Advertisement

ವಸತಿ ಪ್ರದೇಶಕ್ಕೆ ತೆರಳಿ ಮಕ್ಕಳ ಕಲಿಕೆಗೆ ಶ್ರಮಿಸುತ್ತಿರುವ ಶಿಕ್ಷಕರು ಅಭಿನಂದನಾರ್ಹ‌ರು

11:49 AM Sep 05, 2020 | sudhir |

ಶಾಲೆಯಲ್ಲಿ ಕುಳಿತು ರಜೆಗಾಗಿ ಹಂಬಲಿಸುತ್ತಿದ್ದ ಮಕ್ಕಳು ಈಗ ಶಾಲೆ ಪ್ರಾರಂಭ ಯಾವಾಗ ಎಂದು ಕಾಯುವ ಪರಿಸ್ಥಿತಿ ತಂದೊಡ್ಡಿದೆ ಕೋವಿಡ್‌ 19. ಮಕ್ಕಳ ಕಲರವವಿಲ್ಲದೆ ಭಣಗುಟ್ಟುವ ಶಾಲೆಯಲ್ಲಿ ಕುಳಿತು ತಂತ್ರಜ್ಞಾನ ಮೂಲಕ ಮಕ್ಕಳಿಗೆ ಶಿಕ್ಷಣ ಒದಗಿಸುವ ಪ್ರಯತ್ನ ಶಿಕ್ಷಕರದು.

Advertisement

ಮಕ್ಕಳಿಗೆ ಮೊಬೈಲ್‌ ಕೊಡಬೇಡಿ, ಟಿವಿ ನೋಡಬೇಡಿ ಎನ್ನುತ್ತಿದ್ದ ಶಿಕ್ಷಕರೇ ಇಂದು ಕಲಿಕಾ ಸಾಮಗ್ರಿಗಳಾಗಿ ಮಕ್ಕಳಿಗೆ ಮೊಬೈಲ್‌, ದೂರದರ್ಶನ ವ್ಯವಸ್ಥೆ ಮಾಡಿ ಎಂದು ಪೋಷಕರಲ್ಲಿ ವಿನಂತಿ ಮಾಡಬೇಕಾದ ಸಂದರ್ಭ ಬಂದಿರುವುದು ವಿಪರ್ಯಾಸ. ಪೋಷಕರಿಗೆ ಮಕ್ಕಳ ಕಲಿಕೆಯ ಕಡೆಗೆ ಗಮನ ಕೊಡುವುದರ ಜೊತೆಗೆ ಮೊಬೈಲ್‌ ಹಿಡಿದ ಮಕ್ಕಳು ವೀಡಿಯೊ ಗೇಮ್‌, ಇಂಟರ್‌ ನೆಟ್‌, ಸಾಮಾಜಿಕ ಜಾಲತಾಣಗಳ ಪ್ರಭಾವಕ್ಕೆ ಒಳಗಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಹೆಗಲೇರಿದೆ.

ನಿನ್ನೆ ಮೊನ್ನೆಯ ತನಕ ವಾಟ್ಸ್‌ಪ್‌ನಲ್ಲಿ ಸಂದೇಶ ಕಳಿಸಲು, ಮೊಬೈಲ್‌ನಲ್ಲಿ ಫೋಟೋ ತೆಗೆದು ಕಳಿಸಲು ಕಷ್ಟಪಡುತ್ತಿದ್ದ ಶಿಕ್ಷಕರು ಇಂದು ಮೊಬೈಲ್‌ ಮೂಲಕ ಆಡಿಯೋ, ವೀಡಿಯೋ ರೆಕಾರ್ಡ್‌ ಮಾಡಿ ಕಳಿಸುವುದು, ಆನ್‌ ಲೈನ್‌ ಪಾಠ, ವೆಬಿನಾರ್‌ಗಳಲ್ಲಿ ಭಾಗವಹಿಸುವುದು, ಮೊಬೈಲ್‌ ಮೂಲಕವೇ ಮಕ್ಕಳ ಕಲಿಕೆಗೆ ಪೂರಕ ವಿವಿಧ ವಿಧಾನ ಅಳವಡಿಸುವುದು ಮೊದಲಾದವುಗಳನ್ನು ಕರಗತ ಮಾಡಿಕೊಂಡಿದ್ದಾರೆ. ಕೋವಿಡ್‌ ಸಂಕಷ್ಟ ಶಿಕ್ಷಕರಿಗೆ ತಂತ್ರಜ್ಞಾನ ಆಧಾರಿತ ಶಿಕ್ಷಣ ನೀಡುವಲ್ಲಿ ಪರಿಣತಿ ಹೊಂದುವಂತೆ ಮಾಡಿರುವುದು ಧನಾತ್ಮಕ ಬೆಳವಣಿಗೆ. ವಿದ್ಯಾಗಮ ಯೋಜನೆಯಡಿ ಮೊಬೈಲ್‌, ಟಿವಿ ಮೊದಲಾದ ಯಾವುದೇ ಸಾಧನಗಳಿಲ್ಲದ ವಿದ್ಯಾರ್ಥಿಗಳ ವಸತಿ ಪ್ರದೇಶಕ್ಕೆ ಹೋಗಿ ಮಕ್ಕಳ ಕಲಿಕೆ ನಿರಂತರವಾಗಿರುವಂತೆ ಶ್ರಮಿಸುತ್ತಿರುವ ಶಿಕ್ಷಕರು ನಿಜಕ್ಕೂ ಅಭಿನಂದನಾರ್ಹ‌ರು.

