Advertisement

Teacher’s Day Special: ಗುರು-ಶಿಷ್ಯ ಸಂಬಂಧ: ನೆನಪುಗಳೇ ಮಧುರ

10:46 PM Sep 04, 2024 | Team Udayavani |

ಹಳ್ಳಿಯಲ್ಲಿ ನಿಮ್ಮ ಶಿಕ್ಷಕರ ಮನೆಯನ್ನು ಹುಡುಕಬೇಕೇ? ನೀವು ಇಂಥ ಹೆಸರಿನ ಶಿಕ್ಷಕರ ಮನೆ ಎಂದರೆ ಅವರಿಗೆ ಸ್ವಲ್ಪ ಗೊಂದಲ. ಒಂದಿಷ್ಟು ಹೊತ್ತು ಯೋಚಿಸಿ ಉತ್ತರಿಸುತ್ತಾರೆ. ಈಗ ಗೊತ್ತಾಯ್ತು, ನಮ್ಮ ಮಾಷ್ಟ್ರ ಮನೆಗೆ ಹೋಗಬೇಕಾ? ಅಲ್ಲಿನ ಜನರು ಶಿಕ್ಷಕರನ್ನು ಮಾಷ್ಟ್ರು ಎಂದು ಕರೆಯುವುದೇ ಹೆಚ್ಚು. ಹೆಸರಿನ ಮುಂದೆ ಯೂ ಮಾಷ್ಟ್ರು ಎಂಬ ಗೌರವ ಸೇರಿಸಿಯೇ ಅವರನ್ನು ಕರೆಯುವುದು ಹಿಂದಿನಿಂದ ನಡೆದು ಬಂದ ಪದ್ಧತಿ. ಅವರು ಸೇವೆಯಲ್ಲಿರಲಿ ಅಥವಾ ನಿವೃತ್ತರಾಗಿರಲಿ. ಜನರ ಪಾಲಿಗೆ ಮಾಷ್ಟ್ರು. ಹೀಗೆ ಕರೆಯುವುದರಲ್ಲಿಯೇ ಖುಷಿ.

