ಮುಳಗುಂದ: ವೈಯಕ್ತಿಕ ವಿಷಯಕ್ಕೆ ಹಲವು ದಿನಗಳಿಂದ ಶಿಕ್ಷಕಿಯರ ಮಧ್ಯೆ ನಡೆಯುತ್ತಿದ್ದ ಕಲಹದಿಂದ ಬೇಸತ್ತ ಪೋಷಕರು ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆಗೆ ಮಂಗಳವಾರ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಶಿಕ್ಷಕಿಯರಿಬ್ಬರು ವೈಯಕ್ತಿಕ ಕಲಹದಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಇದರಿಂದ ಕಲಿಕೆಯಲ್ಲಿ ಹಿಂದುಳಿಯುವಂತಾಗಿದೆ. ಶಾಲೆಯಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಪರಸ್ಪರ ಕಿತ್ತಾಡುತ್ತಿರುವ ಶಿಕ್ಷಕಿಯರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ನ.30ರಂದು ವೈಯಕ್ತಿಕವಾಗಿದ್ದ ಕಲಹ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ಇಬ್ಬರನ್ನೂ ಸಮಾಧಾನಪಡಿಸಲು ಹೋದ ಶಿಕ್ಷಕಿಯೊಬ್ಬರಿಗೆ ಗಾಯವಾಗಿದೆ. ಇದು ಶಿಕ್ಷಣ ಇಲಾಖಾಧಿಕಾರಿಗಳ ಗಮನಕ್ಕೂ ಬಂದಿದೆ. ಇಲ್ಲಿ ನಡೆದಿರುವ ಘಟನೆಯನ್ನು ಲಿಖಿತವಾಗಿ ಶಿಕ್ಷಕಿಯೊಬ್ಬರು ಮೇಲಧಿಕಾರಿಗಳಿಗೆ ದೂರು ನೀಡಿದ್ದಾರೆ. ಕೆಲ ಅಧಿಕಾರಿಗಳು ಬಂದು ವಿಚಾರಣೆ ನಡೆಸಿದರೂ ಶಿಕ್ಷಕರ ವಿರುದ್ಧ ಕ್ರಮ ಕೈಗೊಂಡಿಲ್ಲ. ಹೀಗಾಗಿ ಶಾಲೆಗೆ ಬೀಗ ಜಡಿದು ಪ್ರತಿಭಟಿಸಲಾಗುತ್ತಿದೆ ಎಂದು ಪಾಲಕರು ಹಾಗೂ ಮುಸ್ಲಿಂ ಸಮಾಜದ ಪ್ರಮುಖರು ತಿಳಿಸಿದರು.
ಮುಖ್ಯಶಿಕ್ಷಕರು ಇಷ್ಟೆಲ್ಲ ಅವಾಂತರ ನಡೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಶಿಕ್ಷಕಿಯರ ಮಧ್ಯೆ ಯಾವುದೇ ಕಲಹವಿದ್ದರೂ ಶಾಲಾ ಅವಧಿಯಲ್ಲಿ ತೋರದೇ ಮಕ್ಕಳ ಕಲಿಕೆಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು. ಸ್ಥಳಕ್ಕೆ ಆಗಮಿಸಿದ ದೈಹಿಕ ಶಿಕ್ಷಣಾಧಿಕಾರಿ ಸಜ್ಜನ್ ಅವರು ಶಾಲೆಯಲ್ಲಿ ಉಂಟಾದ ಬೆಳವಣಿಗೆ ಕುರಿತು ವಿಚಾರಣೆ ನಡೆಸಿ ತಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪತಿಭಟನಾಕಾರರು ಶಾಲೆ ಬೀಗ ತೆರೆಯಲು ಒಪ್ಪಿಗೆ ನೀಡಿದರು.
ಶಿಕ್ಷಕಿಯರು ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಮಾಡಿ ಮೇಲಧಿಕಾರಿಗಳಿಗೆ ದೂರು ನೀಡುತ್ತಿದ್ದಾರೆ. ತರಗತಿಗಳು ನಡೆಯುವ ಅವಧಿಯಲ್ಲಿ ಶಿಕ್ಷಕಿಯರು ವಾಗ್ವಾದ ನಡೆಸುವುದು ತರವಲ್ಲ. ಇದು ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ತಪ್ಪು ಮಾಡಿರುವ ಶಿಕ್ಷಕಿಯರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು.
ತಾಜುದ್ದೀನ್ ಕಿಂಡ್ರಿ,
ಮುಸ್ಲಿಂ ಸಮುದಾಯದ ಮುಖಂಡ