ಬಿಡುವಿಲ್ಲದ ಪಾಠ ಪ್ರವಚನ, ಮಧ್ಯೆ ಆಟೋಟ, ಸ್ನೇಹಿತರೊಂದಿಗೆ ಹರಟೆ, ಕೀಟಲೆ, ಜಗಳ, ಬಿಸಿಯೂಟ ಇವುಗಳಿಂದ ವಂಚಿತರಾದ ಮಕ್ಕಳಿಗೆ ಶಾಲಾ ಶಿಕ್ಷಣದ ಮಹತ್ವ ಅರಿವಾಗಿರಬೇಕು. ಮಕ್ಕಳ ದೈಹಿಕ, ಮಾನಸಿಕ, ಬೌದ್ಧಿಕ ವಿಕಸನ, ಜೀವನದಲ್ಲಿ ಪರಸ್ಪರ ಸಹಕಾರ, ಸಹಬಾಳ್ವೆ, ವಿವಿಧ ಕೌಟುಂಬಿಕ ಪರಿಸರದಿಂದ ಬಂದ ಮಕ್ಕಳೊಂದಿಗೆ ಹೊಂದಾಣಿಕೆಯ ಮನೋಭಾವ ಇವೆಲ್ಲವೂ ಶಾಲಾ ಶಿಕ್ಷಣದಲ್ಲಿ ಕಲಿಕೆಯ ಜೊತೆಜೊತೆಗೆ ನಡೆಯುತ್ತದೆೆ. ಆರೋಗ್ಯಕರ ಸ್ಪರ್ಧೆ ಮಕ್ಕಳಲ್ಲಿ ಕಲಿಕೆಯ ಉತ್ಸಾಹ ಹೆಚ್ಚಿಸುತ್ತದೆ. ಶಿಕ್ಷಕ – ವಿದ್ಯಾರ್ಥಿಗಳ ನಡುವೆ ಗೌರವ, ಭಯ ಮಿಶ್ರಿತ ಆತ್ಮೀಯ ಭಾವಬಂಧ ಬೆಳೆಯುತ್ತದೆ. ಆದುದರಿಂದ ಕೋವಿಡ್‌ 19 ನಿಯಂತ್ರಿಸುವಲ್ಲಿ ಯಶಸ್ಸು ದೊರೆತು ಜನಜೀವನ, ಶಾಲಾಜೀವನ ಎಂದಿನಂತಾಗಲಿ, ಮಕ್ಕಳ ಚಿಲಿಪಿಲಿ ಶಾಲೆ ಶಾಲೆಗಳಲ್ಲಿ ಅನುರಣಿಸಲಿ ಎಂಬುದೇ ನಮ್ಮೆಲ್ಲರ ಹಾರೈಕೆ.

– ನಿರ್ಮಲ ಬಿ
ಮುಖ್ಯೋಪಾಧ್ಯಾಯಿನಿ . ಸರಕಾರಿ ಸಂಯುಕ್ತ ಪ್ರೌಢಶಾಲೆ, ವಳಕಾಡು, ಉಡುಪಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next