ್‌ ಸ್ವೀಪ್‌ ಆಗಿ ವಶಪಡಿಸಿಕೊಳ್ಳುವ ಹಾದಿಯಲ್ಲಿ ಭರದಿಂದ ಸಾಗುತ್ತಿದೆ.

Advertisement

ದ್ವಿತೀಯ ದಿನದಾಟದಲ್ಲೂ ಬೌಲಿಂಗ್‌ ದಾಳಿ ತೀವ್ರಗೊಂಡಿದ್ದು, ಒಟ್ಟು 14 ವಿಕೆಟ್‌ ಪತನಗೊಂಡಿದೆ. ಶ್ರೀಲಂಕಾ ಒಂದು ವಿಕೆಟಿಗೆ 28 ರನ್‌ ಮಾಡಿದ್ದು, ಸೋಲಿನತ್ತ ಮುಖ ಮಾಡಿದೆ.

ಭಾರತದ 252 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಜವಾಬಾಗಿ ಶ್ರೀಲಂಕಾ 109ಕ್ಕೆ ಕುಸಿಯಿತು. 143 ರನ್ನುಗಳ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಭಾರತ 9ಕ್ಕೆ 303 ರನ್‌ ಪೇರಿಸಿ ಡಿಕ್ಲೇರ್‌ ಮಾಡಿತು.

ವೇಗಿ ಜಸ್‌ಪ್ರೀತ್‌ ಬುಮ್ರಾ ಅವರ 5 ವಿಕೆಟ್‌ ಸಾಧನೆ, ರಿಷಭ್‌ ಪಂತ್‌ ಅವರ ದಾಖಲೆಯ ಅರ್ಧ ಶತಕ, ಶ್ರೇಯಸ್‌ ಅಯ್ಯರ್‌ ಅವರ ಸತತ 2ನೇ ಅರ್ಧ ಶತಕವೆಲ್ಲ ರವಿವಾರದ ಆಟದ ಸೊಬಗನ್ನು ಹೆಚ್ಚಿಸಿತು.

ಅಯ್ಯರ್‌ ಸತತ ಅರ್ಧ ಶತಕ
ಭಾರತದ ದ್ವಿತೀಯ ಸರದಿಯಲ್ಲಿ ಶ್ರೇಯಸ್‌ ಅಯ್ಯರ್‌ ಮತ್ತು ರಿಷಭ್‌ ಪಂತ್‌ ಅರ್ಧ ಶತಕ ಬಾರಿಸಿ ಮಿಂಚಿದರು. ಮೊದಲ ಇನ್ನಿಂಗ್ಸ್‌ನಲ್ಲಿ 92 ರನ್‌ ಬಾರಿಸಿದ್ದ ಅಯ್ಯರ್‌ ಇಲ್ಲಿ 67 ರನ್‌ (87 ಎಸೆತ, 9 ಬೌಂಡರಿ) ಹೊಡೆದು ಮತ್ತೆ ಟಾಪ್‌ ಸ್ಕೋರರ್‌ ಎನಿಸಿದರು. ರೋಹಿತ್‌ ಶರ್ಮ 4 ರನ್ನಿನಿಂದ ಅರ್ಧ ಶತಕ ತಪ್ಪಿಸಿಕೊಂಡರು. ಅಗರ್ವಾಲ್‌ 22, ಹನುಮ ವಿಹಾರಿ 35 ರನ್‌ ಹೊಡೆದರೆ, ಕೊಹ್ಲಿ ಕೇವಲ 13 ರನ್‌ ಮಾಡಿ ನಿರಾಸೆ ಮೂಡಿಸಿದರು.

Advertisement

ಪಂತ್‌ ಶರವೇಗದ ಫಿಫ್ಟಿ
ರಿಷಭ್‌ ಪಂತ್‌ ತಮ್ಮ ಬಿರುಸಿನ ಆಟದ ಮೂಲಕ ಧಾರಾಳ ರಂಜನೆ ಒದಗಿಸಿದರು. ಕೇವಲ 28 ಎಸೆತಗಳಿಂದ ಅವರ ಅರ್ಧ ಶತಕ ಪೂರ್ತಿಗೊಂಡಿತು. ಇದು ಭಾರತದ ಟೆಸ್ಟ್‌ ಚರಿತ್ರೆಯ ಅತೀ ವೇಗದ ಫಿಫ್ಟಿ. ಕಪಿಲ್‌ದೇವ್‌ 1982ರ ಕರಾಚಿ ಟೆಸ್ಟ್‌ನಲ್ಲಿ ಪಾಕಿಸ್ಥಾನ ವಿರುದ್ಧ 30 ಎಸೆತಗಳಲ್ಲಿ ಅರ್ಧ ಶತಕ ಹೊಡೆದದ್ದು ಭಾರತದ ದಾಖಲೆಯಾಗಿತ್ತು. 40 ವರ್ಷಗಳ ಬಳಿಕ ಈ ದಾಖಲೆ ಪತನಗೊಂಡಿತು.

