ಕಲಬುರಗಿ: ಆರರಿಂದ 8ನೇ ತರಗತಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಗೊಂದಲಕಾರಿ ಆದೇಶ ಹಿಂದೆ ಪಡೆಯುವಂತೆ ಒತ್ತಾಯಿಸಿ ಯುತ್ ಟೀಂ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಭಾವಿ ಶಿಕ್ಷಕರು ಪ್ರತಿಭಟನೆ ನಡೆಸಿದರು.
ನಂತರ ಶಾಸಕ ಅಮರನಾಥ ಪಾಟೀಲ, ಎನ್. ಎಸ್. ಹಿರೇಮಠ ಜಂಟಿಯಾಗಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿ ಆ.24 ರಂದು ಸರ್ಕಾರ ಪ್ರಾಥಮಿಕ ಶಾಲೆಗೆ 10 ಸಾವಿರ ಶಿಕ್ಷಕರ ನೇಮಕಾತಿಗೆ ಅರ್ಜಿ ಕರೆದಿದೆ. ಈ ನೇಮಕಾತಿ ಅಧಿಸೂಚನೆ ಸಂಪೂರ್ಣ ಗೊಂದಲಕಾರಿಯಾಗಿದೆ. ಪೇಪರ್ 2 ಹಾಗೂ 3ರಲ್ಲಿ ಅನುಕ್ರಮವಾಗಿ ಶೇ.50 ಹಾಗೂ 60 ರಷ್ಟು ಅಂಕಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕೆಂಬ ನಿಯಮವಿದೆ. ಆದರೂ ಪರಿಶಿಷ್ಟ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ರಿಯಾಯ್ತಿ ನೀಡಿಲ್ಲ. ಈ ವರ್ಗದವರಿಗೆ
ಮೀಸಲಾತಿಯಿಂದ ವಂಚಿಸಲಾಗಿದೆ ಎಂದರು.
ವಿವರಣಾತ್ಮಕ ಪರೀಕ್ಷೆ ನಡೆಸುವುದರಿಂದ ಸರಿಯಾದ ಮೌಲ್ಯಮಾಪನ ಸಾಧ್ಯವಿಲ್ಲ. ಯಾವುದೇ ಒಬ್ಬ ಮೌಲ್ಯಮಾಪಕ ಎಲ್ಲ ವಿಷಯದಲ್ಲಿಯೂ ಪರಿಣಿತಿ ಹೊಂದಿರುವುದಿಲ್ಲ. ಇದು ಭ್ರಷ್ಟಾಚಾರಕ್ಕೆ ಆಸ್ಪದ ನೀಡುತ್ತದೆ. ಪದವಿಯಲ್ಲಿ ಸಮಾಜಶಾಸ್ತ್ರ ವಿಷಯ ತೆಗೆದುಕೊಂಡವರಿಗೆ ನೇಮಕಾತಿಯಲ್ಲಿ ಅವಕಾಶ ಕಲ್ಪಿಸಬೇಕೆಂದರು. ಬಿ.ಕಾಂ., ಬಿಇಡಿ ಮಾಡಿದವರಿಗೂ ನೇಮಕಾತಿ ಯಲ್ಲಿ ಅವಕಾಶ ಕಲ್ಪಿಸಬೇಕು. ಇಲ್ಲವಾದರೆ ಅವರು ಬಿಇಡಿ ಮಾಡಿದ್ದು ವ್ಯರ್ಥವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ ಅವರು ಪದವಿಯಲ್ಲಿ ಪ್ರತಿ ವಿಷಯಕ್ಕೆ ಶೇ.50 ಅಂಕ ಪಡೆದಿರುವ ನಿಯಮ ಕೈಬಿಡಬೇಕು ಎಂದರು.
ಸಿಬಿಝಡ್, ಹಿಂದಿ, ಕನ್ನಡ, ದೈಹಿಕ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು, ಅರ್ಜಿ ಸಲ್ಲಿಸುವಾಗ ಸಾಮಾನ್ಯ ವರ್ಗದವರಿಗೆ ಸಾವಿರ ರೂ.ಗಳ ಶುಲ್ಕ ಮತ್ತು ಪ.ಜಾತಿ ಮತ್ತು ಪ.ವರ್ಗದವರಿಗೆ 500 ರೂ.ಗಳ ಶುಲ್ಕವಿದ್ದು, ಗ್ರಾಮೀಣ ಬಡ ಅಭ್ಯರ್ಥಿಗಳಿಗೆ ಹೊರೆಯಾಗುತ್ತಿದ್ದು, ಶುಲ್ಕ ಕಡಿಮೆ ಮಾಡಲು ಒತ್ತಾಯಿಸಿದರು.
ಪದವಿಯಲ್ಲಿ ಗಣಿತಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಕಂಪ್ಯೂಟರ್, ಇಲೆಕ್ಟ್ರಾನಿಕ್ಸ್, ಜೀವಶಾಸ್ತ್ರ ವಿಷಯಗಳಲ್ಲಿ ಅಧ್ಯಯನ ಮಾಡಿದವರಿಗೆ ನೇಮಕಾತಿಯಲ್ಲಿ ಅವಕಾಶ ಕಲ್ಪಿಸುವಂತೆ, ಅರ್ಜಿ ಯಾವ ಜಿಲ್ಲೆಗೆ ಸಲ್ಲಿಸಿದರೂ ಕೂಡ ಸ್ವತಃ ಅಭ್ಯರ್ಥಿ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು, ಡಿಇಡಿ ಮುಗಿಸಿ ಟಿಇಟಿ ಪೇಪರ್ ಒಂದನೇ ಅರ್ಹತೆ ಪಡೆದ ವಿದ್ಯಾರ್ಥಿಗಳಿಗೆ ಒಂದರಿಂದ 5 ನೇ ತರಗತಿ ವರೆಗೆ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಆದೇಶ ಹೊರಡಿಸಲು ಆಗ್ರಹಿಸಿದ ಅವರು ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದುದರು. ಪ್ರತಿಭಟನೆಯಲ್ಲಿ ಸಂಚಾಲಕ ಎನ್. ಎಸ್.ಹಿರೇಮಠ, ಮಂಜುನಾಥ ಆರ್.ಎಸ್., ಗುಂಡಪ್ಪ ಓಕಳಿ ಹಾಗೂ ಇತರರಿದ್ದರು.