Advertisement

INDvAUS; ಮೆಲ್ಬರ್ನ್‌ನಲ್ಲಿ ಬ್ಯಾಟಿಂಗ್‌ ಮರೆತ ಭಾರತ; ವರ್ಷದ ಕೊನೆಗೆ ಸೋಲಿನ ವಿದಾಯ

12:06 PM Dec 30, 2024 | Team Udayavani |

ಮೆಲ್ಬೋರ್ನ್:‌ ಅತ್ಯಂತ ಕುತೂಹಲ ಕೆರಳಿಸಿದ್ದ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡವು 184 ರನ್‌ ಅಂತರದ ಸೋಲು ಕಂಡಿದೆ. ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯವನ್ನು ಗೆದ್ದ ಆಸ್ಟ್ರೇಲಿಯಾ ಬಾರ್ಡರ್‌ ಗಾವಸ್ಕರ್‌ ಟ್ರೋಫಿ ಸರಣಿಯಲ್ಲಿ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

Advertisement

ಎರಡನೇ ಇನ್ನಿಂಗ್ಸ್‌ ನಲ್ಲಿ 234 ರನ್‌ ಗಳಿಗೆ ಆಸೀಸ್‌ ತಂಡವು ಆಲೌಟಾಯಿತು. ಭಾರತದ ಗೆಲುವಿಗೆ 340 ರನ್‌ ಗುರಿ ನೀಡಿತು. ಆದರೆ ಭಾರತ ತಂಡವು ಇನ್ನೂ 13 ಓವರ್‌ ಬಾಕಿ ಇರುವಂತೆ 155 ರನ್‌ ಗಳಿಗೆ ಆಲೌಟಾಗಿ ಸೋಲೊಪ್ಪಿಕೊಂಡಿತು.

ನಾಲ್ಕನೇ ದಿನ 9 ವಿಕೆಟ್‌ ಗೆ 228 ರನ್‌ ಮಾಡಿದ್ದ ಆಸೀಸ್‌ 234 ರನ್‌ ಮಾತ್ರ ಗಳಿಸಿತು. ಕೊನೆಯ ವಿಕೆಟ್‌ ಪಡೆದ ಜಸ್ಪ್ರೀತ್‌ ಬುಮ್ರಾ ಮತ್ತೊಂದು ಐದು ವಿಕೆಟ್‌ ಗೊಂಚಲು ಪಡೆದರು.

ಕೊನೆಯ ದಿನದ ಚೇಸ್‌ ಆರಂಭಿಸಿದ ಭಾರತಕ್ಕೆ ಯಶಸ್ವಿ ಜೈಸ್ವಾಲ್‌ ಮತ್ತೊಂದು ಉತ್ತಮ ಆರಂಭ ನೀಡಿದರು. 208 ಎಸೆತ ಎದುರಿಸಿದ ಜೈಸ್ವಾಲ್‌ 84 ರನ್‌ ಮಾಡಿದರು. ಆದರೆ ನಾಯಕ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಅವರದ್ದು ಅದೇ ಹಾಡು ಅದೇ ರಾಗ. ರಾಹುಲ್‌ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದರು.

Advertisement

ರಿಷಭ್‌ ಪಂತ್‌ 30 ರನ್‌ ಮಾಡಿದರು. ಉತ್ತಮವಾಗಿ ಕಾಣುತ್ತಿದ್ದ ಪಂತ್‌ 104 ಎಸೆತ ಎದುರಿಸಿ ಬಳಿಕ ದೊಡ್ಡ ಹೊಡೆತಕ್ಕೆ ಕೈಹಾಕಿ ಔಟಾದರು. ಉಳಿದೆಲ್ಲಾ ಆಟಗಾರರದ್ದು ಪೆವಿಲಿಯನ್‌ ಪರೇಡ್.‌ ವಿಪರ್ಯಾಸ ಎಂದರೆ ಪ್ರಮುಖ ಇನ್ನಿಂಗ್ಸ್‌ ನಲ್ಲಿ ಎರಡಂಕಿ ಮೊತ್ತ ದಾಖಲಿಸಿದ್ದು ಜೈಸ್ವಾಲ್‌ ಮತ್ತು ಪಂತ್‌ ಮಾತ್ರ.

ಆಸೀಸ್‌ ಪರ ನಾಯಕ ಪ್ಯಾಟ್‌ ಕಮಿನ್ಸ್‌ ಮತ್ತು ಸ್ಕಾಟ ಬೋಲ್ಯಾಂಡ್‌ ತಲಾ ಮೂರು ವಿಕೆಟ್‌ ಕಿತ್ತರು. ನಾಥನ್‌ ಲಿಯಾನ್‌ ಎರಡು ಮತ್ತು ಟ್ರಾವಿಸ್‌ ಹೆಡ್‌ ಒಂದು ವಿಕೆಟ್‌ ಪಡೆದರು.

ಈ ಜಯದೊಂದಿಗೆ ಆಸೀಸ್‌ ಸರಣಿಯಲ್ಲಿ 2-1 ಅಂತರದ ಮುನ್ನಡೆ ಸಾಧಿಸಿತು. ಈ ಸೋಲಿನೊಂದಿಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ತಲುಪುವ ಭಾರತದ ಹಾದಿ ಮತ್ತಷ್ಟು ಕಠಿಣವಾಗಿದೆ. ಮುಂದಿನ ಪಂದ್ಯವು ಸಿಡ್ನಿಯಲ್ಲಿ ಜನವರಿ 3ರಂದು ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next