Advertisement

ಗುರು ಹಾಗೂ ಶಿಕ್ಷಕ ಸಂಬಂಧ ಭಾವನಾತ್ಮಕವಾದುದು. ಕೆಲವೊಮ್ಮೆ ಮನೆಯವರ ಮಾತಿಗಿಂತ ಗುರುಗಳ ಮಾತಿಗೆ ವಿಶೇಷ ಮನ್ನಣೆ. ಮನೆಯಲ್ಲಿ ಮಾತು ಕೇಳದ ಮಕ್ಕಳನ್ನು ಹಿಂದೆ ಮಾಷ್ಟ್ರ ಹತ್ತಿರ ಹೇಳ್ತೇನೆ, ಅವರೇ ಸರಿಯಾಗಿ ಬುದ್ಧಿ ಕಲಿಸ್ತಾರೆ ಎಂದೆಲ್ಲ ಹೆದರಿಸುತ್ತಿದ್ದರು. ಈ ಮಕ್ಕಳೂ ಮಾಷ್ಟ್ರ ಮಾತಿಗೆ ಮನ್ನಣೆ ನೀಡುತ್ತಿದ್ದರು. ನಮ್ಮ ಮಗನಿಗೆ ಸ್ವಲ್ಪ ಬುದ್ಧಿ ಹೇಳಿ ಮಾಷ್ಟ್ರೆ. ಏನ್‌ ಮಾಡೋದು ಅಂತ ಗೊತ್ತಾಗುವುದಿಲ್ಲ. ಚೇಷ್ಟೆ ಅಂದ್ರೆ ಚೇಷ್ಟೆ. ಪಾಠ ಮಾಡುವುದರೊಂದಿಗೆ ಮಗನನ್ನು ಕರೆಸಿ ಬುದ್ಧಿ ಹೇಳಿ ತಿದ್ದುವ ಹೊಣೆಯೂ ಮಾಷ್ಟ್ರ ಮೇಲೆ. ಮಾಷ್ಟ್ರು ಮತ್ತು ಮಕ್ಕಳ ನಡುವಿನ ಈ ಸಂಬಂಧ ಎಷ್ಟು ಆಳವಾಗಿರುತ್ತದೆಂದರೆ ಮಾಷ್ಟ್ರು ಏನೇ ಹೇಳಿದರೂ ಮಕ್ಕಳಿಗೆ ಅದು ವೇದವಾಕ್ಯ. ಕೆಲವು ಮನೆಗಳಲ್ಲಿ ಶಾಲೆಗೆ ಬರುವ ಮಗುವಿನ ತಂದೆ ಶಿಕ್ಷಕನಾಗಿರುತ್ತಾನೆ. ಮಗುವಿಗೆ ಮನೆಯಲ್ಲಿ ತಂದೆಯಿಂದ ಪಾಠ. ತರಗತಿಯಲ್ಲಿ ಶಿಕ್ಷಕರು ಹೇಳಿದುದಕ್ಕಿಂತ ಭಿನ್ನವಾಗಿ ತಂದೆಯ ಪಾಠವಿದ್ದರೆ ಮಗು ಅದನ್ನು ಸುಲಭವಾಗಿ ಒಪ್ಪುವುದಿಲ್ಲ. ಕೊನೆಗೂ ಆ ಶಿಕ್ಷಕರೇ ಅದನ್ನು ಸರಿಪಡಿಸಿ ಹೇಳಿದಾಗ ಒಪ್ಪಿಗೆ. ಎಷ್ಟೋ ಜನ ಶಿಕ್ಷಕರೂ ತಮ್ಮ ವಿದ್ಯಾರ್ಥಿಗಳನ್ನು ಮಗೂ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಮಾಷ್ಟ್ರು ಎಂದರೆ ಹಿಂದೆಲ್ಲ ಭಯ. ಅವರ ಎದುರು ಬರಲೂ ಭಯ. ಆ ಕಾಲದಲ್ಲಿ ಮಾಷ್ಟ್ರ ಪೆಟ್ಟಿನ ರುಚಿಯೂ ಹಾಗಿತ್ತು. ಹೆತ್ತವರಿಗೂ ಮಾಷ್ಟ್ರ ಮೇಲೆ ನಂಬಿಕೆ. ಹಾಗಾಗಿ ಮನೆಗೆ ಬಂದು ದೂರು ಸಲ್ಲಿಸಿದರೂ ಮನೆಯವರು ಅದಕ್ಕೆ ಸೊಪ್ಪು ಹಾಕುತ್ತಿರಲಿಲ್ಲ. ಇನ್ನೂ ಎರಡು ಪೆಟ್ಟು ಜಾಸ್ತಿ ಹೊಡೆಯಲು ಹೇಳುತ್ತೇನೆ ಎನ್ನುತ್ತಿದ್ದರು. ಈ ಪೆಟ್ಟಿನ ರುಚಿಯನ್ನು ದಿನಾ ಅನುಭವಿಸಿದರೂ ಮಾಷ್ಟ್ರ ಬಗ್ಗೆ ಗೌರವ ಕಡಿಮೆಯಾಗುತ್ತಿರಲಿಲ್ಲ. ಓದು ಮುಗಿಯಿತು. ಕೆಲಸವೂ ಸಿಕ್ಕಿತು. ಮದುವೆಯೂ ಆಯಿತು. ಬದುಕಿನ ಈ ಓಟದ ನಡುವೆ ಕಲಿಸಿದ ಶಿಕ್ಷಕರ ನೆನಪು ಮಾತ್ರ ಮಾಸುವುದೇ ಇಲ್ಲ. ಕಲಿಸಿದ ಮಾಷ್ಟ್ರು ಅಪರೂಪಕ್ಕೆ ಸಿಕ್ಕಿದರೆ ಸಾಕು. ಅಷ್ಟು ಖುಷಿ.

