Advertisement

 ಲಾರ್ಡ್ಸ್‌ ಗೆಲುವು ಯಾವತ್ತೂ ಸ್ಪೆಷಲ್‌!

10:22 PM Aug 17, 2021 | Team Udayavani |

ಲಂಡನ್‌: ಕ್ರಿಕೆಟ್‌ ಕಾಶಿ, ಕ್ರಿಕೆಟ್‌ ಮೆಕ್ಕಾ ಎಂಬ ವಿಶೇಷಣಗಳಿಂದ ಕರೆಯಲ್ಪಡುವ ಲಂಡನ್ನಿನ ಲಾರ್ಡ್ಸ್‌ ಮೈದಾನದಲ್ಲಿ ಆಡುವುದೇ ಒಂದು ಹೆಮ್ಮೆ, ಗೌರವ. ಗೆದ್ದರಂತೂ ಅದು ಸ್ಪೆಷಲ್‌!

Advertisement

1983ರಲ್ಲಿ ಕಪಿಲ್‌ದೇವ್‌ ಪಡೆ ಲಾರ್ಡ್ಸ್‌ ಬಾಲ್ಕನಿ ಯಲ್ಲಿ ನಿಂತು ಪ್ರುಡೆನ್ಶಿಯಲ್‌ ವಿಶ್ವಕಪ್‌ ಎತ್ತಿಹಿಡಿದು ಸಂಭ್ರಮಿಸಿದ್ದು, ನಾಟ್‌ವೆಸ್ಟ್‌ ಫೈನಲ್‌ ಗೆದ್ದ ಬಳಿಕ ನಾಯಕ ಸೌರವ್‌ ಗಂಗೂಲಿ ಅಂಗಿ ಕಳಚಿ ಜೋಶ್‌ ತೋರಿದ್ದೆಲ್ಲ ಲಾರ್ಡ್ಸ್‌ನ ಸವಿನೆನಪುಗಳಾಗಿಯೇ ಉಳಿದಿವೆ. ಈ ಸಾಲಿಗೆ ನೂತನ ಸೇರ್ಪಡೆಯೇ ಕೊಹ್ಲಿ ಪಡೆ  ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಸಾಧಿಸಿದ 151 ರನ್ನುಗಳ ಪ್ರಚಂಡ ಗೆಲುವು!

ಅಚ್ಚರಿ, ಅನಿರೀಕ್ಷಿತ, ಅಮೋಘ :

ಭಾರತದ ಪಾಲಿಗೆ ಈ ಗೆಲುವು ಅಚ್ಚರಿ, ಅನಿರೀಕ್ಷಿತ ಹಾಗೂ ಅಮೋಘ. 4ನೇ ದಿನದಾಟದ ಕೊನೆಯ ತನಕವಲ್ಲ, ಅಂತಿಮ ದಿನ ರಿಷಭ್‌ ಪಂತ್‌ ಮತ್ತು ಇಶಾಂತ್‌ ಶರ್ಮ ವಿಕೆಟ್‌ ಬೀಳುವ ತನಕ ಈ ಪಂದ್ಯ ಇಂಗ್ಲೆಂಡಿನ ಹಿಡಿತದಲ್ಲೇ ಇತ್ತು. ಭಾರತ ನಿಧಾನವಾಗಿ ಸೋಲಿಗೆ ಹತ್ತಿರವಾಗತೊಡಗಿತ್ತು. ಆದರೆ ಮುಂದಿನದ್ದೆಲ್ಲ ಕ್ರಿಕೆಟಿನ ರೋಮಾಂಚನ ಗರಿಗೆದರತೊಡಗಿದ ಸಮಯ.

ಬೌಲರ್‌ಗಳಾದ ಶಮಿ-ಬುಮ್ರಾ ಬ್ಯಾಟಿಂಗ್‌ನಲ್ಲಿ ಕಮಾಲ್‌ ಮಾಡಿದ್ದು, ಬಳಿಕ ಬೌಲಿಂಗ್‌ನಲ್ಲೂ ಮಿಂಚಿದ್ದು, ಸಿರಾಜ್‌ ಮತ್ತು ಇಶಾಂತ್‌ ಆಂಗ್ಲರ ಬ್ಯಾಟಿಂಗ್‌ ಸರದಿಯನ್ನು ಸೀಳಿದ ಘಟನಾವಳಿಯೆಲ್ಲ ಕನಸೋ ಎಂಬಂತೆ ಸರಿದು ಹೋದವು. ನಾಟಿಂಗ್‌ಹ್ಯಾಮ್‌ನಲ್ಲಿ  ಮಳೆಯಿಂದ ಕೈತಪ್ಪಿದ ಗೆಲುವು ಲಾರ್ಡ್ಸ್‌ನಲ್ಲಿ ಅಚ್ಚರಿಯ ರೀತಿಯಲ್ಲಿ ಟೀಮ್‌ ಇಂಡಿಯಾದ ಕೈ ಹಿಡಿದಿತ್ತು!

Advertisement

ಯಾವುದೇ ಲೆಕ್ಕಾಚಾರ ಹಾಕಿ ನೋಡಿದರೂ ಈ ಟೆಸ್ಟ್‌ನಲ್ಲಿ ಭಾರತ ಸೋಲಬೇಕಿತ್ತು ಅಥವಾ ಪಂದ್ಯ ಡ್ರಾ ಆಗಬೇಕಿತ್ತು. ಎರಡೇ ಆಪ್ಶನ್‌ ಇತ್ತೆಂಬುದನ್ನು ಹೇಳಲು ಪಂಡಿತರು ಬೇಕಿರಲಿಲ್ಲ. ಆದರೆ ಇಲ್ಲಿ ಎಲ್ಲರ ಲೆಕ್ಕಾಚಾರ ತಲೆಕೆಳಗಾಯಿತು!

