ಬಾಗಲಕೋಟೆ: ಸುಲಿದ ಬಾಳೆ ಹಣ್ಣಿನಂತೆ ಇರುವ ನಮ್ಮ ಕನ್ನಡ ಭಾಷೆಯನ್ನು ತೆಲುಗು, ತಮಿಳು, ಮರಾಠಿ ಸೇರಿದಂತೆ ವಿವಿಧ ಭಾಷಿಕರಿಗೆ ಕನ್ನಡ ಕಲಿಸುವ ಕಾರ್ಯವಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು.
ನವನಗರದ ಕಲಾಭವನದ ಆವರಣದಲ್ಲಿ ರವಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿ ಸಹಯೋಗದಲ್ಲಿ ಮಾತಾಡ್ ಮಾತಾಡ್ ಕನ್ನಡ ಅಭಿಯಾನಡಿಯಲ್ಲಿ ಕನ್ನಡಕ್ಕಾಗಿ ನಾವು ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉದ್ಯೋಗಕ್ಕಾಗಿ ನಮ್ಮ ಕನ್ನಡ ಭಾಷಿಕರು ಅನ್ಯ ರಾಜ್ಯ ಹಾಗೂ ದೇಶಗಳಿಗೆ ಹೋದಾಗ ಅಲ್ಲಿಯ ಭಾಷೆಯನ್ನು ಬಹುಬೇಗ ಕಲಿಯುತ್ತಾರೆ. ಆದರೆ ನಮ್ಮ ಕನ್ನಡ ಭಾಷೆ ಪಸರಿಸಿ ಬೆಳೆಸಬೇಕೆಂಬ ಕಾರ್ಯ ಮಾಡುತ್ತಿಲ್ಲ ಎಂದರು.
ನೆರೆ ರಾಜ್ಯಗಳಾದ ತಮಿಳು, ಆಂಧ್ರ ಹಾಗೂ ಮಹಾರಾಷ್ಟ್ರ ತಮ್ಮ ಮಾತೃ ಭಾಷೆ ಹಿಡಿತದಲ್ಲಿ ಇಟ್ಟುಕೊಂಡು ಅಲ್ಪ ಸ್ವಲ್ಪ ಕನ್ನಡ ಬರುತ್ತಿದ್ದರು ನಮ್ಮ ರಾಜ್ಯಕ್ಕೆ ಬಂದಾಗ ತಮ್ಮ ಭಾಷೆಯನ್ನೆ ಬಳಸುತ್ತಾರೆ. ಇದನ್ನು ಕನ್ನಡಿಗರಾದ ನಾವು ಗಮನಿಸಿ ಈಂತಹ ಅಭಿಯಾನಗಳನ್ನು ಹಮ್ಮಿಕೊಳ್ಳುವ ಮೂಲಕ ಕನ್ನಡಿಗರಲ್ಲಿ ಕನ್ನಡ ಬೆಳೆಸುವ ಕಾರ್ಯ ಮಾಡಬೇಕು. ಇಂದು ದೃಶ್ಯ ಮಾಧ್ಯಮದ ಮೂಲಕ ಪ್ರಾರಂಭಗೊಂಡ ಈ ಅಭಿಯಾನ ಇನ್ನೂ ಹಲವು ಕಾರ್ಯಕ್ರಮಗಳೊಂದಿಗೆ ಕನ್ನಡಿಗರಲ್ಲಿ ಜಾಗೃತ ಮೂಡಿಸಲಿ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಹೇಮಲತಾ ಎನ್. ಮಾತನಾಡಿದರು. ಮಹೇಶ ಬಂಡಿ, ಲಲಿತಾ ಕಲಾ ಅಕಾಡೆಮಿ ಸದಸ್ಯ ವಿರೇಶ ರುದ್ರಸ್ವಾಮಿ ಉಪಸ್ಥಿತರಿದ್ದರು.