ಮೆಲ್ಬೋರ್ನ್: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಅವರು ವೃತ್ತಿಜೀವನದಲ್ಲಿ ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿಯು ಅವರಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಒಂದೆಡೆ ಬ್ಯಾಟಿಂಗ್ ನಲ್ಲಿ ಹೀನಾಯ ವೈಫಲ್ಯ ಅನುಭವಿಸಿದರೆ, ಮತ್ತೊಂದೆಡೆ ನಾಯಕತ್ವದ ವಿಚಾರದಲ್ಲಿಯೂ ಟೀಕೆಗಳನ್ನು ಎದುರಿಸುತ್ತಿದ್ದಾರೆ.
ವೈಯಕ್ತಿಕ ಕಾರಣಗಳಿಂದ ಮೊದಲ ಟೆಸ್ಟ್ ತಪ್ಪಿಸಿಕೊಂಡ ರೋಹಿತ್ ಶರ್ಮಾ ಎರಡನೇ ಪಂದ್ಯದಿಂದ ತಂಡವನ್ನು ಸೇರಿಕೊಂಡರು. ರೋಹಿತ್ ಅಡಿಲೇಡ್‌ನಲ್ಲಿ 3 ಮತ್ತು 6 ರನ್ ಗಳಿಸಿ ಬ್ರಿಸ್ಬೇನ್‌ನಲ್ಲಿ ನಡೆದ ಮುಂದಿನ ಪಂದ್ಯದಲ್ಲಿ 10 ರನ್ ಗಳಿಸಿ ನಿರಾಸೆ ಮೂಡಿಸಿದರು. ಮೆಲ್ಬೋರ್ನ್ ನಲ್ಲಿಐೂ ರೋಹಿತ್ ಅವರ ಕಳಪೆ ಫಾರ್ಮ್ ಮುಂದುವರೆದಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಅವರು 5 ಎಸೆತಗಳಲ್ಲಿ 3 ರನ್ ಗಳಿಸಿ ಔಟಾದರು. ಅದರಲ್ಲೂ ಅತ್ಯಂತ ಕಳಪೆಯಾಗಿ ಔಟಾದರು.
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರೋಹಿತ್ 4 ಇನ್ನಿಂಗ್ಸ್‌ಗಳಲ್ಲಿ ಕೇವಲ 22 ರನ್ ಗಳಿಸಿದ್ದಾರೆ. ರೋಹಿತ್ ಅವರ ಫಾರ್ಮ್ ಗೆ ಪ್ರತಿಕ್ರಿಯಿಸಿದ ಆಸ್ಟ್ರೇಲಿಯಾದ ಮಾಜಿ ಆಟಗಾರರಾದ ಮಾರ್ಕ್ ವಾ ಮತ್ತು ಕೆರ್ರಿ ಓಕೀಫ್ ಭಾರತ ತಂಡದ ನಾಯಕನ ಬಗ್ಗೆ ಆತಂಕ ವ್ಯಕ್ತಪಡಿಸಿದರು.
“ರೋಹಿತ್ ಶರ್ಮಾ ಕೊನೆಯ ಮೂರು ಇನ್ನಿಂಗ್ಸ್‌ಗಳಲ್ಲಿ ಏನನ್ನಾದರೂ ಮಾಡದಿದ್ದರೆ, ಅವರ ವೃತ್ತಿಜೀವನವು ಖಂಡಿತವಾಗಿಯೂ ಅಂತ್ಯಗೊಳ್ಳಲಿದೆ ಎಂದು ನಾನು ಭಾವಿಸುತ್ತೇನೆ” ಎಂದು ಫಾಕ್ಸ್ ಸ್ಪೋರ್ಟ್ಸ್ ನೇರ ಪ್ರಸಾರದಲ್ಲಿ ವಾ ಹೇಳಿದರು.
“ಅದು ರೋಹಿತ್ ಶರ್ಮಾರಿಂದ ನಿಜವಾಗಿಯೂ ದೊಡ್ಡ ತಪ್ಪಾಗಿದೆ. ಇದು ಏನೂ ಶಾಟ್ ಅಲ್ಲ. ಇದು ಅವರ ನೆಚ್ಚಿನ ಹೊಡೆತಗಳಲ್ಲಿ ಒಂದಾಗಿದೆ. ಅದೂ ಇನ್ನಿಂಗ್ಸ್ ನ ಆರಂಭದಲ್ಲಿಯೇ. ಅವರು ಬೌನ್ಸ್ ಮತ್ತು ವೇಗಕ್ಕೆ ಒಗ್ಗಿಕೊಂಡಿಲ್ಲ. ಇದು ಭಾರತೀಯ ನಾಯಕನಿಗೆ ಕಷ್ಟದ ಸ್ಥಿತಿಯಾಗಿದೆ” ಎಂದು ಕೆರ್ರಿ ಓ’ಕೀಫ್ ಹೇಳಿದರು.
ಮೆಲ್ಬೋರ್ನ್ ನಲ್ಲಿ ಅಗರ್ಕರ್
ವರದಿಯ ಪ್ರಕಾರ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಇದೀಗ ಮೆಲ್ಬೋರ್ನ್ ನಲ್ಲಿದ್ದು, ರೋಹಿತ್ ಭವಿಷ್ಯದ ಕುರಿತು ಮಾತುಕತೆ ನಡೆಸುವ ಸಾಧ್ಯತೆಯಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ತಲುಪಲು ಭಾರತ ವಿಫಲವಾದರೆ ರೋಹಿತ್ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಹೊಂದುತ್ತಾರೆ ಎಂದು ವರದಿಯಾಗಿದೆ. ಸರಣಿಯು 1-1 ರಲ್ಲಿ ಸಮಬಲಗೊಂಡಿರುವುದರಿಂದ, ಭಾರತ ಡಬ್ಲ್ಯೂಟಿಸಿ ಫೈನಲ್ ತಲುಪಲು ಮುಂದಿನ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಿದೆ.
ರೋಹಿತ್ ಅನುಪಸ್ಥಿತಿಯಲ್ಲಿ ರಾಹುಲ್ ಅವರು ಪರ್ತ್ ನಲ್ಲಿ ಇನ್ನಿಂಗ್ಸ್ ಆರಂಭಿಸಿದ್ದರು. ಅವರು ಉತ್ತಮ ಪ್ರದರ್ಶನ ನೀಡಿದ ಕಾರಣ ಮುಂದಿನ ಎರಡು ಪಂದ್ಯಕ್ಕೆ ರೋಹಿತ್ ಮಧ್ಯಮ ಕ್ರಮಾಂಕದಲ್ಲಿ ಆಡಿದ್ದರು. ಆದರೆ ರೋಹಿತ್ ಕಳಪೆ ಪ್ರದರ್ಶನದ ಕಾರಣದಿಂದ ಮೆಲ್ಬೋರ್ನ್ ನಲ್ಲಿ ಅವರು ಮತ್ತೆ ಆರಂಭಿಕರಾಗಿ ಆಡಿದ್ದರು. ಆದರೆ ಅಲ್ಲೂ ನಿರೀಕ್ಷಿತ ಫಲಿತಾಂಶ ಬಂದಿಲ್ಲ.