ಲಂಡನ್: ಭಾರತದ ಪುರುಷರ ಹಾಗೂ ವನಿತಾ ಕ್ರಿಕೆಟ್ ತಂಡ ಗಳೆರಡೂ ಸುದೀರ್ಘ ಪ್ರವಾಸಕ್ಕಾಗಿ ಗುರುವಾರ ಲಂಡನ್‌ಗೆ ಆಗಮಿಸಿದವು. ಬಳಿಕ ಇಲ್ಲಿಂದ ಸೌತಾಂಪ್ಟನ್‌ಗೆ ತೆರಳಿ ಕ್ವಾರಂಟೈನ್‌ಗೆ ಒಳಗಾದವು.
ಎರಡೂ ತಂಡಗಳು ವಿಶೇಷ ವಿಮಾನದಲ್ಲಿ ಬುಧವಾರ ರಾತ್ರಿ ಮುಂಬಯಿಯಿಂದ ಲಂಡನ್‌ಗೆ ಹೊರಟಿದ್ದವು. ಪುರುಷರ ಹಾಗೂ ವನಿತಾ ತಂಡಗಳೆರಡೂ ಏಕಕಾಲಕ್ಕೆ ಒಂದೇ ವಿಮಾನ ದಲ್ಲಿ ತೆರಳಿದ ಅಪರೂಪದ ವಿದ್ಯಮಾನ ಇದಾಗಿದೆ.
“ಟಚ್‌ಡೌನ್’ ಎಂಬುದಾಗಿ ಲಂಡನ್‌ಗೆ ಆಗಮಿಸಿದ ಬಳಿಕ ಕೆ.ಎಲ್. ರಾಹುಲ್ ಟ್ವೀಟ್ ಮಾಡಿದ್ದಾರೆ. ಪ್ರಯಾಣ ಸುಖಕರ ಹಾಗೂ ಸುರಕ್ಷಿತವಾಗಿತ್ತು ಎಂಬುದಾಗಿಯೂ ಅವರು ತಿಳಿಸಿದರು. ಆಟಗಾರರು, ಸಹಾಯಕ ಸಿಬಂದಿ ಜತೆಗೆ ಅವರ ಕುಟುಂಬದವರೂ ಇದ್ದರು. ವಿರಾಟ್ ಕೊಹ್ಲಿ ಜತೆಗೆ ಪತ್ನಿ ಅನುಷ್ಕಾ ಶರ್ಮ, ಮಗಳು ವಮಿಕಾ ಪಯಣಿಸಿದ್ದರು.
ಕೋವಿಡ್ ಟೆಸ್ಟ್ :
ಸೌತಾಂಪ್ಟನ್ ಕ್ವಾರಂಟೈನ್ ವೇಳೆ ಕ್ರಿಕೆಟಿಗರ ಕೋವಿಡ್ ಟೆಸ್ಟ್ ಕೂಡ ನಡೆಯಲಿದೆ. ಬಳಿಕ ಅಭ್ಯಾಸಕ್ಕೆ ಇಳಿದು ನ್ಯೂಜಿಲ್ಯಾಂಡ್ ಎದುರಿನ ಐಸಿಸಿ ಟೆಸ್ಟ್ ವಿಶ್ವಕಪ್ ಚಾಂಪಿಯನ್‌ಶಿಪ್ ಫೈನಲ್‌ಗೆ ಸಜ್ಜಾಗಲಿವೆ. ಮುಂಬಯಿಯಲ್ಲಿ 14 ದಿನಗಳ ಕ್ವಾರಂಟೈನ್ ವೇಳೆ ಯಾರಲ್ಲೂ ಪಾಸಿಟಿವ್ ಫಲಿತಾಂಶ ಕಂಡುಬಂದಿರಲಿಲ್ಲ.
ಭಾರತದಿಂದ ಹೊರಡುವ ಮುನ್ನ ಕ್ರಿಕೆಟಿಗರೆಲ್ಲ ಮೊದಲ ಡೋಸ್ ಕೋವಿಡ್ ಲಸಿಕೆ ಪಡೆದಿದ್ದರು. ಎರಡನೇ ಸುತ್ತಿನ ಲಸಿಕೆಯನ್ನು ಇಂಗ್ಲೆಂಡ್‌ನಲ್ಲೇ ನೀಡುವ ವ್ಯವಸ್ಥೆ ಮಾಡಲಾಗಿದೆ.