ಮುಂಬೈ: ಟೆಸ್ಟ್ ಸರಣಿಯ ಎರಡನೇ ಪಂದ್ಯವನ್ನು ಗೆಲ್ಲಲು ಭಾರತ ತಂಡ ನ್ಯೂಜಿಲ್ಯಾಂಡ್ ಗೆ ಬೃಹತ್ ಗುರಿ ನೀಡಿದೆ. ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ ತಂಡ 276 ರನ್ ಗೆ ಡಿಕ್ಲೇರ್ ಮಾಡಿಕೊಂಡಿದ್ದು, ಕಿವೀಸ್ ಪಂದ್ಯ ಗೆಲ್ಲಲು 540 ರನ್ ಮಾಡಬೇಕಾಗಿದೆ.
ಇಂದು ಎರಡನೇ ಇನ್ನಿಂಗ್ಸ್ ಆಟ ಮುಂದುವರಿಸಿದ ಮಯಾಂಕ್ ಅಗರ್ವಾಲ್ ಮತ್ತು ಪೂಜಾರ ಮೊದಲ ವಿಕೆಟ್ ಗೆ 107 ರನ್ ಪೇರಿಸಿದರು. ಮೊದಲ ಇನ್ನಿಂಗ್ಸ್ ನ ಶತಕವೀರ ಮಯಾಂಕ್ ಅಗರ್ವಾಲ್ ಎರಡನೇ ಇನ್ನಿಂಗ್ಸ್ ನಲ್ಲಿ 62 ರನ್ ಗಳಿಸಿದರು. ಪೂಜಾರ ಮತ್ತು ಗಿಲ್ ತಲಾ 47 ರನ್ ಗಳಿಸಿ ಅರ್ಧಶತಕ ವಂಚಿತರಾದರು.
ನಾಯಕ ವಿರಾಟ್ ಕೊಹ್ಲಿ ಉತ್ತಮ ಆರಂಭ ಪಡೆದಿದ್ದರೂ 36 ರನ್ ಗಳಿಸಿದ್ದ ವೇಳೆ ರಚಿನ್ ರವೀಂದ್ರಗೆ ವಿಕೆಟ್ ಒಪ್ಪಿಸಿದರು. ನಂತರ ಸತತ ವಿಕೆಟ್ ಕಳೆದುಕೊಂಡ ಭಾರತ ಏಳು ವಿಕೆಟ್ ನಷ್ಟಕ್ಕೆ 276 ರನ್ ಗಳಿಸಿದ್ದ ವೇಳೆ ಡಿಕ್ಲೇರ್ ಮಾಡಿಕೊಂಡಿತು.
ಇದನ್ನೂ ಓದಿ:ಮ್ಯಾರಥಾನ್: ಓಟದಲ್ಲಿ ಹೆಜ್ಜೆ ಹಾಕಿದ ಸಂಸದ ಅಣ್ಣ ಸಾಹೇಬ್ ಜೊಲ್ಲೆ
ಮೊದಲ ಇನ್ನಿಂಗ್ಸ್ ನಲ್ಲಿ ಹತ್ತು ವಿಕೆಟ್ ಪಡೆದು ವಿಶ್ವದಾಖಲೆ ನಿರ್ಮಿಸಿದ್ದ ಅಜಾಜ್ ಪಟೇಲ್ ಎರಡನೇ ಇನ್ನಿಂಗ್ಸ್ ನಲ್ಲಿ ಮತ್ತೆ ನಾಲ್ಕು ವಿಕೆಟ್ ಪಡೆದರು. ಉಳಿದ ಮೂರು ವಿಕೆಟ್ ಗಳು ರಚಿನ್ ರವೀಂದ್ರ ಪಾಲಾಯಿತು.
ಸಂಕ್ಷಿಪ್ತ ಸ್ಕೋರ್
ಭಾರತ: 325 ಮತ್ತು 276-7 ಡಿ
ನ್ಯೂಜಿಲ್ಯಾಂಡ್: 62