ಧಾರವಾಡ: ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎನ್ನುವ ಮಾತು ಈ ವರ್ಷ ಉತ್ತರ ಕರ್ನಾಟಕದ ಸರ್ಕಾರಿ ಶಾಲೆಗಳಿಗೆ ಅಕ್ಷರಶಃ ಅನ್ವಯವಾಗುತ್ತಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳ ವ್ಯಾಮೋಹದಿಂದಮುಕ್ತರಾದಂತಿರುವ ಪೋಷಕರು ಸದ್ದಿಲ್ಲದೇ ಕನ್ನಡ ಶಾಲೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.
ಈ ವಿಚಾರವನ್ನು ನಂಬುವುದು ಸ್ವಲ್ಪ ಕಷ್ಟವೇ ಆದರೂ ಸತ್ಯ. ಕೋವಿಡ್ ಮಹಾಮಾರಿ ಹೊಡೆತಕ್ಕೆ ನಲುಗಿ ಹೋಗಿರುವ ಜನತೆ ಅದರಲ್ಲೂ ಬಡವರು ಮತ್ತು ಮಧ್ಯಮವರ್ಗದವರು ಈ ವರ್ಷ ತಮ್ಮ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಕಲಿತರೆ ಸಾಕು ಎನ್ನುತ್ತಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ್ದು, ನಗರವಾಸಿ ಬಡವರದ್ದು ಹೆಚ್ಚು ಕಡಿಮೆ ಇದೆ ಲೆಕ್ಕಾಚಾರವಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಆರಂಭಗೊಂಡಿದ್ದು, ಶಾಲಾ ಪ್ರವೇಶಾತಿಗೆ ಮಕ್ಕಳ ಪೋಷಕರು ತೀವ್ರ ಆಸಕ್ತಿ ವಹಿಸುತ್ತಿದ್ದಾರೆ.
ಉತ್ತರ ಕರ್ನಾಟಕದ ಬೆಳಗಾವಿ ವಿಭಾಗೀಯ ವ್ಯಾಪ್ತಿಯಲ್ಲಿ ಬರುವ ಒಂಭತ್ತು ಶೈಕ್ಷಣಿಕ ಜಿಲ್ಲೆಗಳಲ್ಲಿ ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಶೇ.20 ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ಹೆಚ್ಚುವ ಸಾಧ್ಯತೆಯನ್ನು ಶಿಕ್ಷಣ ಇಲಾಖೆ ಅಂದಾಜು ಮಾಡಿದೆ. ಅದೇ ರೀತಿ ಧಾರವಾಡ, ಹುಬ್ಬಳ್ಳಿ ಮತ್ತು ಬೆಳಗಾವಿ ಈ ಮೂರು ಮಹಾನಗರಗಳಲ್ಲಿನ ಖಾಸಗಿ ಶಾಲೆಗಳಿಗೆ ಭಾರೀ ಹೊಡೆತ ಬೀಳುವ ಸಾಧ್ಯತೆಯೂ ಇದೆ.
ಕೋವಿಡ್ ಗೆ ಥ್ಯಾಂಕ್ಸ್! : ಖಾಸಗಿ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ತಮ್ಮ ಮಕ್ಕಳನ್ನು ಓದಿಸುವ ಪೋಷಕರಿಗೂ ಕೋವಿಡ್ ಮಹಾಮಾರಿ ಆರ್ಥಿಕ ಆಘಾತ ನೀಡಿದೆ. ಉಚಿತ ಪುಸ್ತಕ, ಊಟ, ಬಟ್ಟೆ ಎಲ್ಲವನ್ನು ಕೊಟ್ಟು ಉತ್ತಮ ಶಿಕ್ಷಣ ನೀಡಿದರೂ ಖಾಸಗಿ ಶಾಲೆಗಳಲ್ಲಿನ ಸುಣ್ಣ-ಬಣ್ಣ ನೋಡಿ ಪಾಲಕರು ಮರಳಾಗುತ್ತಿದ್ದಾರೆ ಎನ್ನುವ ಚರ್ಚೆ ಪ್ರತಿವರ್ಷದಂತೆ ಈಗಲೂ ನಡೆಯುತ್ತಿದೆ. ಆದರೆ ಖಾಸಗಿ ಮೋಹದಿಂದ ಜನ ಹೊರಗೆ ಬಂದಿದ್ದಾರೆ ಎಂದು ತಿಳಿಯಲು ಶಾಲಾ ಪ್ರವೇಶಾತಿಗಳು ಸಂಪೂರ್ಣ ಮುಗಿಯಬೇಕಿದೆ. ಒಟ್ಟಿನಲ್ಲಿ ಸರ್ಕಾರಿ ಶಿಕ್ಷಣ ವ್ಯವಸ್ಥೆ ಬಗ್ಗೆ ಜನರು ಒಲವು ತೋರಿದ್ದಕ್ಕೆ ಕನ್ನಡ ಪ್ರೇಮಿಗಳು ಕೊರೊನಾಗೆ ಅಭಿನಂದನೆ ಹೇಳಿದ್ದಾರೆ.
