Advertisement

ವಿಂಡೀಸ್‌ ಸರಣಿಗೆ ಹಾರ್ದಿಕ್ ಪಾಂಡ್ಯಾ ಯಾಕಿಲ್ಲ ಗೊತ್ತಾ ?

09:11 AM Jul 22, 2019 | keerthan |

ಮುಂಬೈ: ವೆಸ್ಟ್‌ ಇಂಡೀಸ್‌ ಸರಣಿಗೆ ಟೀಂ ಇಂಡಿಯಾ ಪ್ರಕಟವಾಗಿದ್ದು, ಮೂರು ಮಾದರಿಯ ಕ್ರಿಕೆಟ್‌ ನಲ್ಲಿ ವಿರಾಟ್‌ ಕೊಹ್ಲಿಯೇ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

Advertisement

ಎಂ.ಎಸ್.ಕೆ ಪ್ರಸಾದ್‌ ನೇತೃತ್ವದಲ್ಲಿ ಮುಂಬೈಯಲ್ಲಿ ಸಭೆ ಸೇರಿದ್ದ ಆಯ್ಕೆ ಸಮಿತಿ ಅಧಿಕಾರಿಗಳು ಕೆಲವು ಹಳೆಯ ಮುಖಗಳೊಂದಿಗೆ ಕೆಲವು ಹೊಸಬರಿಗೆ ಮಣೆ ಹಾಕಿದೆ.

ಗುಮಾನಿಗಳಿಗೆ ತೆರೆ ಎಳೆದ ಬಿಸಿಸಿಐ
ವಿಶ್ವಕಪ್‌ ನ ಸೆಮಿ ಫೈನಲ್‌ ನಲ್ಲಿ ಸೋಲನುಭವಿಸಿದ ಬಳಿಕ ವಿರಾಟ್‌ ನಾಯಕತ್ವದ ಬಗ್ಗೆ ಹಲವರು ಟೀಕೆ ಮಾಡಿದ್ದರು. ನಿಗದಿತ ಓವರ್‌ ಕ್ರಿಕೆಟ್‌ ನಾಯಕತ್ವವನ್ನು ರೋಹಿತ್‌ ಶರ್ಮಾಗೆ ನೀಡಬೇಕು ಎಂಬ ಸಲಹೆಗಳು ಕೂಡ ಕೆಲವರು ನೀಡಿದ್ದರು. ವೆಸ್ಟ್‌ ಇಂಡೀಸ್‌ ಸರಣಿಯಲ್ಲಿ ಕೊಹ್ಲಿಗೆ ವಿಶ್ರಾಂತಿ ನೀಡಿ, ರೋಹಿತ್‌ ಗೆ ನಾಯಕತ್ವ ಪಟ್ಟ ಕಟ್ಟಲಾಗುತ್ತದೆ ಎಂಬ ವಾದಗಳು ಕೂಡಾ ಕೇಳಿ ಬಂದಿದ್ದವು. ಆದರೆ ಬಿಸಿಸಿಐ ಬಿಗ್‌ ಬಾಸ್‌ ಗಳು ವಿರಾಟ್‌ ಕೊಹ್ಲಿಯನ್ನೇ ನಾಯಕನಾಗಿ ಮುಂದುವರಿಸುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. 

ಯಾರಿಗೆಲ್ಲಾ ರೆಸ್ಟ್‌ ?
ವಿಶ್ವಕಪ್‌ ತಂಡದಲ್ಲಿದ್ದ ಜಸ್ಪ್ರೀತ್‌ ಬುಮ್ರಾ, ಹಾರ್ದಿಕ್‌ ಪಾಂಡ್ಯಾಗೆ ವಿಂಡೀಸ್‌ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಬುಮ್ರಾ ಟೆಸ್ಟ್‌ ಸರಣಿ ಆಡಲಿದ್ದಾರೆ. ಆದರೆ ವಿಶ್ವಕಪ್‌ ವೇಳೆ ತೊಡೆಸಂದು ನೋವಿಗೆ ಒಳಗಾಗಿದ್ದ ಹಾರ್ದಿಕ್‌ ಸಂಪೂರ್ಣ ಸರಣಿ ತಪ್ಪಿಸಿಕೊಂಡಿದ್ದಾರೆ.

ವಿಕೆಟ್‌ ಕೀಪರ್‌ ಬ್ಯಾಟ್ಸಮನ್‌ ಮಹೇಂದ್ರ ಸಿಂಗ್‌ ಧೋನಿ ಈಗಾಗಲೇ ಕೂಟಕ್ಕೆ ಅಲಭ್ಯರಾಗುವ ಮಾಹಿತಿ ನೀಡಿರುವ ಕಾರಣ ಅವರನ್ನು ಆಯ್ಕೆ ಮಂಡಳಿ ಪರಿಗಣಿಸಿಲ್ಲ. ಸ್ಪಿನ್ನರ್‌ ಯುಜುವೇಂದ್ರ ಚಾಹಲ್‌ ಅವರನ್ನು ಏಕದಿನ ಸರಣಿಗೆ ಮಾತ್ರ ಆಯ್ಕೆ ಮಾಡಿದ್ದು, ಉಳಿದೆರಡು ಮಾದರಿಯಲ್ಲಿ ವಿಶ್ರಾಂತಿ ನೀಡಲಾಗಿದೆ. ವಿಜಯ್‌ ಶಂಕರ್‌ ಕೂಡಾ ಗಾಯದಿಂದಾಗಿ ಸರಣಿ ತಪ್ಪಿಸಿ ಕೊಂಡಿದ್ದಾರೆ.