ರಿಷಭ್‌ ಪಂತ್‌ ಅವರದು ಭಾರತದ ನೆಲದಲ್ಲಿ ದಾಖಲಾದ 2ನೇ ಅತೀ ವೇಗದ ಫಿಫ್ಟಿ. 2005ರ ಬೆಂಗಳೂರು ಟೆಸ್ಟ್‌ ನಲ್ಲೇ ಪಾಕಿಸ್ಥಾನದ ಶಾಹಿದ್‌ ಆಫ್ರಿದಿ 26 ಎಸೆತಗಳಿಂದ 50 ರನ್‌ ಹೊಡೆದದ್ದು ದಾಖಲೆಯಾಗಿ ಉಳಿದಿದೆ.

ರಿಷಭ್‌ ಪಂತ್‌ ಇನ್ನೂ ಒಂದು ಸಾಧನೆಯಿಂದ ಸುದ್ದಿಯಾದರು. ಮೊದಲ ಇನ್ನಿಂಗ್ಸ್‌ನಲ್ಲಿ 26 ಎಸೆತಗಳಿಂದ 39 ರನ್‌, ದ್ವಿತೀಯ ಇನ್ನಿಂಗ್ಸ್‌ನಲ್ಲಿ 31 ಎಸೆತಗಳಿಂದ 50 ರನ್‌ ಹೊಡೆದರು (7 ಫೋರ್‌, 2 ಸಿಕ್ಸರ್‌). ಇದರೊಂದಿಗೆ ಎರಡೂ ಇನ್ನಿಂಗ್ಸ್‌ಗಳಲ್ಲಿ 150 ಪ್ಲಸ್‌ ಸ್ಟ್ರೈಕ್‌ರೇಟ್‌ನೊಂದಿಗೆ 30 ಪ್ಲಸ್‌ ರನ್‌ ಹೊಡೆದ ಮೊದಲ ಆಟಗಾರನೆನಿಸಿದರು.

ಬುಮ್ರಾ 5 ವಿಕೆಟ್‌ ಬೇಟೆ
6ಕ್ಕೆ 86 ರನ್‌ ಮಾಡಿದಲ್ಲಿಂದ ಶ್ರೀಲಂಕಾ ಎರಡನೇ ದಿನದ ಆಟ ಮುಂದುವರಿಸಿತ್ತು. ಕೇವಲ ಅರ್ಧ ಗಂಟೆಯಲ್ಲಿ, 5.5 ಓವರ್‌ಗಳಲ್ಲಿ ಉಳಿದ 4 ವಿಕೆಟ್‌ ಉರುಳಿಸುವಲ್ಲಿ ಭಾರತ ಯಶಸ್ವಿಯಾಯಿತು.

ಜಸ್‌ಪ್ರೀತ್‌ ಬುಮ್ರಾ 24ಕ್ಕೆ 5 ವಿಕೆಟ್‌ ಉಡಾಯಿಸಿ ಮಿಂಚಿದರು. ಇದು ಬುಮ್ರಾ ಅವರ 8ನೇ “5 ಪ್ಲಸ್‌’ ವಿಕೆಟ್‌ ಸಾಧನೆ. ತವರಲ್ಲಿ ಮೊದಲನೆಯದು. ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ, ವೆಸ್ಟ್‌ ಇಂಡೀಸ್‌ನಲ್ಲಿ ತಲಾ 2 ಸಲ, ಆಸ್ಟ್ರೇಲಿಯದಲ್ಲಿ ಒಮ್ಮೆ ಈ ಸಾಧನೆಗೈದಿದ್ದರು.

ಬುಮ್ರಾ ಶ್ರೀಲಂಕಾ ವಿರುದ್ಧ ಅತ್ಯುತ್ತಮ ಬೌಲಿಂಗ್‌ ಪ್ರದರ್ಶಿಸಿದ ಭಾರತದ ಸೀಮರ್‌ ಎಂಬ ಹೆಗ್ಗಳಿಕೆಗೂ ಪಾತ್ರರಾದರು. 2015ರ ಕೊಲಂಬೊ ಟೆಸ್ಟ್‌ನಲ್ಲಿ ಇಶಾಂತ್‌ ಶರ್ಮ 54ಕ್ಕೆ 5 ವಿಕೆಟ್‌ ಉರುಳಿಸಿದ್ದು ದಾಖಲೆಯಾಗಿತ್ತು. ಉಳಿದಂತೆ ವೆಂಕಟೇಶ ಪ್ರಸಾದ್‌ ಮತ್ತು ಜಹೀರ್‌ ಖಾನ್‌ 72ಕ್ಕೆ 5 ವಿಕೆಟ್‌ ಕೆಡವಿದ್ದರು.