ಇನ್ನೂ ಹೆಚ್ಚಲಿದೆ ಸಂಖ್ಯೆ : ಕಳೆದ ವರ್ಷಕ್ಕೆ ಹೋಲಿಸಿದರೆ ಈಗಾಗಲೇ ಶೇ.20 ವಿದ್ಯಾರ್ಥಿಗಳು ಖಾಸಗಿ ಬಿಟ್ಟು ಸರ್ಕಾರಿ ಶಾಲೆಗಳತ್ತ ಮುಖ ಮಾಡಲು ಒಲವು ತೋರಿಸಿದ್ದಾರೆ. ಸದ್ದಿಲ್ಲದೇ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳನ್ನ ತನ್ನತ್ತ ಸೆಳೆಯುತ್ತಿದ್ದು, ಹಳ್ಳಿಮೇಷ್ಟ್ರ ಮನೆ ಮನೆ ಭೇಟಿ ಸರ್ಕಾರಕ್ಕೆ ಫಲ ಕೊಟ್ಟಿದೆ. ಬೆಳಗಾವಿ ವಿಭಾಗೀಯ 9 ಶೈಕ್ಷಣಿಕ ಜಿಲ್ಲೆಗಳಲ್ಲಿ 2019ರಲ್ಲಿ 27.22 ಲಕ್ಷ ವಿದ್ಯಾರ್ಥಿಗಳು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದುಕೊಂಡಿದ್ದಾರೆ. 2020ಕ್ಕೆ ಈ ಸಂಖ್ಯೆ 29 ಲಕ್ಷಕ್ಕೆ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ. ಇಲ್ಲಿ ಒಟ್ಟು 18,520 ಶಾಲೆಗಳಿದ್ದು, (15,650 ಸಾವಿರ ಪ್ರಾಥಮಿಕ ಶಾಲೆಗಳು. ಈ ಪೈಕಿ 11,230 ಸಾವಿರ ಸರ್ಕಾರಿ, 800 ಅನುದಾನಿತ ಮತ್ತು 3200 ಅನುದಾನ ರಹಿತ) 500 ಪ್ರೌಢಶಾಲೆಗಳಿವೆ.
ವಿದ್ಯಾಗಮದ ಮೂಲಕ ಮಕ್ಕಳನ್ನು ಸೆಳೆದಿರುವುದಕ್ಕೆ ಈ ವರ್ಷ ನಮ್ಮ ಸರ್ಕಾರಿ ಶಾಲೆಗೆ ಹೆಚ್ಚು ಮಕ್ಕಳು ಬಂದಿದ್ದಾರೆ. ವರ್ಷದಿಂದ ವರ್ಷಕ್ಕೆ ಇಳಿಮುಖವಾಗಿದ್ದ ಹಾಜರಾತಿ ಈ ವರ್ಷ ಹೆಚ್ಚಾಗಿರುವುದು ಹರ್ಷ ತಂದಿದೆ.
– ಸುರೇಶ ಗೋವಿಂದರೆಡ್ಡಿ, ಪ್ರಧಾನ ಗುರು, ಸಹಿಪ್ರಾ ಶಾಲೆ, ಧಾರವಾಡ ಜಿಲ್ಲೆ
ಕೋವಿಡ್ ಕಾರಣದಿಂದ 2020ರಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ಬರುವುದು ಖಚಿತ. ಇದಕ್ಕೆ ಅಗತ್ಯವಾದ ಸಿದ್ಧತೆಯನ್ನು ಇಲಾಖೆ ಮಾಡಿಕೊಂಡಿದ್ದು, ಎಲ್ಲ ಮಕ್ಕಳಿಗೂ ಉಚಿತ, ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗುವುದು.
– ಮೇ| ಸಿದ್ಧಲಿಂಗಯ್ಯ ಹಿರೇಮಠ, ಅಪರ ಆಯುಕ್ತ, ಬೆಳಗಾವಿ ಶೈಕ್ಷಣಿಕ ವಿಭಾಗ
– ಡಾ| ಬಸವರಾಜ ಹೊಂಗಲ್