ವೃತ್ತಿಯಿಂದ ನಿವೃತ್ತರಾದರೂ ಗುರು ಹಾಗೂ ಶಿಷ್ಯರ ಭಾವನಾತ್ಮಕ ಸಂಬಂಧಕ್ಕೆ ನಿವೃತ್ತಿ ಇಲ್ಲ. ಒಮ್ಮೆ ಶಿಕ್ಷಕರೋರ್ವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿ ದ್ದರು. ರಸ್ತೆಯ ಬದಿಯ ಅಂಗಡಿ. ಅಲ್ಲಿ ಭಾರೀ ಗದ್ದಲ. ಮಾತು ಮುಂದುವರಿದು ಒಬ್ಬರ ಮೇಲೊಬ್ಬರು ಕೈ ಮಾಡುವ ಹಂತಕ್ಕೆ ತಲುಪಿತು. ಇದನ್ನು ಕಂಡ ಮಾಷ್ಟ್ರು ಮಧ್ಯ ಪ್ರವೇಶಿಸಿದರು. ಆ ಯುವಕನನ್ನು ಸಮಾಧಾನ ಪಡಿಸಿದರು. ಆತನ ಜಗಳದ ಕೊನೆಯ ಮಾತು ಹೀಗಿತ್ತು. ಅವರು ನನಗೆ ಗುರುಗಳಾಗಿದ್ದವರು. ಅವರ ಮಾತಿಗೆ ಮನ್ನಣೆ ಕೊಟ್ಟು ಸುಮ್ಮನಾದೆ. ಗುರುಗಳಿಗೆ ಆನಂದ. ಅಲ್ಲಿಯೇ ಶಿಷ್ಯನಿಗೆ ಒಂದಿಷ್ಟು ಉಪದೇಶ ಮಾಡಿ ತೆರಳಿದರು. ಎಸ್‌. ನಿಜಲಿಂಗಪ್ಪನವರು ಡಾ| ರಾಧಾಕೃಷ್ಣನ್‌ ಅವರ ಬಗ್ಗೆ ಹೇಳುವ ಮಾತು ಗಮನಾರ್ಹ. ಡಾ| ರಾಧಾಕೃಷ್ಣನ್‌ ಅವರಿಗೆ ಕೆಲವು ವರ್ಷಗಳ ತನಕವೂ ಅವರ ಶಿಷ್ಯರ ಹೆಸರು ನೆನಪಿರುತ್ತಿತ್ತಂತೆ. ನಮ್ಮ ನಡುವೆಯೂ ಕೆಲವು ಶಿಕ್ಷಕರಿರಬಹುದು. ಎಷ್ಟೋ ವರ್ಷಗಳಾದ ಮೇಲೆ ತಾನು ಕಲಿಸಿದ ಶಿಷ್ಯನು ಎದುರಾದರೆ ಅವರೇ ಆತನ ಹೆಸರನ್ನು ಹೇಳಿ ಮಾತನಾಡಿಸುತ್ತಾರೆ. ತಮಗೆ ಕಲಿಸಿದ ಗುರುಗಳು ಎದುರಾದಾಗ ಅಪರಿಚಿತರಂತೆ ಕಾಣುವ, ಕನಿಷ್ಠ ನಮಸ್ಕಾರ ಹೇಳುವ ಸೌಜನ್ಯವಿಲ್ಲದ ಶಿಷ್ಯರೂ ಇರಬಹುದು. ಸಮಾಜ ಹಾಗೂ ಶಿಷ್ಯರ ದೃಷ್ಟಿಯಲ್ಲಿ ಗುರುವೂ ಲಘುವಾಗಬಾರದು.

ಅಲ್ಲಮಪ್ರಭು ಬೇರೆ ಬೇರೆ ಯುಗದಲ್ಲಿನ ಗುರು ಹಾಗೂ ಶಿಷ್ಯರ ಸಂಬಂಧವನ್ನು ತಮ್ಮ ವಚನವೊಂದರಲ್ಲಿ ಹೇಳುತ್ತಾ ಕಲಿಯುಗದಲ್ಲಿ ಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದ ಎಂದನಯ್ನಾ. ಗುಹೇಶ್ವರಾ ನಿಮ್ಮ ಕಾಲದ ಕಟ್ಟಲೆಯ ಕಲಿತನಕ್ಕೆ ನಾ ಬೆರಗಾದೆ. ಇಂದಿನ ಬದಲಾದ ಪರಿಸ್ಥಿತಿಯಲ್ಲಿ ಕಲಿಯುವಿಕೆ ವಿದ್ಯಾರ್ಥಿಗಳಿಗೊಂದು ಸವಾಲಾದರೆ, ಕಲಿಸುವಿಕೆ ಶಿಕ್ಷಕರಿಗೊಂದು ಸವಾಲು. ಹಿರಿಯ ಶಿಕ್ಷಕರೊಬ್ಬರ ಅನುಭವದ ಮಾತು. ನಿಮ್ಮ ವಿದ್ಯಾರ್ಥಿಗಳನ್ನು ನಿಮ್ಮ ಮಕ್ಕಳಂತೆ ಪ್ರೀತಿಸಿ. ಅತಿಯಾದ ಸಲುಗೆ ಅಥವಾ ಬಿಗುತನ ಬೇಡ. ಆ ಪ್ರೀತಿ ನಿಮ್ಮೊಳಗೆ ಆಳವಾಗಿರಲಿ. ವಿದ್ಯಾರ್ಥಿಗಳಿಗೆ ಇದು ಅರ್ಥವಾದರೆ ತರಗತಿ ನಿಯಂತ್ರಣ ಸುಲಭ. ಶಿಕ್ಷಕ ದಿನಾಚರಣೆಯ ಶುಭಸಂದರ್ಭದಲ್ಲಿ ನಮಗೆ ಕಲಿಸಿದ ಶಿಕ್ಷಕರನ್ನು ಸ್ಮರಿಸೋಣ.

– ಡಾ| ಶ್ರೀಕಾಂತ್‌, ಸಿದ್ದಾಪುರ

Advertisement
Advertisement

Udayavani is now on Telegram. Click here to join our channel and stay updated with the latest news.

Next