ಮುಂಬೈ: ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳಿಗಾಗಿ ಭಾರತ ತಂಡವು ಇಂದು ಶ್ರೀಲಂಕಾಗೆ ತೆರಳುತ್ತಿದೆ. ಇದಕ್ಕೂ ಮೊದಲು ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರು ಪತ್ರಿಕಾಗೋಷ್ಠಿ ನಡೆಸಿ, ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.
ಇದೇ ವೇಳೆ ಗಂಭೀರ್ ಅವರು ಟೀಂ ಇಂಡಿಯಾ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಕ್ರಿಕೆಟ್ ಭವಿಷ್ಯದ ಬಗ್ಗೆ ಮಾತನಾಡಿದರು.
ಮುಖ್ಯ ಕೋಚ್ ಗೌತಮ್ ಗಂಭೀರ್ ಸೋಮವಾರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ರಾಷ್ಟ್ರೀಯ ತಂಡಕ್ಕಾಗಿ ಉತ್ತಮ ಕೆಲಸಗಳನ್ನು ಮಾಡುವುದನ್ನು ಮುಂದುವರಿಸಲು ಬೆಂಬಲಿಸಿದರು, ಇಬ್ಬರೂ ಮುಂದೆ ಏಕದಿನ ಮತ್ತು ಟೆಸ್ಟ್‌ಗಳಲ್ಲಿ ಪ್ರಮುಖ ಭಾಗವಾಗಲಿದ್ದಾರೆ ಎಂದು ಹೇಳಿದರು. ರೋಹಿತ್ ಮತ್ತು ಕೊಹ್ಲಿ ಚಾಂಪಿಯನ್ಸ್ ಟ್ರೋಫಿ ಮತ್ತು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿಗಾಗಿ ಆಡಲಿದ್ದು, 2025 ರ ಋತುವಿನ ನಂತರವೂ ಅವರು ಮುಂದುವರಿಯಲು ಬಾಗಿಲು ತೆರೆದೇ ಇದೆ ಎಂದು ಗಂಭೀರ್ ಹೇಳಿದರು.
“ಏಕದಿನ ವಿಶ್ವಕಪ್ ಇರಲಿ ಅಥವಾ ಟಿ20 ವಿಶ್ವಕಪ್ ಆಗಿರಲಿ, ದೊಡ್ಡ ವೇದಿಕೆಯಲ್ಲಿ ಏನು ಮಾಡಬೇಕು ಎಂದು ಇಬ್ಬರೂ ತೋರಿಸಿಕೊಟ್ಟಿದ್ದಾರೆ. ಇಬ್ಬರಲ್ಲೂ ಸಾಕಷ್ಟು ಕ್ರಿಕೆಟ್ ಉಳಿದಿದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ. ಆಸ್ಟ್ರೇಲಿಯಾ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿ ನಡೆಯುತ್ತಿದೆ. ಅವರು ತಮ್ಮ ಫಿಟ್ನೆಸ್ ಉಳಿಸಿಕೊಂಡರೆ 2027ರ ಏಕದಿನ ವಿಶ್ವಕಪ್ ಕೂಡಾ ಆಡಬಹುದು ಎಂಬ ವಿಶ್ವಾಸವಿದೆ” ಎಂದು ಗಂಭೀರ್ ಹೇಳಿದರು.
“ಅವರು ಎಷ್ಟು ಸಮಯ ಆಡಬಲ್ಲರು ಎನ್ನುವುದು ತೀರಾ ವೈಯಕ್ತಿಕ ವಿಚಾರ. ಅವರಲ್ಲಿ ಎಷ್ಟು ಕ್ರಿಕೆಟ್ ಉಳಿದಿದೆ ಎಂದು ನಾನು ಹೇಳುವುದು ಅಸಾಧ್ಯ. ತಂಡದ ಯಶಸ್ಸಿಗಾಗಿ ಅವರು ಎಷ್ಟು ಕೊಡುಗೆ ನೀಡಬಹುದು ಎಂದು ಆಟಗಾರರೇ ನಿರ್ಧರಿಸಬೇಕು. ಮುಖ್ಯವಾಗಿ ತಂಡವಷ್ಟೇ ಮುಖ್ಯ. ವಿರಾಟ್ ಮತ್ತು ರೋಹಿತ್ ರಲ್ಲಿ ತುಂಬಾ ಕ್ರಿಕೆಟ್ ಉಳಿದಿದೆ. ಅವರು ಇನ್ನೂ ವಿಶ್ವದರ್ಜೆ ಕ್ರಿಕೆಟಿಗರು. ಅವರನ್ನು ಆದಷ್ಟು ಉಳಿಸಿಕೊಳ್ಳಲು ಯಾವುದೇ ತಂಡವು ಬಯಸುತ್ತದೆ” ಎಂದು ಗಂಭೀರ್ ಹೇಳಿದರು.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಕಳೆದ ಟಿ20 ವಿಶ್ವಕಪ್ ಗೆಲುವಿನ ಬಳಿಕ ಟಿ20 ಮಾದರಿಗೆ ವಿದಾಯ ಹೇಳಿದ್ದಾರೆ. ಏಕದಿನ ಮತ್ತು ಟೆಸ್ಟ್ ಮಾದರಿಯಲ್ಲಿ ಮುಂದುವರಿಯಲಿದ್ದಾರೆ.