Advertisement

ಯಾರಿಗೆ ಕೊಕ್
ವಿಶ್ವಕಪ್‌ ಆಡಿದ್ದ ದಿನೇಶ್‌ ಕಾರ್ತಿಕ್‌ ಗೆ ಮೂರು ಮಾದರಿಯಿಂದ ಕೊಕ್‌ ನೀಡಲಾಗಿದೆ. ಕಾರ್ತಿಕ್‌ ನಿರೀಕ್ಷಿತ ಪ್ರಮಾಣದಲ್ಲಿ ಆಡದೇ ಇರುವುದು ಇದಕ್ಕೆ ಕಾರಣ ಎನ್ನಲಾಗಿದೆ.

ಯಾರು ಹೊಸ ಮುಖ
ಇಂದು ಪ್ರಕಟವಾದ ಒಟ್ಟು ತಂಡದಲ್ಲಿ ರಾಹುಲ್‌ ಚಾಹರ್‌ ಒಬ್ಬರೇ ಹೊಸಮುಖ. 19 ವರ್ಷದ ರಾಹುಲ್‌ ಚಾಹರ್‌ ರಾಜಸ್ಥಾನ ಮೂಲದವರು. ಭಾರತ ಅಂಡರ್‌ 19 ತಂಡದಲ್ಲಿ ಆಡಿದ್ದ ಈ ಲೆಗ್‌ ಸ್ಪಿನ್ನರ್ ಐಪಿಎಲ್‌ ನಲ್ಲಿ ಮುಂಬೈ ಇಂಡಿಯನ್ಸ್‌ ಪರ ಆಡುತ್ತಾರೆ. ಸದ್ಯ ಟಿ ಟ್ವೆಂಟಿ ಸರಣಿಗೆ ಆಯ್ಕೆಯಾಗಿರುವ ಚಾಹರ್‌, ಕುಲದೀಪ್‌ ಅನುಪಸ್ಥಿತಿಯಲ್ಲಿ ಅಡುವ ಬಳಗಕ್ಕೆ ಎಂಟ್ರಿಯಾಗುವ ಅವಕಾಶವಿದೆ.

ಕಳೆದ ವರ್ಷ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಗಾಯಗೊಂಡಿದ್ದ ವೃದ್ಧಿಮಾನ್‌ ಸಾಹಾ ಮತ್ತೆ ಟೆಸ್ಟ್‌ ಸರಣಿಗೆ ಆಯ್ಕೆಯಾಗಿದ್ದಾರೆ. ರಿಷಭ್‌ ಪಂತ್‌  ಮೂರೂ ಮಾದರಿಗೂ ಮೊದಲ ಆಯ್ಕೆಯ ವಿಕೆಟ್‌ ಕೀಪರ್‌ ಆದರೂ ಸಾಹಾರನ್ನು ಬಿಸಿಸಿಐ ಆಯ್ಕೆ ಮಾಡಿದೆ.

ವಿಶ್ವಕಪ್‌ ನಲ್ಲಿ ಆಸೀಸ್‌ ವಿರುದ್ದದ ಪಂದ್ಯದಲ್ಲಿ ಗಾಯಗೊಂಡಿದ್ದ ಶಿಖರ್‌ ಧವನ್‌ ಮತ್ತೆ ನಿಗದಿತ ಓವರ್‌ ಕ್ರಿಕೆಟ್‌ ನಲ್ಲಿ ತಂಡವನ್ನು ಸೇರಿದ್ದಾರೆ. ಇನ್ನು ಕನ್ನಡಿಗ ಕೆ.ಎಲ್‌ ರಾಹುಲ್‌ ಮೂರು ಮಾದರಿಗೂ ಆಯ್ಕೆಯಾಗಿದ್ದು, ಟೆಸ್ಟ್‌ ತಂಡದಲ್ಲಿ ಮಯಾಂಕ್‌ ಅಗರ್ವಾಲ್‌ ಕಾಣಿಸಿಕೊಂಡಿದ್ದಾರೆ. ಮತ್ತೊಬ್ಬ ಕನ್ನಡಿಗ ಮನೀಶ್‌ ಪಾಂಡೆ ಏಕದಿನ ಮತ್ತು ಟಿ ಟ್ವೆಂಟಿ ತಂಡ ಸೇರಿದ್ದಾರೆ.