ಲಂಕೆಯ ಎರಡು ವಿಕೆಟ್‌ ಆರ್‌. ಅಶ್ವಿ‌ನ್‌ ಪಾಲಾಯಿತು. ಅವರಿಗೆ ಮೊದಲ ದಿನ ವಿಕೆಟ್‌ ಲಭಿಸಿರಲಿಲ್ಲ. ಶಮಿ 2, ಅಕ್ಷರ್‌ ಒಂದು ವಿಕೆಟ್‌ ಪಡೆದರು. ಜಡೇಜ “ವಿಕೆಟ್‌ ಲೆಸ್‌’ ಎನಿಸಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ-252 ಮತ್ತು 9ಕ್ಕೆ 303 ಡಿಕ್ಲೇರ್‌ (ಅಯ್ಯರ್‌ 67, ಪಂತ್‌ 50, ರೋಹಿತ್‌ 46, ವಿಹಾರಿ 35, ಅಗರ್ವಾಲ್‌ 22, ಜಡೇಜ 22, ಜಯವಿಕ್ರಮ 78ಕ್ಕೆ 4, ಎಂಬುಲೆªàನಿಯ 87ಕ್ಕೆ 3) .

ಶ್ರೀಲಂಕಾ-109 (ಮ್ಯಾಥ್ಯೂಸ್‌ 43, ಡಿಕ್ವೆಲ್ಲ 21, ಬುಮ್ರಾ 24ಕ್ಕೆ 5, ಶಮಿ 18ಕ್ಕೆ 2, ಅಶ್ವಿ‌ನ್‌ 30ಕ್ಕೆ 2, ಅಕ್ಷರ್‌ 21ಕ್ಕೆ 1) ಮತ್ತು ಒಂದು ವಿಕೆಟಿಗೆ 28.

ರೋಹಿತ್‌ ಸಿಕ್ಸರ್‌; ಆಸ್ಪತ್ರೆ ಸೇರಿದ ಪ್ರೇಕ್ಷಕ
ಶ್ರೀಲಂಕಾ ವಿರುದ್ಧದ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯದ ಮೊದಲ ದಿನ ಪ್ರೇಕ್ಷಕನೊಬ್ಬ ಮೂಗಿಗೆ ಏಟು ಅನುಭವಿಸಿ ಆಸ್ಪತ್ರೆಗೆ ದಾಖಲಾದ ಘಟನೆ ಸಂಭವಿಸಿದೆ. ಕಾರಣ, ರೋಹಿತ್‌ ಶರ್ಮ ಸಿಕ್ಸರ್‌ಗೆ ಬಡಿದಟ್ಟಿದ ಚೆಂಡು ಬಂದು ಅಪ್ಪಳಿಸಿದ್ದು!

ವಿಶ್ವ ಫೆರ್ನಾಂಡೊ ಅವರ 6ನೇ ಓವರ್‌ನ ಕೊನೆಯ ಎಸೆತವನ್ನು ರೋಹಿತ್‌ ಮಿಡ್‌ ವಿಕೆಟ್‌ನತ್ತ ಎತ್ತಿ ಬಾರಿಸಿದರು. ಚೆಂಡು “ಡಿ ಕಾರ್ಪೊರೇಟ್‌ ಬಾಕ್ಸ್‌’ನಲ್ಲಿ ಕುಳಿತಿದ್ದ 22 ವರ್ಷದ ಯುವಕನ ಮೂಗಿಗೆ ಹೋಗಿ ಬಡಿಯಿತು. ಕೂಡಲೇ ಆ ಪ್ರೇಕ್ಷಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಈ ಕುರಿತು ಮಾತನಾಡಿದ ಬೆಂಗಳೂರಿನ ಹೊಸ್ಮಟ್‌ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಅಜಿತ್‌ ಬೆನೆಡಿಕ್ಟ್ ರಯಾನ್‌, “ಎಕ್ಸರೇಯಲ್ಲಿ ಮೂಗಿನ ಮೂಳೆ ಮುರಿದಿರುವುದು ಕಂಡು ಬಂದಿದೆ. ಹಾಗೆಯೇ ಗಾಯವಾದ ಭಾಗಗಳಿಗೆ ಹೊಲಿಗೆ ಹಾಕಲಾಗಿದೆ’ ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next