Advertisement

ಶಿಕ್ಷಕರ ಹೋರಾಟ ಹಕ್ಕು ಕಸಿಯುವ ವಿಧೇಯಕಕ್ಕೆ ಆಕ್ಷೇಪ

12:05 PM Feb 16, 2017 | Team Udayavani |

ಬೆಂಗಳೂರು: ಬೇಡಿಕೆಗಳ ಈಡೇರಿಕೆಗಾಗಿ ಶಿಕ್ಷಕರು, ಉಪನ್ಯಾಸಕರು ಪರೀಕ್ಷೆ ಮತ್ತು ಮೌಲ್ಯಮಾಪನದ ಸಂದರ್ಭದಲ್ಲಿ ಕರ್ತವ್ಯ ಬಹಿಷ್ಕರಿಸಿ ಹೋರಾಟಕ್ಕಿಳಿಯುವುದನ್ನು ತಡೆಯಲು ರಾಜ್ಯ ಸರ್ಕಾರ ಸಿದ್ದಪಡಿಸಿರುವ “ಕರ್ನಾಟಕ ಶಿಕ್ಷಣ (ತಿದ್ದುಪಡಿ) ವಿಧೇಯಕ 2017’ಕ್ಕೆ ರಾಜ್ಯ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರು ಮತ್ತು ಉಪನ್ಯಾಸಕರ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

Advertisement

“ಮೌಲ್ಯಮಾಪನ ಬಹಿಷ್ಕರಿಸುವ ಸಂದರ್ಭದಲ್ಲಿ ಶಿಕ್ಷಕರನ್ನು ಬೆಂಬಲಿಸುವ ಜನಪ್ರತಿನಿಧಿಗಳು ಮತ್ತು ಶಿಕ್ಷಕರ ಸಂಘಟನೆಗಳ ಪ್ರತಿನಿಧಿಗಳಿಗೆ ಜೈಲು ಸಜೆ’ ವಿಧಿಸುವ ಅಂಶವನ್ನು ತಿದ್ದುಪಡಿ ವಿಧೇಯಕ ಒಳಗೊಂಡಿದೆ. ಇದು ಶಿಕ್ಷಕರ ಹೋರಾಟದ ದಮನನೀತಿಯಾಗಿದ್ದು, ಇದನ್ನು ಎರಡೂ ಸಂಘಗಳು ತೀವ್ರವಾಗಿ ಖಂಡಿಸಿವೆ. 

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ವಿಧಾನ ಪರಿಷತ್‌ ಸದಸ್ಯರೂ ಆದ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರ ಸಂಘದ ಅಧ್ಯಕ್ಷ ಕೆ.ಟಿ.ಶ್ರೀಕಂಠೇಗೌಡ ಮತ್ತು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ, “ವೇತನ ತಾರತಮ್ಯ ಸೇರಿದಂತೆ ತಮಗಾಗಿರುವ ಅನ್ಯಾಯ ಸರಿಪಡಿಸುವಂತೆ 1998ರಿಂದ ಪಿಯು ಕಾಲೇಜು ಪ್ರಾಚಾರ್ಯರು ಮತ್ತು ಉಪನ್ಯಾಸಕರು ಹೋರಾಟ ಮಾಡಿಕೊಂಡು ಬಂದಿದ್ದಾರೆ.

ಹಿಂದೆ ಇದೇ ವಿಚಾರಕ್ಕಾಗಿ ಮೌಲ್ಯಮಾಪನ ಬಹಿಷ್ಕರಿಸಿ ಹೋರಾಟಕ್ಕಿಳಿದಾಗ “ಎಸಾ’ ಜಾರಿ ಮಾಡಿ ಸರ್ಕಾರ ದಮನ ನೀತಿ ಅನುಸರಿಸಿತ್ತು. ಕಳೆದ ವರ್ಷ ಕೂಡ ಮೌಲ್ಯಮಾಪನ ಬಹಿಷ್ಕರಿಸಿದಾಗ ಸುಳ್ಳು ಭರವಸೆ ನೀಡಿ ಮೌಲ್ಯಮಾಪನಕ್ಕೆ ಹಾಜರಾಗುವಂತೆ ಮಾಡ ಲಾಗಿತ್ತು. ಈವರೆಗೂ ಕೊಟ್ಟ ಭರವಸೆ ಈಡೇರದ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಪರೀಕ್ಷೆ ನಂತರ ಮೌಲ್ಯಮಾಪನ ಬಹಿಷ್ಕರಿಸಲು ಸಂಘಗಳು ನಿರ್ಧಾರ ಕೈಗೊಂಡಿದ್ದವು.

ಇದೀಗ ಸರ್ಕಾರ ದಿಢೀರನೆ ನಮ್ಮ ಹೋರಾಟ ಹತ್ತಿಕ್ಕಲು ಪೂರಕ ವಿಧೇಯಕ ಸಿದ್ಧಪಡಿಸಿ ಅಧಿವೇಶನದಲ್ಲಿ ಒಪ್ಪಿಗೆ ಪಡೆಯಲು ಪ್ರಯತ್ನಿಸಿರುವುದು ಶಿಕ್ಷಕ ಸಮುದಾಯಕ್ಕೆ ಮಾಡಿದ ಅಪಮಾನ,” ಎಂದು ವ್ಯಾಖ್ಯಾನಿಸಿದ್ದಾರೆ. 

Advertisement

ಮಂಗಳವಾರ ಅಂತ್ಯಗೊಂಡ ರಾಜ್ಯ ವಿಧಾನಮಂಡಲದ ಅಧಿವೇಶನದಲ್ಲಿ ವಿಧಾನ ಪರಿಷತ್‌ ಸದಸ್ಯರ ವಿರೋಧದ ಹಿನ್ನೆಲೆಯಲ್ಲಿ ಈ ವಿಧೇಯಕ ಮಂಡನೆ ಮುಂದೂಡಲ್ಪಟ್ಟಿದೆ. ಸರ್ಕಾರ ಯಾವುದೇ ಕಾರಣಕ್ಕೂ ಮುಂದಿನ ಅಧಿವೇಶನದಲ್ಲೂ ಈ ವಿಧೇಯಕ ಮಂಡಿಸಬಾರದು. ಸೌಹಾರ್ದಯುತ ಮಾತುಕತೆ ಮೂಲಕ ನಮ್ಮ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಉಭಯ ಸಂಘಗಳ ಅಧ್ಯಕ್ಷರು ಆಗ್ರಹಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next