ಹಳೇಬೀಡು: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷಾ ದೃಷ್ಟಿಯಿಂದ ವಿಜ್ಞಾನ ವಿಷಯದ ಚಿತ್ರಗಳನ್ನು ರಂಗೋಲಿಯಲ್ಲಿ ಬಿಡಿಸುವ ಮೂಲಕ ವಿನೂತನವಾಗಿ ಅಭ್ಯಾಸ ಮಾಡಿಸಲಾಗಿದೆ ಎಂದು ಪ್ರಾಂಶುಪಾಲ ಮೋಹನ್ ಕುಮಾರ್ ತಿಳಿಸಿದ್ದಾರೆ.
ಪಟ್ಟಣದ ಕಲ್ಪತರು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಕೌಶಲ್ಯವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪರೀಕ್ಷಾ ಸಮಯ ಹತ್ತಿರವಾಗುತ್ತಿದ್ದು, ವಿಶೇಷವಾಗಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯದಲ್ಲಿ ಮಾನವ ದೇಹದ ವಿವಿಧ ಅಂಗಾಂಗಗಳಾದ ಹೃದಯ, ಶ್ವಾಸಕೋಶ, ಜಠರ, ಮೂತ್ರಪಿಂಡ, ಮೆದಳು ಸೇರಿದಂತೆ ವಿವಿಧ ಭಾಗಗಳ ಚಿತ್ರ ಬಿಡಿಸಲು ಅಂಗಗಳನ್ನು ನಿಗದಿ ಪಡಿಸಲಾಗಿರುತ್ತದೆ.
ರಂಗೋಲಿ ಮುಖಾಂತರ ಚಿತ್ರಗಳನ್ನು ಬಿಡಿಸುವ ಪ್ರಯತ್ನ ಮಾಡಿದರೆ ಮಕ್ಕಳಲ್ಲಿ ಆಸಕ್ತಿ ಬೆಳೆಯುತ್ತದೆ. ಜೊತೆಗೆ ಕ್ರೀಯಾಶೀಲತೆ ಹಾಗೂ ಸೃಜನಶೀಲತೆ ಬೆಳೆಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಹೊಸ ಪ್ರಯತ್ನ ಮಾಡಿ ವಿದ್ಯಾರ್ಥಿಗಳು ಎಲ್ಲಾ ಅಂಗಾಂಗಗಳನ್ನು ರಂಗೋಲಿ ಮುಖಾಂತರ ಬಿಡಿಸುವುದರಿಂದ ವಿಷಯದಲ್ಲಿ ಪರಿಪೂರ್ಣತೆ ಪಡೆದುಕೊಳ್ಳುತ್ತಾರೆ ಎಂದರು.
ವಿಜ್ಞಾನ ವಿಷಯದ ಶಿಕ್ಷಕಿ ಪ್ರಕೃತಿ ಮಾತನಾಡಿ, ಪಠ್ಯ ಪುಸ್ತಕದ ವಿಷಯಗಳನ್ನು ಕೇವಲ ನಾಲ್ಕು ಗೋಡೆಗಳ ಮಧ್ಯೆ ಬೋಧಿಸಿ ಕಲಿಸುವದರಿಂದ ಪ್ರಯೋಜನ ಕಡಿಮೆ ಬದಲಾಗಿ, ಪಠ್ಯ ವಿಷಯಗಳನ್ನು ಪ್ರಯೋಗಿಕವಾಗಿ ಅರ್ಥ ಮಾಡಿಸಿದರೆ ವಿದ್ಯಾರ್ಥಿಗಳಿಗೆ ಹೆಚ್ಚು ನೆನಪಿನಲ್ಲಿ ಉಳಿಯುತ್ತದೆ.
ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಬಹುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶಬನಾ, ಕಮಲೇಶ್, ಮಧುಕುಮಾರ್, ಭರತ್, ಶಿವಕುಮಾರ್ ದೇವರಾಜ್, ಮುಂತಾದವರು ಹಾಜರಿದ್ದರು.