ವಿಶ್ವಕಪ್‌ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಲ್‌ ರೌಂಡರ್‌ ರವೀಂದ್ರ ಜಡೇಜಾ ಎಲ್ಲಾ ಮಾದರಿಗೂ ಆಯ್ಕೆಯಾಗಿದ್ದರೆ. ಇವರೊಂದಿಗೆ ರವಿಚಂದ್ರನ್‌ ಅಶ್ವಿನ್‌ ಕೂಡಾ ಟೆಸ್ಟ್‌ ಸರಣಿಗೆ ಆಯ್ಕೆಯಾಗಿದ್ದಾರೆ. ಇನ್ನು ಟಿ ಟ್ವೆಂಟಿ ಸರಣಿಗೆ ಯುವ ತಂಡವನ್ನೇ ಆಯ್ಕೆ ಮಾಡಿದ ಬಿಸಿಸಿಐ, ಕೃನಾಲ್‌ ಪಾಂಡ್ಯಾ, ದೀಪಕ್‌ ಚಾಹರ್‌, ನವದೀಪ್‌ ಸೈನೀ, ಖಲೀಲ್‌ ಅಹಮದ್‌, ವಾಶಿಂಗ್ಟನ್‌ ಸುಂದರ್‌ ಗೆ ಮತ್ತೆ ಅವಕಾಶ ನೀಡಿದೆ.

ವಿಶ್ವಕಪ್‌ ನಂತರ ಭಾರತ ಆಡುತ್ತಿರುವ ಮೊದಲ ಸರಣಿ ಇದಾದ ಕಾರಣ ಮಹತ್ವ ಪಡೆದಿದೆ. ವಿಶ್ವಕಪ್‌ ನಲ್ಲಿ ಭಾರತ ಸೆಮಿಫೈನಲ್‌ ನಲ್ಲಿ ಭಾರತ ವಿರುದ್ಧ ಸೋಲನುಭವಿಸಿದ್ದರೆ, ವೆಸ್ಟ್‌ ಇಂಡೀಸ್‌ ಕಳಪೆ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನಿಯಾಗಿತ್ತು.

ಭಾರತ ತಂಡ ವೆಸ್ಟ್‌ ಇಂಡೀಸ್‌ ವಿರುದ್ದ ಮೂರು ಟಿ ಟ್ವೆಂಟಿ, ಮೂರು ಏಕದಿನ ಮತ್ತು ಎರಡು ಟೆಸ್ಟ್‌ ಪಂದ್ಯಗಳನ್ನು ಆಡಲಿದೆ. ಅದರಲ್ಲಿ ಮೊದಲೆರಡು ಟಿ ಟ್ವೆಂಟಿ ಪಂದ್ಯಗಳು ಅಮೇರಿಕಾದಲ್ಲಿ ನಡೆಯಲಿದೆ.

ಟೆಸ್ಟ್‌: ಕೊಹ್ಲಿ (ಕಪ್ತಾನ), ರಹಾನೆ (ಉಪ ಕಪ್ತಾನ), ಮಾಯಾಂಕ ಅಗರ್ವಾಲ್, ಕೆ. ಎಲ್. ರಾಹುಲ್, ಪೂಜಾರ, ಹನುಮ ವಿಹಾರಿ, ರೋಹಿತ್ , ಪಂತ್ (ವಿಕೆಟ್ ಕೀಪರ್) ಸಾಹಾ (ವಿಕೆಟ್ ಕೀಪರ್), ಅಶ್ವಿನ್, ಜಡೇಜಾ, ಕುಲದೀಪ್ , ಇಶಾಂತ್ , ಶಮಿ, ಬುಮ್ರಾ, ಉಮೇಶ್ ಯಾದವ್

ಏಕದಿನ: ಕೊಹ್ಲಿ (ಕಪ್ತಾನ), ರೋಹಿತ್ (ಉಪ ಕಪ್ತಾನ) ಶಿಖರ್ ಧವನ್, ಕೆ.ಎಲ್. ರಾಹುಲ್ , ಶ್ರೇಯಸ್ ಐಯರ್, ಮನೀಶ್ ಪಾಂಡೆ, ಪಂತ್ (ವಿಕೆಟ್ ಕೀಪರ್), ಜಡೇಜಾ, ಯಾದವ್, ಚಾಹಾಲ್, ಜಾಧವ್, ಶಮಿ, ಭುವನೇಶ್ವರ್ , ಖಲೀಲ್ , ನವದೀಪ್ ಸೈನಿ

ಟಿ 20 : ಕೊಹ್ಲಿ (ಕಪ್ತಾನ), ರೋಹಿತ್ (ಉಪ ಕಪ್ತಾನ) ಧವನ್, ಕೆ.ಎಲ್. ರಾಹುಲ್ , ಶ್ರೇಯಸ್ ಐಯರ್, ಮನೀಶ್ ಪಾಂಡೆ, ಪಂತ್ (ವಿಕೆಟ್ ಕೀಪರ್), ಕೃಣಾಲ್ ಪಾಂಡ್ಯ, ಜಡೇಜಾ, ವಾಷಿಂಗ್ಟನ್ ಸಂದರ್, ರಾಹುಲ್ ಚಾಹರ್, ಭುವನೇಶ್ವರ್ , ಖಲೀಲ್ , ದೀಪಕ್ ಚಾಹರ್, ನವದೀಪ್ ಸೈನಿ

Advertisement

Udayavani is now on Telegram. Click here to join our channel and stay updated with the latest news.

Next