ಭಾರತ ಈ ಪಂದ್ಯವನ್ನು ಉಳಸಿಕೊಳ್ಳಬೇಕಾದರೆ ಕನಿಷ್ಠ ಲಂಚ್‌ ತನಕ ಬ್ಯಾಟಿಂಗ್‌ ವಿಸ್ತರಿಸುವುದು ಅನಿವಾರ್ಯವಿತ್ತು. ಈ ಕೆಲಸವನ್ನು ಶಮಿ-ಬುಮ್ರಾ ಸೇರಿಕೊಂಡು ಯಶಸ್ವಿಗೊಳಿಸಿದರು. ಮುಂದಿನದು ನಾಟಕೀಯ ವಿದ್ಯಮಾನ. ಕನಿಷ್ಠ 60 ಓವರ್‌ಗಳನ್ನು ಕ್ರೀಸ್‌ನಲ್ಲಿ ನಿಂತು ಈ ಪಂದ್ಯವನ್ನು ಡ್ರಾ ಮಾಡಿಕೊಳ್ಳುವುದು ಆತಿಥೇಯರಿಗೆ ದೊಡ್ಡ ಸವಾಲೇನೂ ಆಗಿರಲಿಲ್ಲ. ಅದರಲ್ಲೂ ಕ್ಯಾಪ್ಟನ್‌ ರೂಟ್‌ ಪ್ರಚಂಡ ಫಾರ್ಮ್ನಲ್ಲಿದ್ದರು. ಆದರೆ ಭಾರತದ ವೇಗಿಗಳು ಅಕ್ಷರಶಃ ಮ್ಯಾಜಿಕ್‌ ಮಾಡಿದರು. ಇಂಗ್ಲೆಂಡ್‌ ವಿಕೆಟ್‌ಗಳು ಒಂದೊಂದಾಗಿ ಉದುರತೊಡಗಿದಾಗ ಪಂದ್ಯದ ಕೌತುಕ ಏಕದಿನ,

ಟಿ ಟ್ವೆಂಟಿಯನ್ನೂ ಮೀರಿಸಿತು! :

ಟೆಸ್ಟ್‌ ಕ್ರಿಕೆಟ್‌ ಬೋರ್‌, ಬರೀ ನೀರಸ, ಟೈಮ್‌ ವೇಸ್ಟ್‌… ಎಂಬುವುದನ್ನು ಈ ಪಂದ್ಯ ಸುಳ್ಳಾಗಿಸಿದೆ.

ಸಂಕ್ಷಿಪ್ತ ಸ್ಕೋರ್‌: ಭಾರತ-364 ಮತ್ತು 8 ವಿಕೆಟಿಗೆ 298 ಡಿಕ್ಲೇರ್‌. ಇಂಗ್ಲೆಂಡ್‌-391 ಮತ್ತು 120 (ರೂಟ್‌ 33, ಬಟ್ಲರ್‌ 25, ಅಲಿ 13, ಇತರ 29, ಸಿರಾಜ್‌ 32ಕ್ಕೆ 4, ಬುಮ್ರಾ 33ಕ್ಕೆ 3, ಇಶಾಂತ್‌ 13ಕ್ಕೆ 2, ಶಮಿ 13ಕ್ಕೆ 1). ಪಂದ್ಯಶ್ರೇಷ್ಠ: ಕೆ.ಎಲ್‌. ರಾಹುಲ್‌. 3ನೇ ಟೆಸ್ಟ್‌: ಲೀಡ್ಸ್‌ (ಆ. 25-29).

ರಾಹುಲ್‌ ಖಡಕ್‌ ಎಚ್ಚರಿಕೆ  :

ಪಂದ್ಯ ಗೆಲ್ಲುವ ಉದ್ದೇಶದಿಂದ ನಮ್ಮ ಒಬ್ಬ ಆಟಗಾರನನ್ನು ಕೆಣಕಿದರೆ ತಂಡದಲ್ಲಿರುವ ಎಲ್ಲರೂ ತಿರುಗಿ ಬೀಳುತ್ತಾರೆ ಎಂದು ಭಾರತ ತಂಡದ ಆರಂಭಿಕ ಆಟಗಾರ ಕೆ.ಎಲ್‌.ರಾಹುಲ್‌ ಇಂಗ್ಲೆಂಡ್‌ ಆಟಗಾರರಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಸೋಲಿನಿಂದ ಪಾಠ ಕಲಿತ್ತಿದ್ದೇವೆ’ :

ಭಾರತದ ವಿರುದ್ಧ ಲಾರ್ಡ್ಸ್‌ ಟೆಸ್ಟ್‌ ಪಂದ್ಯದ ಹೀನಾಯ ಸೋಲಿಗೆ ಬೇಸರ ವ್ಯಕ್ತಪಡಿಸಿದ ಇಂಗ್ಲೆಂಡ್‌ ನಾಯಕ ಜೋ ರೂಟ್‌, ಈ ಸೋಲಿನಿಂದ ಸಾಕಷ್ಟು ಪಾಠ ಕಲಿತ್ತಿದ್ದು, ಭಾರತೀಯ ಆಟಗಾರರನ್ನು ಕೆಣಕಿದ್ದು ನಮ್ಮ ತಪ್ಪು. ಮುಂದಿನ ಪಂದ್ಯದಲ್ಲಿ ಈ ರೀತಿಯ ವರ್ತನೆ ಖಂಡಿತ ಮರುಕಳಿಸದು ಎಂದು ರೂಟ್‌ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next